ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿತ್ತನೆ ಬೀಜ ಸಹಾಯಧನ ಹೆಚ್ಚಳಕ್ಕೆ ರೈತರ ಆಗ್ರಹ

Published 17 ಜೂನ್ 2024, 15:59 IST
Last Updated 17 ಜೂನ್ 2024, 15:59 IST
ಅಕ್ಷರ ಗಾತ್ರ

ಅಫಜಲಪುರ: ಸರ್ಕಾರ ಮುಂಗಾರು ಹಂಗಾಮಿನ ಬಿತ್ತನೆ ಬೀಜದ ಸಹಾಯಧನ ಹೆಚ್ಚಳ ಮಾಡಬೇಕು. ಎರಡು ವರ್ಷಗಳಿಂದ ಮಳೆಯಿಲ್ಲದೆ ಕಂಗಲಾಗಿರುವ ರೈತರಿಗೆ ದುಬಾರಿ ಬೆಲೆ ನೀಡಿ, ಬಿತ್ತನೆ ಬೀಜ ಖರೀದಿಸುವುದು ಕಷ್ಟವಾಗುತ್ತಿದೆ. ಖಾಸಗಿ ಅಗ್ರೋ ಕೇಂದ್ರದಲ್ಲಿ ದೊರೆಯುವ ಬಿತ್ತನೆ ಬೀಜದ ಅರ್ಧದಷ್ಟು ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬಿತ್ತನೆ ಬೀಜ ದೊರೆಯಬೇಕು’ ಎಂದು ಬೀಜ ಖರೀದಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಬಂದ ರೈತರು ಸರಕಾರಕ್ಕೆ ಒತ್ತಾಯಿಸಿದರು.

ರೈತ ಮುಖಂಡ ಬಸವರಾಜ ಚಾಂದಕೋಟೆ ಮಾತನಾಡಿ, ‘ರೈತರು ದುಬಾರಿ ಬೆಲೆ ನೀಡಿ ಬಿತ್ತನೆ ಬೀಜ ಖರೀದಿ ಮಾಡುತ್ತಾರೆ. ಆದರೆ ರೈತರು ಬೆಳೆ ಬೆಳೆದು ಮಾರುವಾಗ ಬೆಲೆ ಕಡಿಮೆಯಾಗಿರುತ್ತದೆ. ಹೀಗಾಗಿ ರೈತರಿಗೆ ಹಾನಿಯಾಗುತ್ತಿದೆ. ಸರ್ಕಾರ ಪ್ರತಿಯೊಂದು ಮುಂಗಾರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಮತ್ತು ಬೆಳೆ ವಿಮೆ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳಿಗೆ ಸರ್ಕಾರ ನೀಡುತ್ತಿರುವ ಸಹಾಯಧನ ಕೇವಲ ಕಾಟಾಚಾರದ ಸಹಾಯಧನವಾಗಿದೆ. ಇದರಿಂದ ರೈತರಿಗೆ ರೀತಿ ಪ್ರಯೋಜನವಾಗುತ್ತಿಲ್ಲ. ಖಾಸಗಿ ಬೀಜ ವಿತರಣಾ ಕೇಂದ್ರಗಳಲ್ಲಿ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ನೀಡುವ ಸಹಾಯಧನದ ಬೀಜಗಳಿಂದ ವ್ಯತ್ಯಾಸವಿಲ್ಲ’ ಎಂದು ತಿಳಿಸಿದರು.

‘ಸರ್ಕಾರಿ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‌ಗಳಿಂದ ಸಾಲ ಪಡೆದ ರೈತರಿಗೆ ಸಾಲ ಮರುಪಾವತಿ ನೋಟಿಸ್‌ ನೀಡುವುದು. ಸಾಲ ವಸೂಲಿಗೆ ಬ್ಯಾಂಕ್‌ ಅಧಿಕಾರಿಗಳು ರೈತರ ಮನೆಗೆ ಬಂದು ಕಿರುಕುಳ ಕೊಡುವುದು ತಪ್ಪಿಸಬೇಕು. ಕಾಡು ಪ್ರಾಣಿಗಳಿಂದ ಹಾಳಾದ ಬೆಳೆಗಳಿಗೆ ಸೂಕ್ತ ವೈಜ್ಞಾನಿಕ ಪರಿಹಾರ ನೀಡಬೇಕು. ಬರ ಪರಿಹಾರಕ್ಕಾಗಿ ರೈತರು ಪ್ರತಿನಿತ್ಯ ತಹಸೀಲ್ದಾರ್‌ ಹಾಗೂ ಕೃಷಿ ಕಚೇರಿಗಳಿಗೆ ಅಲೆದಾಟ ನಡೆಸುವುದು ತಪ್ಪಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಗ್ರಾಮಗಳಿಗೆ ಭೇಟಿ ನೀಡಿ, ಬರ ಪರಿಹಾರದ ಸಂದಾಯವಾಗದ ರೈತರನ್ನು ಗುರುತಿಸಿ, ಪರಿಹಾರ ಧನ ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ರೈತ ಮುಖಂಡ ಅಶೋಕ ಹೂಗಾರ ತಿಳಿಸಿದರು.

ಸರ್ಕಾರವು ಬಿತ್ತನೆಬೀಜದ ಸಹಾಯಧನ ಹೆಚ್ಚಳ ಮಾಡಬೇಕು. ಗ್ರಾ.ಪಂ ಮಟ್ಟದಲ್ಲಿ ರೈತರಿಗೆ ಬಿತ್ತನೆ ಬೀಜ ಗೊಬ್ಬರ ವಿತರಣೆ ಮಾಡುವ ವ್ಯವಸ್ಥೆ ಮಾಡಬೇಕು

-ಸಿದ್ದು ದಣ್ಣೂರು ತಾಲ್ಲೂಕು ಜಲಸಮಿತಿ ಒಕ್ಕೂಟದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT