ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಬೆಲೆ ಹೆಚ್ಚಳ; ಸದ್ದು ಮಾಡದ ‘ಪಟಾಕಿ’

ನಿಧಾನಕ್ಕೆ ಚೇತರಿಸಿಕೊಳ್ಳುತ್ತಿರುವ ವ್ಯಾಪಾರ: ಪರವಾನಗಿ ಶುಲ್ಕ ತಗ್ಗಿಸಲು ಮನವಿ
Last Updated 4 ನವೆಂಬರ್ 2021, 7:44 IST
ಅಕ್ಷರ ಗಾತ್ರ

ಕಲಬುರಗಿ: ಪಟಾಕಿ ವ್ಯಾಪಾರಿಗಳು ದೀಪಾವಳಿ ಸಂಭ್ರಮ ಹೊತ್ತು ತಂದಿದ್ದಾರೆ. ಆದರೆ, ಸರ್ಕಾರದ ನಿಯಮ ಅವರನ್ನೇ ಸಂಕಷ್ಟಕ್ಕೆ ತಳ್ಳಿವೆ.

ಕೋವಿಡ್‌ ಕಾರಣಕ್ಕೆ ಎರಡು ವರ್ಷಗಳಿಂದ ದೀಪಾವಳಿ ಸಂಭ್ರಮದಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ತಂದಿದ್ದ ಪಟಾಕಿ ಮಾರಾಟ ಆಗದ ಕಾರಣ ವ್ಯಾಪಾರಸ್ಥರು ನಷ್ಟದ ಸುಳಿಗೆ ಸಿಲುಕಿದ್ದರು.‌

ಸೋಂಕು ಇಳಿಮುಖವಾಗಿ ನಿರ್ಬಂಧಗಳನ್ನು ಸಡಿಲಿಸಿದ್ದರಿಂದ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಪಟಾಕಿ ಅಂಗಡಿ ಹಾಕಲು ಅನುಮತಿ ನೀಡಲಾಗಿದೆ. ಅಲ್ಲಿ ಈಗ ಹತ್ತಾರು ಮಳಿಗೆ ತಲೆ ಎತ್ತಿವೆ.

‘ನಿನ್ನೆಯಿಂದಲೇ ಚೆನ್ನಾಗಿ ವ್ಯಾಪಾರ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ನಿಧಾನವಾಗಿ ಮಾರಾಟ ಬಿರುಸು ಪಡೆಯುತ್ತಿದೆ. ಆದರೆ, ಇನ್ನಷ್ಟು ದಿನ ವ್ಯಾಪಾರಕ್ಕೆ ಅನುಮತಿ ನೀಡಿದರೆ ಅನುಕೂಲವಾಗುತ್ತದೆ’ ಎನ್ನುವುದು ವ್ಯಾಪಾರಸ್ಥರ ಮಾತು.

‘ನಾವು ನವೆಂಬರ್ 2 ರಿಂದ 20ರವರೆಗೂ ಅನುಮತಿ ಕೇಳಿದ್ದೆವು. ಆದರೆ, 10 ದಿನ ಮಾತ್ರ ಕೊಟ್ಟಿದ್ದಾರೆ. ಹಬ್ಬಕ್ಕೂ ಎರಡು ದಿನ ಮುಂಚಿತವಾಗಿ ಜನರು ಪಟಾಕಿ ಖರೀದಿಸುತ್ತಾರೆ. ಈ ಬಾರಿ ನಿರೀಕ್ಷೆಗಿಂತ ವ್ಯಾಪಾರ ಕಡಿಮೆಯಾಗಿದ್ದು, ದರವೂ ಹೆಚ್ಚಾಗಿದೆ’ ಎನ್ನುತ್ತಾರೆ ಶರಣಬಸವೇಶ್ವರ ಪಟಾಕಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರೇವಣಸಿದ್ದಪ್ಪ ಪಡಶೆಟ್ಟಿ. ‘ನಗರದಲ್ಲಿ ಅನಧಿಕೃತ ಪಟಾಕಿ ವ್ಯಾಪಾರ ಅವ್ಯಾಹತವಾಗಿ ನಡೆಯುತ್ತಿದೆ. ಹಣ ಪಾವತಿಸಿ ಅನುಮತಿ ಪಡೆದ ನಮಗೆ ನಷ್ಟವಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಇದನ್ನು ತಡೆಯಬೇಕು.ಜಾಗ, ಟೆಂಟ್, ಕಾರ್ಮಿಕರ ವೆಚ್ಚ ಹೆಚ್ಚಾಗಿದೆ. ಅನುಮತಿ ಶುಲ್ಕ ಕಡಿಮೆ ಮಾಡಬೇಕು’ ಎಂದು ಮನವಿ ಮಾಡಿದರು. ‘ವ್ಯಾಪಾರ ಮಂದಗತಿಯಲ್ಲಿದೆ. ಪ್ರತಿ ವರ್ಷ ಸಾವಿರ, ಎರಡು ಸಾವಿರ ಮೊತ್ತದ ಪಟಾಕಿ ಖರೀದಿಸುತ್ತಿದ್ದವರು ಈ ವರ್ಷ ಕಡಿಮೆ ಖರೀದಿಸುತ್ತಿದ್ದಾರೆ. ವ್ಯಾಪಾರಸ್ಥರು ಸಂಕಷ್ಟದಲ್ಲಿದ್ದೇವೆ’ ಎನ್ನುತ್ತಾರೆ ಶರಣಬಸವೇಶ್ವರ ಪಟಾಕಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಶಿವಶರಣಪ್ಪ ಹೂಗಾರ.

ವ್ಯಾಪಾರಕ್ಕೆ ಮಳೆ ಹೊಡೆತ: ಮಂಗಳವಾರ ಸಂಜೆ ನಗರದಲ್ಲಿ ಮಳೆ ಸುರಿದಿದ್ದು ಪಟಾಕಿ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ‘ಪಟಾಕಿ ಖರೀದಿಗೆ ಗ್ರಾಹಕರು ಬರುವ ಸಮಯಕ್ಕೆ ಮಳೆ ಬಂದಿದ್ದು ನಮಗೆ ಆರಂಭಿಕ ಹೊಡೆತ ಬಿದ್ದಿದೆ. 34 ಅಂಗಡಿಗಳಿದ್ದು, ಎಲ್ಲದಕ್ಕೂ ನೀರು ನುಗ್ಗಿದೆ. ಬೆಲೆ ಏರಿಕೆ, ಕಾರ್ಮಿಕರ ಸಮಸ್ಯೆಯ ಜತೆಗೆ ಮಳೆಯೂ ಸಂಕಷ್ಟ ತಂದಿದೆ. ವ್ಯಾಪಾರ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ’ ಎನ್ನುವುದು ಶಿವಶರಪ್ಪ ಹೂಗಾರ ಅವರ ಮಾತು.

ಇಂಧನ ದರ ಏರಿಕೆ, ಪಟಾಕಿ ದುಬಾರಿ: ‘ತಮಿಳುನಾಡಿನ ಶಿವಕಾಶಿಯಿಂದ ಪಟಾಕಿ ತರಬೇಕು. ಈ ವರ್ಷ ಇಂಧನ ಬೆಲೆ ಶೇ 20ರಷ್ಟು ಹೆಚ್ಚಾಗಿದೆ. ಲಾರಿ ಬಾಡಿಗೆಯೂ ಏರಿಕೆಯಾಗಿದೆ. ರಾಸಾಯನಿಕಗಳ ಬೆಲೆ ಏರಿಕೆಯಾದ್ದರಿಂದ ತಯಾರಕರು ಪಟಾಕಿ ಬೆಲೆ ಹೆಚ್ಚಿಸಿದ್ದಾರೆ. ಪಟಾಕಿ ಬೆಲೆ ಏರಿಕೆ ಕಂಡಿದೆ’ ಎನ್ನುತ್ತಾರೆ ವ್ಯಾಪಾರಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT