ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಮುಂಗಾರು ಸ್ವಾಗತಕ್ಕೆ ರೈತರು ಸಜ್ಜು

ಕಾರಹುಣ್ಣಿಮೆ; ರೈತರ ಮನೆಗಳಲ್ಲಿ ಮನೆ ಮಾಡಿದ ಸಂಭ್ರಮ
Published 3 ಜೂನ್ 2023, 23:44 IST
Last Updated 3 ಜೂನ್ 2023, 23:44 IST
ಅಕ್ಷರ ಗಾತ್ರ

ವಿಶ್ವರಾಧ್ಯ ಎಸ್‌.ಹಂಗನಳ್ಳಿ

ಕಲಬುರಗಿ: ಮುಂಗಾರಿನ ಮೊದಲ ಹಬ್ಬ ಮತ್ತು ರೈತರ ಹಬ್ಬ ಎಂದು ಕರೆಯುವ ಕಾರಹುಣ್ಣಿಮೆಯನ್ನು ಭಾನುವಾರ (ಜೂನ್ 4) ಸಡಗರ ಮತ್ತು ಸಂಭ್ರಮದಿಂದ ಆಚರಿಸುವ ಮೂಲಕ ರೈತರು ಮುಂಗಾರು ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ.

ತಮ್ಮ ಜೀವನದ ಒಡನಾಡಿಯಾದ ಎತ್ತುಗಳನ್ನು ಸಿಂಗರಿಸಲು ವಿವಿಧ ವಸ್ತುಗಳ ಖರೀದಿಗಾಗಿ ಶನಿವಾರ ಗ್ರಾಮೀಣ ಪ್ರದೇಶದ ರೈತರು ನಗರದ ಸೂಪರ್‌ ಮಾರುಕಟ್ಟೆ ಮತ್ತು ಗಂಜ್‌ ಪ್ರದೇಶಕ್ಕೆ ಬಂದಿದ್ದರು. ಬಣ್ಣಬಣ್ಣದ ಮತಾಟಿ, ಬಾರುಕೋಲು, ಕೊರಳ ಪಟ್ಟಿ, ಗಂಟೆಸರ, ಮಗಡಾ, ಕೋಡುಗಳ ಹಾಗೂ ಕಾಲಿನ ಗೊಂಡೆ, ಜೂಲಾ ಇತ್ಯಾದಿ ವಸ್ತುಗಳನ್ನು ಖರೀದಿಸಿದರು.

ಎಪಿಎಂಸಿಗೆ ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ಮತ್ತು ಅಂಗಡಿಗಳಲ್ಲಿ ಎತ್ತುಗಳ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಲಾಯಿತು. ಇನ್ನು ಸೂಪರ್‌ ಮಾರುಕಟ್ಟೆಯಲ್ಲಿ ಬೈಕ್‌ಗಳ ಮೇಲೆ ಮತ್ತು ನೆಲದ ಮೇಲೆ ತಾಡಪಾಲ್‌ಗಳನ್ನು ಹಾಸಿ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳನ್ನು ಇಟ್ಟು ಮಾರಾಟ ಮಾಡುವ ದೃಶ್ಯ ಕಂಡುಬಂತು.

‘ಎತ್ತುಗಳ ಕೊರಳಪಟ್ಟಿ ಜೋಡಿ ಗೊಂಡೆಗಳ ಬೆಲೆ ₹ 1,200 ಇದೆ. ಇನ್ನು ಕಾಲಿಗೆ ಕಟ್ಟುವ ವಸ್ತುಗಳು ₹ 300ಕ್ಕೆ ನಾಲ್ಕು ಬಂದವು. ಬೆಲೆ ಹೆಚ್ಚಾದರೂ ಸಿಂಗಾರದ ವಸ್ತುಗಳನ್ನು ಖರೀದಿಸುವುದು ಬಿಡುವುದಿಲ್ಲ’ ಎಂದು ಕಮಲಾಪುರ ತಾಲ್ಲೂಕಿನ ಕಗ್ಗನಮಡಿ ಗ್ರಾಮದ ಮಾರುತಿ ಹೊಸಮನಿ ಖುಷಿಯಿಂದ ಹೇಳಿದರು.

ಜಿಲ್ಲೆಯ ಪ್ರತಿ ಹಳ್ಳಿಯಲ್ಲಿ ಕಾರಹುಣ್ಣಿಮೆ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಮನೆಗಳಲ್ಲಿ ಹೋಳಿಗೆ, ಹುಗ್ಗಿ ಸೇರಿದಂತೆ ವಿವಿಧ ತಿಂಡಿತಿನಿಸುಗಳನ್ನು ತಯಾರಿಸುತ್ತಾರೆ. ಹೊಸ ಬಟ್ಟೆಗಳನ್ನು ಧರಿಸಿ ಮಹಿಳೆಯರು, ಮಕ್ಕಳೊಂದಿಗೆ ಹಬ್ಬವನ್ನು ಆಚರಿಸುತ್ತಾರೆ.

‘ಕಾರಹುಣ್ಣಿಮೆಯನ್ನು ಬಸವಣ್ಣನ ಹಬ್ಬ ಎಂದೂ ಕರೆಯುತ್ತೇವೆ. ಎತ್ತುಗಳನ್ನು ಕೆರೆ, ಬಾವಿ, ಹಳ್ಳಕ್ಕೆ ಒಯ್ದು ಅವುಗಳ ಮೈ ತೊಳೆಯುತ್ತೇವೆ. ಕೋಡುಗಳಿಗೆ ವಾರನಿಸ್‌ ಮತ್ತು ಮೈಗೆ ಬಣ್ಣ ಹಚ್ಚುತ್ತೇವೆ. ಖರೀದಿ ಮಾಡಿ ತಂದ ಮತಾಟಿ, ಮಗಡಾ, ಗೆಜ್ಜೆಸರ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಹಾಕಿ ಸಿಂಗರಿಸುತ್ತೇವೆ. ದನಗಳ ಮೈಮೇಲೆ ಉಣ್ಣೆ ಮತ್ತಿತರ ಹುಳುಗಳು ಅಂಟಿಕೊಳ್ಳಬಾರದು ಎಂದು ಅವುಗಳಿಗೂ ಬಣ್ಣ ಹಚ್ಚುತ್ತೇವೆ’ ಎಂದು ರೈತ ಬಸವರಾಜ ಅಕ್ಕಲಕೋಟ ತಿಳಿಸಿದರು.

‘ಹಬ್ಬದಲ್ಲಿ ಎತ್ತುಗಳಿಗೆ ಸಿಂಗಾರ ಮಾಡುವುದು ಎಂದರೆ ನಮಗೆ ಎಲ್ಲಿಲ್ಲದ ಖುಷಿ. ಕುಟುಂಬ ಸಮೇತ ಆರತಿ ಬೆಳಗಿ ಹೋಳಿಗೆ ಮತ್ತು ಅನ್ನ ಕಲಿಸಿದ ನೈವೇದ್ಯವನ್ನು ಅವುಗಳಿಗೆ ತಿನ್ನಿಸುತ್ತೇವೆ. ನಂತರ ನೀರು ಕುಡಿಸಿ ಕೃಷಿ ಚಟುವಟಿಕೆಯಲ್ಲಿ ಸಾಥ್‌ ಕೊಡಿ ಎಂದು ಎತ್ತುಗಳಿಗೆ ನಮಿಸುತ್ತೇವೆ. ಮಧ್ಯಾಹ್ನ ಎತ್ತುಗಳ ಮೆರವಣಿಗೆ ಮತ್ತು ಸಂಜೆ ಕರಿಹರಿಯುವ ಕಾರ್ಯಕ್ರಮ ನಡೆಯುತ್ತದೆ’ ಎಂದು ವಿ.ಕೆ.ಸಲಗರ ರೈತ ಸಿದ್ದಣ್ಣ ಸವಳಸೆ ಮಾಹಿತಿ ನೀಡಿದರು.

ಕಲಬುರಗಿಯ ಸೂಪರ್‌ ಮಾರುಕಟ್ಟೆಯಲ್ಲಿ ಶನಿವಾರ ರೈತರು ಎತ್ತುಗಳ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿರುವುದು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಕಲಬುರಗಿಯ ಸೂಪರ್‌ ಮಾರುಕಟ್ಟೆಯಲ್ಲಿ ಶನಿವಾರ ರೈತರು ಎತ್ತುಗಳ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿರುವುದು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಕಲಬುರಗಿಯ ಗಂಜ್‌ ರಸ್ತೆಯಲ್ಲಿ ಶನಿವಾರ ರೈತರು ಎತ್ತುಗಳ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿರುವುದು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಕಲಬುರಗಿಯ ಗಂಜ್‌ ರಸ್ತೆಯಲ್ಲಿ ಶನಿವಾರ ರೈತರು ಎತ್ತುಗಳ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿರುವುದು –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌

ಕಾರಹುಣ್ಣಿಮೆ ರೈತರಿಗೆ ಪ್ರಮುಖ ಹಬ್ಬ. ಇದನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಈ ವರ್ಷದ ಮಳೆ ಚೆನ್ನಾಗಿ ಬಂದು ಉತ್ತಮ ಫಸಲು ದೊರೆಯಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ

-ಮಾರುತಿ ಹೊಸಮನಿ ಕಗ್ಗನಮಡಿ ಕಮಲಾಪುರ ತಾಲ್ಲೂಕು

ಭಾರತ ಕೃಷಿ ಪ್ರಧಾನ ದೇಶವಾಗಿರುವುದರಿಂದ ರೈತರ ಹಬ್ಬಗಳನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಕಾರಹುಣ್ಣಿಮೆ ರೈತ ಮತ್ತು ಎತ್ತುಗಳ ಮಧ್ಯೆ ಇರುವ ಬಾಂಧವ್ಯವನ್ನು ವೃದ್ಧಿಸುತ್ತದೆ.

-ಬಾಬುರಾವ ತಳವಾರ ಬೆಳಗುಂಪಾ ರೈತ

‘ಭೂಮಿಯಲ್ಲಿ ತೇವಾಂಶ ಇದೆ’ ‘ನೇಗಿಲು ಕುಂಟೆ ಹೊಡೆದು ಈಗಾಗಲೇ ಜಮೀನು ಹದ ಮಾಡಿಕೊಳ್ಳಲಾಗಿದೆ. ಭೂಮಿಯಲ್ಲಿ ತೇವಾಂಶ ಇದೆ. ಬಿಸಿಲು ಜಾಸ್ತಿ ಇರುವುದರಿಂದ 3–4 ಇಂಚು ಹಸಿ ಒಳಗಡೆ ಹೋಗಿದೆ. ಬರುವ 4ರಿಂದ 7ನೇ ತಾರೀಖಿನೊಳಗೆ ಮಳೆ ಆಗುವ ಸಾಧ್ಯತೆ ಇದೆ. ಒಂದು ಮಳೆ ಸುರಿದರೆ ಸಾಕು ಬಿತ್ತನೆ ಆರಂಭಿಸುತ್ತೇವೆ’ ಎಂದು ವಿ.ಕೆ.ಸಲಗರ ಗ್ರಾಮದ ರೈತರು ತಿಳಿಸಿದರು.

ಏನಿದು ಕರಿಹರಿಯುವ ಸಂಪ್ರದಾಯ ಕಾರಹುಣ್ಣಿಮೆಯಂದು ಪ್ರತಿ ಗ್ರಾಮಗಳಲ್ಲಿ ಕರಿ ಹರಿಯುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಗ್ರಾಮದ ಅಗಸಿಯಲ್ಲಿ ಎತ್ತುಗಳ ಮೂಲಕ ಕರಿಹರಿಯುವ ಕಾರ್ಯಕ್ರಮ ನಡೆಯುತ್ತದೆ. ಈ ಕ್ಷಣ ರೋಮಾಂಚನದಿಂದ ಕೂಡಿರುತ್ತದೆ. ಅಗಸಿಗೆ ಅಡ್ಡಲಾಗಿ ಬೇವಿನ ತಪ್ಪಲು ಪೋಣಿಸಿದ ದಾರವನ್ನು ರೈತರು ಹಿಡಿಯುತ್ತಾರೆ. ಈ ಸಂದರ್ಭದಲ್ಲಿ ಎತ್ತುಗಳನ್ನು ಓಡಿಸುತ್ತಾ ಅಗಸಿಯೊಳಗಿನಿಂದ ಅವುಗಳನ್ನು ದಾಟಿಸುತ್ತಾರೆ. ಅವುಗಳು ದಾರ ಹರಿದುಕೊಂಡು ಮುಂದೆ ಸಾಗುತ್ತವೆ. ನಂತರ ಪ್ರಮುಖರ ಸನ್ಮಾನ ನಡೆಯುತ್ತದೆ. ಈ ಒಟ್ಟಾರೆ ಪ್ರಕ್ರಿಯೆಯನ್ನು ಕರಿಹರಿಯುವ ಸಂಪ್ರದಾಯ ಎಂದು ಕರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT