ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವೆ: ಸಂಸದ ರಾಧಾಕೃಷ್ಣ ದೊಡ್ಡಮನಿ

ಅಭಿನಂದನಾ ಸಮಾರಂಭ: ಸಂಸದ ರಾಧಾಕೃಷ್ಣ ದೊಡ್ಡಮನಿ ಭರವಸೆ
Published 11 ಜುಲೈ 2024, 14:18 IST
Last Updated 11 ಜುಲೈ 2024, 14:18 IST
ಅಕ್ಷರ ಗಾತ್ರ

ಕಲಬುರಗಿ: ‘ನನ್ನ ಮೇಲೆ ವಿಶ್ವಾಸ ಇರಿಸಿ ಸಂಸದನಾಗಿ ಆಯ್ಕೆ ಮಾಡಿದ ಜಿಲ್ಲೆಯ ಜನರಿಗೆ ಹಾಗೂ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಆಭಾರಿಯಾಗಿದ್ದೇನೆ. ಶಾಸಕರ, ಸಚಿವರ, ಪರಿಷತ್ತಿನ ಸದಸ್ಯರ, ಪಕ್ಷದ ವರಿಷ್ಠರ ಸಹಕಾರ ಮತ್ತು ಸಲಹೆಗಳನ್ನು ಪಡೆದು, ಚರ್ಚಿಸಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಭರವಸೆ ನೀಡಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಕಲಬುರಗಿ ದಕ್ಷಿಣ ಮತಕ್ಷೇತ್ರದ ವತಿಯಿಂದ ಆಯೋಜಿಸಿದ್ದ ಲೋಕಸಭಾ ಹಾಗೂ ವಿಧಾನ ಪರಿಷತ್‌ನ ನೂತನ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾನು ಗೆಲುವು ಸಾಧಿಸಲು ಪಕ್ಷದ ಎಲ್ಲ ಕಾರ್ಯಕರ್ತರ ಶ್ರಮ ಹಾಗೂ ಕಳೆದ 50 ವರ್ಷಗಳಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳೇ ಕಾರಣವಾಗಿವೆ. ಇದು ಪ್ರತಿಯೊಬ್ಬ ಕಾರ್ಯಕರ್ತರ ಗೆಲುವಾಗಿದೆ’ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಲೋಕಸಭೆಯ ಈ ಚುನಾವಣೆ ನಮಗೆ ಬಹಳ ಪ್ರತಿಷ್ಠೆಯಾಗಿತ್ತು. ಕಲ್ಯಾಣ ಕರ್ನಾಟಕದ ಐದು ಕ್ಷೇತ್ರಗಳು ಕಾಂಗ್ರೆಸ್‌ನ ಪಾಲಾಗಿವೆ. ಇದು ಎಐಸಿಸಿ ಅಧ್ಯಕ್ಷರ ಮೇಲಿನ ಜನರ ವಿಶ್ವಾಸ ತೋರಿಸುತ್ತದೆ. ನೂತನ ಸಂಸದರು ಕ್ಷೇತ್ರದ ಅಭಿವೃದ್ಧಿಗೆ ಕಂಕಣಬದ್ಧರಾಗಿ ಕೆಲಸ ಮಾಡುತ್ತಾರೆ’ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಬಿ.ಆರ್‌.ಪಾಟೀಲ ಮಾತನಾಡಿ, ‘ರಾಧಾಕೃಷ್ಣ ಅವರು ಜಿಲ್ಲೆಯ ಜನರ ಸಮಸ್ಯೆಗಳಿಗೆ ಧ್ವನಿಯಾಗಿ, ಕೇಂದ್ರ ಸರ್ಕಾರದ ಗಮನಕ್ಕೆ ತಂದು ಅವುಗಳನ್ನು ಬಗೆಹರಿಸುವರು. ಜನರು ಸಹ ಜನಪ್ರತಿನಿಧಿಗಳ ಸ್ಥಾನ ಮಾನಕ್ಕೆ ತಕ್ಕಂತಹ ಕೆಲಸಗಳನ್ನು ನಿರೀಕ್ಷೆ ಮಾಡಿ, ಅವರ ಮುಂದೆ ಇರಿಸಬೇಕು. ಗ್ರಾಮ ಪಂಚಾಯಿತಿ ಸದಸ್ಯ ಮಾಡುವ ಕೆಲಸವನ್ನು ಸಂಸದರ ಮುಂದೆ ಇರಿಸಬಾರದು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಮಾತನಾಡಿ, ‘ನನ್ನ ಗೆಲುವಿಗಾಗಿ ಎಲ್ಲರೂ ಸಾಕಷ್ಟು ಕೆಲಸ ಮಾಡಿದ್ದಾರೆ. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ನೇರವಾಗಿ ಬಂದು ನನ್ನ ಭೇಟಿ ಮಾಡಿದರೆ, ಪರಿಹಾರಕ್ಕೆ ಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ‘ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷನಾಗಿ, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದರಿಂದ ಪಕ್ಷ ನನ್ನನ್ನು ಗುರುತಿಸಿ ಪರಿಷತ್ ಸದಸ್ಯರನ್ನಾಗಿ ಮಾಡಿದೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರೇ ಮುಖ್ಯ ಕಾರಣ. ಅನ್ಯ ಪಕ್ಷಗಳಿಂದ ಸಾಕಷ್ಟು ಆಹ್ವಾನಗಳು ಬಂದಿದ್ದರೂ ಅವುಗಳಿಗೆ ಕಿವಿಗೊಡಲಿಲ್ಲ’ ಎಂದರು.

ರಾಧಾಕೃಷ್ಣ ದೊಡ್ಡಮನಿ, ಡಾ.ಚಂದ್ರಶೇಖರ ಪಾಟೀಲ ಹಾಗೂ ಜಗದೇವ ಗುತ್ತೇದಾರ ಅವರನ್ನು ಮುಖಂಡರು ಹಾಗೂ ಕಾರ್ಯಕರ್ತರು ಸನ್ಮಾನಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಮುಖಂಡರಾದ ನೀಲಕಂಠರಾವ ಮೂಲಗೆ, ಡಾ. ಕಿರಣ್ ದೇಶಮುಖ, ಭೀಮಾಶಂಕರ ಬಿಲಗುಂದಿ, ಶರಣಕುಮಾರ ಮೋದಿ, ರೇಣುಕಾ ಸಿಂಘೆ ಉಪಸ್ಥಿತರಿದ್ದರು.

ಕಲಬುರಗಿಯಲ್ಲಿ ಗುರುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಗುರುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT