ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಖರೀದಿ ಯೋಜನೆ ಮುಂದುವರಿಸಲು ಒತ್ತಾಯ

ಒಂಬತ್ತು ಕೃತಿಗಳ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ: ಕೆಕೆಆರ್‌ಡಿಬಿ ಅಧ್ಯಕ್ಷರಿಗೆ ಮನವಿ
Published 18 ಫೆಬ್ರುವರಿ 2024, 16:15 IST
Last Updated 18 ಫೆಬ್ರುವರಿ 2024, 16:15 IST
ಅಕ್ಷರ ಗಾತ್ರ

ಕಲಬುರಗಿ: ‘ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡಗಳಲ್ಲ; ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಯೂ ಅಭಿವೃದ್ಧಿಯೇ ಎನ್ನುವ ಸಾಹಿತಿಗಳ ಮಾತಿನಂತೆ ಈ ಭಾಗದ ಸಾಹಿತ್ಯದ ಅಭಿವೃದ್ಧಿಗೆ ನಾನು ಸಿದ್ಧ. ಅದರಂತೆ ಕೆಕೆಆರ್‌ಡಿಬಿ ವತಿಯಿಂದ ಪುಸ್ತಕ ಖರೀದಿ ಸೇರಿದಂತೆ ಸಾಹಿತಿಗಳ ಇತರ ಬೇಡಿಕೆಗಳನ್ನು ಮುಖ್ಯಮಂತ್ರಿ, ಸಂಬಂಧಿಸಿದ ಸಚಿವರ ಗಮನಕ್ಕೆ ತರುತ್ತೇನೆ’ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಡಾ. ಅಜಯ್ ಸಿಂಗ್ ಭರವಸೆ ನೀಡಿದರು.

ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ನಡೆದ 2023ರ 9 ಪುಸ್ತಕ ಬಿಡುಗಡೆ ಮತ್ತು 2022ರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಮಂಡಳಿಯಿಂದ ಪುಸ್ತಕ ಖರೀದಿಸುವ ಯೋಜನೆ ಏಕೆ ಸ್ಥಗಿತವಾಗಿದೆ ಎನ್ನುವುದು ನನಗೆ ಗೊತ್ತಿಲ್ಲ, ಅದರ ಬಗ್ಗೆ ಮಾಹಿತಿ ಪಡೆಯುತ್ತೇನೆ. ಅಧಿವೇಶನದ ಬಳಿಕ ಲೇಖಕರ ನಿಯೋಗ ತಮ್ಮ ಬೇಡಿಕೆಗಳೊಂದಿಗೆ ಬೆಂಗಳೂರಿಗೆ ಬಂದರೆ ಕಾರ್ಯದರ್ಶಿ, ಸಚಿವರನ್ನು ಭೇಟಿ ಮಾಡಿಸಿ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ. ಆರೋಗ್ಯ ಆವಿಷ್ಕಾರ ಯೋಜನೆಯಡಿ ₹300 ಕೋಟಿ ವೆಚ್ಚ ಮಾಡುವ ವಿಚಾರ ಇದೆ‘ ಎಂದ ಅವರು ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ದಿನಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ನಡೆದ ಸಾಹಿತ್ಯ ಚಟುವಟಿಕೆಗಳನ್ನು ಮೆಲಕು ಹಾಕಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಚನ್ನಣ್ಣ ವಾಲಿಕಾರ ಸೇರಿ ಎರಡು ಪ್ರತಿಷ್ಠಾನ ಮತ್ತು ಕನ್ನಡ ಅಧ್ಯಯನ ವಿಭಾಗಕ್ಕೆ ಚನ್ನಣ್ಣ ವಾಲಿಕಾರ ಹೆಸರಿಡಲು ಬೇಕಾದ ಎಲ್ಲ ಪ್ರಯತ್ನವನ್ನು ಮಾಡುತ್ತೇನೆ. ಸಮಸ್ಯೆ ಏನೇ ಇದ್ದರೂ ಗಮನಕ್ಕೆ ತನ್ನಿ, ಸಲಹೆಗಳಿದ್ದರೆ ತಿಳಿಸಿ, ಅಧಿವೇಶನದಲ್ಲಿ  ನಿಮ್ಮ ಪರವಾಗಿ ಧ್ವನಿ ಎತ್ತುವ ಕೆಲಸ ನನ್ನದು’ ಎಂದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಉಪಾಧ್ಯಕ್ಷ, ಸಾಹಿತಿ ಸ್ವಾಮಿರಾವ ಕುಲಕರ್ಣಿ, ‘ಸಾಹಿತಿಗಳು, ಓದುಗರೇ ಸ್ಥಾಪಿಸಿದ ಸಾಹಿತ್ಯಕ್ಕೆ ಸಂಬಂಧಿಸಿದ ಮೊದಲ ಸಹಕಾರಿ ಸಂಘ 16ನೇ ವರ್ಷಕ್ಕೆ ಕಾಲಿಟ್ಟಿದೆ. ‌153 ಪುಸ್ತಕ ಪ್ರಕಟಣೆ ಮಾಡಿದ್ದೇವೆ. ಶಾಲೆ–ಕಾಲೇಜುಗಳಲ್ಲಿ ದತ್ತಿ ಉಪನ್ಯಾಸ ಆಯೋಜಿಸುವ ವಿಚಾರ ಇದೆ. ಈ ಹಿಂದಿನಂತೆ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ ಪುಸ್ತಕ ಖರೀದಿ ಮಾಡಬೇಕು. ನಮ್ಮ ಸಂಘಕ್ಕೆ ನಿರ್ವಹಣಾ ವೆಚ್ಚವಾಗಿ ಪ್ರತಿ ವರ್ಷ ₹10 ಲಕ್ಷ ಮಂಜೂರು ಮಾಡಬೇಕು’ ಎಂದು ಕೋರಿದರು.

ಸಂಘದ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಮಾತನಾಡಿ, ‘ಕೆಕೆಆರ್‌ಡಿಬಿಯಲ್ಲಿ ಸಾಹಿತಿ,‌ ಕಲಾವಿದರ ಒಂದು ಸಮಿತಿ ರಚನೆ‌ ಮಾಡಿ. ಇದರಿಂದ ಪುಸ್ತಕ ಖರೀದಿ, ಐತಿಹಾಸಿಕ ಅಭಿವೃದ್ಧಿಗೆ, ಸಾಹಿತ್ಯದ ಅಭಿವೃದ್ಧಿಗೆ ಏನು ಮಾಡಬೇಕು ಎನ್ನುವುದು ತಿಳಿಯಲಿದೆ. ಈ ಭಾಗದ ಸಾಹಿತಿಗಳ ಪ್ರಸ್ತಕ ಖರೀದಿ ಮತ್ತೆ ಆರಂಭಿಸಬೇಕು‘ ಎಂದರು.

ವಿ.ಜಿ.ಮಹಿಳಾ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಕೊಂಡಾ, ಬಸವರಾಜ ಕೊನೇಕ, ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ, ಪ್ರೊ.ಕೆ.ಎಸ್.ನಾಯಕ್, ಬಸವರಾಜ ಜಮರಖಾನಿ, ನಾಗಾಬಾಯಿ, ಬಸವರಾಜ ಸಬರದ್, ವಿಜಯಕುಮಾರ ಪರುತೆ, ಎಸ್.ಕೆ.ಬಿರಾದಾರ, ಬಸವರಾಜ ಚಾಂತತೋಟೆ, ವಿಶ್ವನಾಥ ಮಂಡಲಗಿ, ಪ್ರೊ. ಕೆ.ವಿಶ್ವನಾಥ, ಪ್ರಭಾಕರ್ ಜೋಶಿ, ಬಸವರಾಜ ಕೊನೇಕ, ಶರಣಬಸಪ್ಪ ವಡ್ಡನಕೇರಿ, ಮಲ್ಲಿನಾಥ ತಳವಾರ ಸೇರಿದಂತೆ ಸಂಘದ ಆಡಳಿತ ಮಂಡಳಿ ಸದಸ್ಯರು, ಸಾಹಿತಿಗಳು ಉಪಸ್ಥಿತರಿದ್ದರು.

ಕಲಬುರಗಿಯ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ ಒಂಬತ್ತು ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು
ಕಲಬುರಗಿಯ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನಲ್ಲಿ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ ಒಂಬತ್ತು ಕೃತಿಗಳನ್ನು ಗಣ್ಯರು ಬಿಡುಗಡೆ ಮಾಡಿದರು
ಕೆಕೆಆರ್‌ಡಿಬಿ ವತಿಯಿಂದ ಕಲ್ಯಾಣ ಕರ್ನಾಟಕದಲ್ಲಿ ‘ಲಿಟರೇಚರ್‌ ಫೆಸ್ಟ್‌‘ ಮಾಡೆಬೇಕು. ಎರಡು ದಿನ ಹೊರ ಜಿಲ್ಲೆ ರಾಜ್ಯದ ಒಂದಿಬ್ಬರು ನಮ್ಮ ಜಿಲ್ಲೆಯ ಒಂದಿಬ್ಬರು ಸಾಹಿತಿಗಳು ಬರುತ್ತಾರೆ. ಹೆಚ್ಚಿನ ವೆಚ್ಚವಾಗುವುದಿಲ್ಲ
ಡಾ .ಪಿ.ಎಸ್‌.ಶಂಕರ ವೈದ್ಯ ಸಾಹಿತಿ
ಪ್ರಶಸ್ತಿ ಪುರಸ್ಕೃತರು
ಲೋಕಾರ್ಪಣೆಯಾದ ಪುಸ್ತಕಗಳು 2022ನೇ ಸಾಲಿನ ‘ಕನ್ನಡ ನಾಡು ಸಾಹಿತ್ಯ ಶ್ರೀ’ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಡಾ. ಪಿ.ಎಸ್.ಶಂಕರ ಅವರಿಗೆ ಲೇಖಕಿ ವಿಜಯಶ್ರೀ ಸಬರದ ಅವರಿಗೆ ಶ್ರೀಮತಿ ಮಾಪಮ್ಮ ಶಂಭುಲಿಂಗ ಹೊಸಮನಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ ಮುರಗೆಪ್ಪ ಹಡಪದ ಮತ್ತು ಮಹಿಪಾಲರೆಡ್ಡಿ ಮನ್ನೂರ ಅವರಿಗೆ ಪ್ರೊ. ಜಿ.ಎಸ್‌.ಮೇಳಕುಂದಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ ಅಕ್ಬರ್ ಸಿ.ಕಾಲಿಮಿರ್ಚಿ ಅವರಿಗೆ ಶ್ರೀಮತಿ ಬಸಮ್ಮ ತುಳಜಪ್ಪ ಉಪಳಾಂವಕರ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ ಮಲ್ಲಿಕಾರ್ಜುನ ಕಡಕೋಳ ಅವರಿಗೆ ಶ್ರೀಮತಿ ಶರಣಮ್ಮ ವೀರಭದ್ರಪ್ಪ ಅಕ್ಕೋಣಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ‌ ಶೈಲಜಾ ಬಾಗೇವಾಡಿ ಅವರ ‘ನೆಲೋಗಿ ನೀಲಮ್ಮನ ತ್ರಿಪದಿಗಳು’ ಪ್ರಭು ಖಾನಾಪುರೆ ಅವರ ‘ಕಥೆಯಾದ ಕಥೆಗಾರ ಮತ್ತು ಇತರ ಕಥೆಗಳು’ ಶರಣಗೌಡ ಬಿ.ಪಾಟೀಲ ಅವರ ‘ಫ್ಯಾಷನ್ ಪರಮಾತ್ಮ ಮತ್ತು ಇತರ ಕಥೆಗಳು’ ಡಾ.ಕೆ.ಶಶಿಕಾಂತ ಅವರ ‘ನಿದ್ದೆಗೆಡಿಸಿದ ಬುದ್ಧ’ ಡಾ.ವಿಶ್ವರಾಜ ಪಾಟೀಲ ಅವರ ‘ವಿರಭೋಗ್ಯ ವಸುಂಧರಾ ಮತ್ತು ತ್ರಯಸ್ಥ ನಾಟಕಗಳು‌’ ಡಾ.ಎಸ್‌.ಎಸ್‌.ಗುಬ್ಬಿ ಅವರ ‘ಆತ್ಮ ನಿನಾದ’ ಆಂಜನೇಯ ಜಾಲಿಬೆಂಚಿ ಅವರ ‘ಎಲ್ಲಿಗೆ ಪಯಣ ಯಾವುದು ದಾರಿ‘ ರಾಘವೇಂದ್ರ ಮಂಗಳೂರು ಅವರ ‘ನ್ಯಾನೋ ಕಥೆಗಳು’ ಪ್ರೊ. ಲಿಂಗಪ್ಪ ಗೋನಾಲ ಅವರ ‘ವಚನ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ‘ ಪ್ರಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT