ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷಪೂರಿತ ಪಹಣಿ ಸರಿಪಡಿಸಿ: ರೈತರ ಆಗ್ರಹ

Last Updated 5 ಏಪ್ರಿಲ್ 2022, 5:46 IST
ಅಕ್ಷರ ಗಾತ್ರ

ಕಲಬುರಗಿ: ‘ಚಿತ್ತಾಪುರ ತಾಲ್ಲೂಕಿನ ಹಲಕರ್ಟಿ ಗ್ರಾಮದ ಹಲವು ಪಹಣಿ ಪತ್ರಗಳು ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ದೋಷಪೂರಿತವಾಗಿದ್ದು, ಅವುಗಳನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್‌) ನೇತೃತ್ವದಲ್ಲಿ ಗ್ರಾಮದ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಒಂದೇ ಸರ್ವೆ ನಂಬರ್ ಮೇಲೆ ಹಲವು ಪಹಣಿಗಳಿವೆ. ಸುಮಾರು 650ಕ್ಕೂ ಅಧಿಕ ಸರ್ವೆ ನಂಬರ್‌ಗಳಿದ್ದು, ಈ ಎಲ್ಲಾ ರೈತರ ಪಹಣಿಗಳಲ್ಲಿ ದೋಷಗಳಿವೆ. ಪಹಣಿ ಪತ್ರಕ್ಕೂ, ನಕಾಶೆಗಳಿಗೂ ಸಂಬಂಧವೇ ಇಲ್ಲದಂತಾಗಿದೆ. ಕೆಲ ರೈತರ ಪಹಣಿಗಳಲ್ಲಿ ಸರ್ಕಾರಿ ಜಮೀನು ಎಂದು ದಾಖಲಾಗಿದೆ. ಇದರಿಂದಾಗಿ ಕಳೆದ ಎಂಟು, ಹತ್ತು ವರ್ಷಗಳಿಂದ ಗ್ರಾಮದಲ್ಲಿ ಖರೀದಿ ಮಾಡಿದ ಹಾಗೂ ಮಾರಾಟ ಮಾಡಿದ ಜಮೀನುಗಳ ನೋಂದಣಿಯೂ ಆಗುತ್ತಿಲ್ಲ. ಹೀಗಾಗಿ, ಜಮೀನುಗಳ ನೋಂದಣಿಯೂ ಕಷ್ಟವಾಗುತ್ತಿದೆ. ಪಹಣಿ ದೋಷದಿಂದಾಗಿ ರೈತರಿಗೆ ಸಾಲ ಸೌಲಭ್ಯ, ಬೆಳೆ ಪರಿಹಾರಗಳು ಹಾಗೂ ಸರ್ಕಾರಿ ಯೋಜನೆಗಳು ರೈತರಿಗೆ ಸಿಗದಂತಾಗಿವೆ’ ಎಂದು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಒಂದು ವೇಳೆ ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಇತ್ಯರ್ಥ ಮಾಡಿದ್ದರೆ ಮುಂದಿನ ದಿನಗಳಲ್ಲ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್‌.ಬಿ, ತಾಲ್ಲೂಕು ಕಾರ್ಯದರ್ಶಿ ಶಿವಕುಮಾರ ಆಂದೋಲ, ಹಲಕರ್ಟಿ ಗ್ರಾಮ ಸಮಿತಿ ಅಧ್ಯಕ್ಷ ಚೌಡಪ್ಪ ಗಂಜಿ, ರೈತರಾದ ನಾನಾಸಾಬ ಕೊಲಕುಂದಿ, ಭೀಮರಾಯ ಇಸಬಾ, ದೊಡ್ಡಪ್ಪ ಹೊಸೂರ, ಅಯ್ಯಪ್ಪ ಉಳಗೊಳ, ಭೀಮು ಮಾಟ್ನಳ್ಳಿ, ವೀರೇಶ ನಾಲವಾರ, ಮಹಾಂತೇಶ ಉಳಗೋಳ, ಚಂದ್ರಶೇಖರ ಕೋಟಗಿ, ವೀರಭದ್ರ ಹಿಟ್ಟಿನ, ಬಸಣ್ಣ ಇಸಬಾ, ಮಲ್ಲಿನಾಥ ಹುಂಡೇಕಲ್, ಗೌತಮ ಪರತೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT