ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಬಿಡಿಸಲೂ ಸಿಗದ ಕೂಲಿಗಳು

Last Updated 18 ಅಕ್ಟೋಬರ್ 2021, 4:28 IST
ಅಕ್ಷರ ಗಾತ್ರ

ಅಫಜಲಪುರ: ಅತಿವೃಷ್ಟಿ ಮತ್ತು ಅನಾವೃಷ್ಟಿ, ರೋಗ ಬಾಧೆ, ಕೂಲಿಕಾರ ಸಮಸ್ಯೆಗಳ ಮಧ್ಯೆಯೂ ಉಳಿಸಿಕೊಂಡ ಅಲ್ಪಸ್ವಲ್ಪ ಹತ್ತಿಯ ಬೆಳೆಗೆ ಈಗ ಮಾರುಕಟ್ಟೆಯಲ್ಲಿನ ಕೃಷಿ ಕಾರ್ಮಿಕರ ಕೂಲಿ ಹೆಚ್ಚಳ ಹಾಗೂ ದರ ಕುಸಿತವು ಬೆಳೆಗಾರರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ತೊಗರಿಗಿಂತ ಕಡಿಮೆ ಅವಧಿಯಲ್ಲಿ ಹತ್ತಿ ಫಸಲು ಬರುತ್ತದೆ. ಜತೆಗೆ ತೊಗರಿಗಿಂತಲೂ ಹೆಚ್ಚಿನ ಆದಾಯ ಪಡೆಯಬಹುದು ಎಂಬ ಆಸೆಯಿಂದ ರೈತರು ತಾಲ್ಲೂಕಿನಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಹತ್ತಿ ಬೆಳೆದಿದ್ದಾರೆ.

ಆರಂಭದಲ್ಲಿ ಮಳೆ ಕೊರತೆಯಿಂದ ಹತ್ತಿ ಬೆಳವಣಿಗೆ ನಿರೀಕ್ಷೆ ಮಟ್ಟದಲ್ಲಿ ಇರಲಿಲ್ಲ. ಜೂನ್– ಆಗಸ್ಟ್ ನಡುವೆ ನಿರೀಕ್ಷಿತ ಮಟ್ಟದಲ್ಲಿ ಮಳೆ ಸುರಿಯಲಿಲ್ಲ. ಆದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ವಿಪರೀತ ಮಳೆಯಾಗಿ ಹತ್ತಿ ಬೆಳೆಗೆ ಎಲೆ ಚುಕ್ಕಿರೋಗ, ತಾಮ್ರದ ರೋಗ, ಬೆಂಕಿ ರೋಗ, ಮುಟುರು ರೋಗ, ಮಜ್ಜಿಗೆ ರೋಗ ಕಾಣಿಸಿಕೊಂಡು ಹತ್ತಿ ಹಾಳಾಯಿತು.

ಪ್ರತಿ ಗಿಡ ಕನಿಷ್ಠ 20-30 ಕಾಯಿ ಬಿಡುತ್ತಿತ್ತು.ರೋಗದಿಂದಾಗಿ 8-10 ಕಾಯಿಗಳು ಬಿಟ್ಟಿವೆ. ಹತ್ತಿ ಬಿಡಿಸಲು ಈಗ ಕಾರ್ಮಿಕರೂ ಸಿಗುತ್ತಿಲ್ಲ. ಮತ್ತೊಂದು ಕಡೆ ಆಗಾಗ ಮಳೆ ಸುರಿಯುತ್ತಿದೆ. ಇದರ ಮಧ್ಯೆ ಮಾರುಕಟ್ಟೆಯ ದರವೂ ಕುಸಿದಿದ್ದು, ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ ಎನ್ನುತ್ತಾರೆ ಕೃಷಿಕರು.

ರೈತರು ಸಾಲ ಮಾಡಿ ದುಬಾರಿ ಬೀಜ, ಗೊಬ್ಬರ ಖರೀದಿಸಿ ಹತ್ತಿ ಬಿತ್ತನೆ ಮಾಡಿದ್ದಾರೆ. ಈಗಿನ ಪರಿಸ್ಥಿತಿ ನೋಡಿದರೆ ಬೆಳೆಗೆ ಹಾಕಿರುವ ಬಂಡವಾಳ ಮರಳಿ ಬರುವ ಭರವಸೆಯೂ ಕಾಣುತ್ತಿಲ್ಲ. ವಾರದಲ್ಲಿ ಹತ್ತಿ ಬಿಡಿಸುವ ಕಾರ್ಯ ಆರಂಭವಾಗಲಿದೆ. ಆದರೆ ಕೂಲಿಯ ಹಣ ಗಗನಕ್ಕೇರಿದೆ. ಹತ್ತಿ ಬಿಡಿಸಲು ಆಳುಗಳೂ ಸಿಗುತ್ತಿಲ್ಲ ಎನ್ನುತ್ತಾರೆ ಕೃಷಿಕ ಲಕ್ಷ್ಮಣ ಕಟ್ಟಿಮನಿ.

ಹಿಂದಿನ ಬಾರಿಯ ಅತಿವೃಷ್ಟಿಯಿಂದ 8 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿತ್ತು. ಇದುವರೆಗೂ ಪರಿಹಾರದ ಹಣ ಕೂಡ ಕೈಸೇರಿಲ್ಲ. ವರ್ಷ ಕಳೆದರೂ ಪರಿಹಾರ ಮೊತ್ತ ನೀಡಿಲ್ಲ. ಭೀಮಾ ಪ್ರವಾಹಕ್ಕೆ ತುತ್ತಾದ ಬೆಳೆಗಳಿಗೂ ಇದೇ ಪರಿಸ್ಥಿತಿ ಇದೆ. ಪ್ರವಾಹ ಪೀಡಿತ ಗ್ರಾಮಸ್ಥರ ಸ್ಥಳಾಂತರ ನಡೆದಿಲ್ಲ. ಸರ್ಕಾರ ಸಹಾಯಧನ ನೀಡದಿದ್ದರೇ ರೈತರು ಕೃಷಿಯನ್ನೇ ಬಿಡುವ ಸ್ಥಿತಿ ಬರಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

’ಮುಂಗಾರು ಹಂಗಾಮಿನಲ್ಲಿ 10 ಸಾವಿರ ಎಕರೆ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಪ್ರಸ್ತುತ ವರ್ಷ ಹತ್ತಿ ಬೆಳೆ ಅತಿವೃಷ್ಟಿಯಿಂದ ಹಾನಿಗೊಂಡಿದೆ. ಸರ್ಕಾರ ಹಾಳಾದ ಬೆಳೆಯ ಸಮೀಕ್ಷೆಗೆ ಸೂಚಿಸಿದೆ. ಶೀಘ್ರವೇ ಸರ್ವೆ ಕಾರ್ಯನಡೆಯಲಿದೆ‘ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್ ಎಸ್ ಗಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಿರಂತರ ಮಳೆಯಿಂದ ಹಾಳಾದ ಹತ್ತಿ ಬೆಳೆಯ ಸಮೀಕ್ಷೆ ಮಾಡಿ, ಸರ್ಕಾರ ವೈಜ್ಞಾನಿಕ ಪದ್ಧತಿಯಲ್ಲಿ ಪರಿಹಾರ ನೀಡಬೇಕು.

ಸಿದ್ದರಾಮ್ ದಣ್ಣೂರು, ತಾಲ್ಲೂಕು ಜಲ ಸಮಿತಿ ಒಕ್ಕೂಟದ ಅಧ್ಯಕ್ಷ

ಸರ್ಕಾರ 1 ಕ್ವಿಂಟಲ್ ಹತ್ತಿಗೆ ಕನಿಷ್ಠ ₹10 ಸಾವಿರ ನೀಡಿ ಖರೀದಿ ಮಾಡಬೇಕು. ಹಾಳಾದ ಬೆಳೆಗೆ ಕೂಡಲೇ ಒದಗಿಸಬೇಕು.
ಗುರು ಚಾಂದ್ ಕೋಟೆ, ತಾಲ್ಲೂಕು ಪ್ರಾಂತ ರೈತ ಸಂಘದ ಜಂಟಿ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT