ಶುಕ್ರವಾರ, ಫೆಬ್ರವರಿ 3, 2023
25 °C

ಕಲಬುರಗಿ: ತೊಗರಿಗೆ ನೆಟೆ ರೋಗ: ₹15 ಸಾವಿರ ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ:  ಜಿಲ್ಲೆಯ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದ ತೊಗರಿ ಬೆಳೆ ನೆಟೆ ರೋಗದಿಂದ ಹಾನಿಯಾಗಿದೆ. ಸಮೀಕ್ಷೆ ಮಾಡಿ, ಪ್ರತಿ ಎಕರೆಗೆ ₹15 ಸಾವಿರ ಬೆಳೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಬೆಳೆಗಾರರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಳೆಗಾರರು ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನೆಟೆ ರೋಗದಿಂದ ಒಣಗಿದ ತೊಗರಿ ಸಸಿಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.

‘ಎರಡು ವರ್ಷಗಳ ಸತತ ಮಳೆಯಿಂದ ತೊಗರಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಮಳೆಯಿಂದ ಉಳಿಸಿಕೊಂಡ ಬೆಳೆಗೆ ನೆಟೆ ರೋಗ ಕಾಡುತ್ತಿದೆ. ಮಣ್ಣಿನಲ್ಲಿ ಇರುವ ಹುಳುಗಳು ತೇವಾಂಶದಿಂದ ಕ್ರಿಯಾಶೀಲಗೊಂಡು ತೊಗರಿ ಬೆಳೆಗೆ ಹಾನಿ ಮಾಡುತ್ತಿವೆ. ಅವುಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ’ ಎಂದು ಪ್ರತಿಭಟನಾಕಾರರು ತಿಳಿಸಿದರು.

ಸಂಕಷ್ಟದಲ್ಲಿ ಇರುವ ಬೆಳೆಗಾರರಿಗೆ ಸರ್ಕಾರ ಸಹಾಯ ನೀಡಬೇಕು. ಫಸಲ್ ಬಿಮಾ ಯೋಜನೆಯಡಿ ವಿಮಾ ಮಾಡಿಸಿದ ಬೆಳೆಗಾರರ ಜಮೀನುಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

ಜಮೀನಿನ ಪಹಣಿಯ ಕಾಲಂ ಸಂಖ್ಯೆ 2ರಲ್ಲಿ ಸೊನ್ನೆ ಎಂದು ನಮೂದಾಗಿದೆ. ಇದನ್ನು ತೆಗೆಯುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದರು.

ರೈತ ಮುಖಂಡರಾದ ಶರಣಗೌಡ ಮಾಲಿ ಪಾಟೀಲ, ನಾಮದೇವ ರಾಠೋಡ, ಚಂದು ಜಾಧವ, ಮಲ್ಲಮ್ಮ ಚಂದಪ್ಪ. ಕಮಲಬಾಯಿ ಚಂದು, ಹೀರಾಸಿಂಗ್ ಕಾರಭಾರಿ, ಲೋಹಿತ್ ಬೋರಿ, ಧನಸಿಂಗ್ ರಾಠೋಡ, ಮಾಲಾಶ್ರೀ ಶರಣಪ್ಪ ಪ್ರತಿಭಟನೆಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.