ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣುಗಳ ಬೆಲೆ ಏರಿಕೆ, ತರಕಾರಿ ಇಳಿಕೆ, ಸೇಬು, ಕಿತ್ತಳೆ ಮೂಸಂಬಿಗೆ ಬೇಡಿಕೆ

ರೋಗ ನಿರೋಧಕ ಶಕ್ತಿ ಹೆಚ್ಚಳ
Last Updated 22 ಜನವರಿ 2022, 19:30 IST
ಅಕ್ಷರ ಗಾತ್ರ

ಕಲಬುರಗಿ: ಕಳೆದ ಕೆಲ ತಿಂಗಳುಗಳಿಂದ ಏರುತ್ತಲೆ ಇದ್ದ ತರಕಾರಿ ಬೆಲೆಯ ಜಾಗಕ್ಕೆ ಈಗ ಹಣ್ಣುಗಳು ಬಂದಿವೆ. ಸಾಮಾನ್ಯವಾಗಿ ಹಬ್ಬದ ದಿನಗಳಲ್ಲಿ ಮಾತ್ರ ಬೇಡಿಕೆಯಲ್ಲಿರುತ್ತಿದ್ದ ಹಣ್ಣುಗಳಿಗೆ ಕೋವಿಡ್ ಕಾರಣದಿಂದ ಬೇಡಿಕೆ ಬಂದಿದ್ದು ಬೆಲೆಯೂ ಕೊಂಚ ಹೆಚ್ಚಾಗಿದೆ.

ಸೇಬುಹಣ್ಣುಗಳ ಖರೀದಿಯಲ್ಲಿ ಏರಿಕೆ ಕಂಡುಬಂದಿದೆ. ಸಂಕ್ರಾಂತಿಗೂ ಮುನ್ನ ಕಡಿಮೆ ಇದ್ದ ಸೇಬು ದರ ಸದ್ಯ ಪ್ರತಿ ಕೆಜಿಗೆ ₹150 ರಿಂದ ₹180ಗೆ ಏರಿಕೆಯಾಗಿದೆ. ಮೂಸಂಬಿ ಹಣ್ಣುಗಳನ್ನು ₹ 100 ರಿಂದ ₹ 120 ನಂತೆ ಖರೀದಿಸಲಾಗುತ್ತಿದೆ. ಕೆಲ ದಿನಗಳ ಹಿಂದೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಚಿಕ್ಕುಹಣ್ಣುಗಳ ದರ ಪ್ರತಿ ಡಜನ್‌ಗೆ ₹ 100 ರಿಂದ ₹120 ಇದೆ.

ಒಂದು ಪಪ್ಪಾಯಿ ಹಣ್ಣಿನ ಬೆಲೆ ₹ 30 ರಿಂದ 50 ಇದೆ (ಗಾತ್ರದ ಆಧಾರದ ಮೇಲೆ). ಸದ್ಯ ಮಾರುಕಟ್ಟೆಯಲ್ಲಿ ಪೇರಲೆ ಹಣ್ಣುಗಳು ಕಡಿಮೆಯಾಗಿದ್ದರೂ ಬೆಲೆ ಇಳಿಕೆಯಾಗಿಲ್ಲ. ಕೆಜಿಗೆ₹ 60 ರಿಂದ ₹ 80 ನಂತೆ ಮಾರಾಟವಾಗುತ್ತಿವೆ.

ಎಲ್ಲ ಹಣ್ಣುಗಳ ಬೆಲೆ ಏರಿಕೆಯಾದರೂ ಬಾಳೆಹಣ್ಣುಗಳ (ಪಚ್ಚಬಾಳೆ) ದರ ಯಾವುದೇ ವ್ಯತ್ಯಾಸವಾಗಿಲ್ಲ. ಪಚ್ಚಬಾಳೆ ಸೂಪರ್ ಮಾರುಕಟ್ಟೆಯಲ್ಲಿ ಡಜನ್‌ಗೆ ₹ 30 ನಂತೆ ಮಾರಾಟವಾಗುತ್ತಿದ್ದರೆ ಉಳಿದೆಡೆ ₹ 40 ಇದೆ. ಏಲಕ್ಕಿ ಬಾಳೆಹಣ್ಣುಗಳ ಬೆಲೆ ಕೆ.ಜಿ ಗೆ ₹ 40ರಿಂದ 50 ಇದೆ. ದ್ರಾಕ್ಷಿ, ಹತ್ತಿಹಣ್ಣು, ಖರ್ಜೂರದ ಮಾರಾಟವೂ ಜೋರಾಗಿದೆ (ಗಾತ್ರ ಮತ್ತು ಗುಣಮಟ್ಟದ ಆಧಾರದ ಮೇಲೆ ಡಜನ್, ಅರ್ಧ ಡಜನ್‌, ಕೆ.ಜಿಗಳ ಲೆಕ್ಕದಲ್ಲಿಯೂ ಮಾರಾಟ ಮಾಡಲಾಗುತ್ತಿದೆ).

ಕಿವಿ, ಡ್ರ್ಯಾಗನ್ ಫ್ರೂಟ್‌ಗಳಿಗೆ ಬೇಡಿಕೆ ಕಡಿಮೆ ಇದ್ದರೂ ಬೆಲೆ ಹೆಚ್ಚಿದೆ.

‘ಹಣ್ಣುಗಳಿಗೆ ಬೇಡಿಕೆ ಇದೆ. ಜ್ಯೂಸ್‌ ಅಂಗಡಿಯವರು ಮೂಸಂಬಿಗಳನ್ನು ಹೆಚ್ಚು ಖರೀದಿಸುತ್ತಿದ್ದರೆ, ಜನರು ತಮ್ಮ ಮಕ್ಕಳಿಗಾಗಿ ಸೇಬು, ದಾಳಿಂಬೆ ಹಣ್ಣುಗಳನ್ನು ಹೆಚ್ಚು ಖರೀದಿ ಮಾಡುತ್ತಿದ್ದಾರೆ’ ಎನ್ನುತ್ತಾರೆ ಜಂಗ್ಲುಸಾಬ.

ತರಕಾರಿ ದರ: ಡಿಸೆಂಬರ್ ಕೊನೆ ಮತ್ತು ಜನವರಿ ತಿಂಗಳ ಮೊದಲ ವಾರಕ್ಕೆ ಹೋಲಿಸಿದರೆ ಈ ವಾರ ತರಕಾರಿ ಬೆಲೆಯಲ್ಲಿ ಬಹಳ ಇಳಿಕೆಯಾಗಿದೆ.

ಟೊಮೊಟೊ, ಈರುಳ್ಳಿಗಳು ಪ್ರತಿ ಕೆ.ಜಿಗೆ ₹ 30–40 ನಂತೆ ಮಾರಾಟವಾಗುತ್ತಿವೆ. ಡಬ್ಬುಮೆಣಸಿನಕಾಯಿ ಮತ್ತು ಹಸಿ ಮೆಣಸಿನಕಾಯಿಗಳ ಬೆಲೆ ₹ 50 ಇದೆ. ನುಗ್ಗೆಕಾಯಿ ದರ ₹ 60–80 ಇದ್ದರೆ ಆಲೂಗಡ್ಡೆ, ಹೀರೆಕಾಯಿಗಳು ಕೆಜಿಗೆ ₹ 40 ನಂತೆ ಮಾರಾಟವಾಗುತ್ತಿವೆ. ಬದನೆಕಾಯಿ, ಗಜ್ಜರಿ, ಹೂಕೋಸು, ಸೌತೆಕಾಯಿಗಳ ಬೆಲೆ ಕಳೆದ ವಾರದಷ್ಟೇ ಇದೆ.

ಸೊಪ್ಪುಗಳ ದರ: ಮೆಂತೆ, ಪಾಲಕ್‌ ಸೊಪ್ಪುಗಳ ಚಿಕ್ಕ ಗಾತ್ರದ 2 ಕಟ್ಟುಗಳನ್ನು ₹ 10ನಂತೆ ಮಾರಲಾಗುತ್ತಿದ್ದರೆ, ಪುಂಡಿಪಲ್ಯೆ ₹ 20ಕ್ಕೆ 4 ಕಟ್ಟು, ರಾಜಗಿರಿ ಸೊಪ್ಪು ₹ 20ಕ್ಕೆ 3 ಕಟ್ಟು, ಸಬ್ಬಸಿಗಿ ಚಿಕ್ಕ ಗಾತ್ರದ 3 ಕಟ್ಟು ₹ 20ಕ್ಕೆ, ಕೊತಂಬರಿ ಸೊಪ್ಪು ಒಂದು ಕಟ್ಟು ₹ 5, ಪುದೀನಾ ಒಂದು ಕಟ್ಟು ₹ 5 ದರ ಇದೆ.

ಹಣ್ಣುಗಳ ಬೆಲೆ (ಡಜನ್‌ಗೆ ₹ ಗಳಲ್ಲಿ)

ಸೇಬುಹಣ್ಣು;150–180
ಮೂಸಂಬಿ;60;80
ಕಿತ್ತಳೆ;100;120
ಚಿಕ್ಕುಹಣ್ಣು;100;120
ಪಪ್ಪಾಯಿ;30;50 (1ಕ್ಕೆ)
ಪೇರಲೆ;60; 80
ಪಚ್ಚಬಾಳೆ;30
ಏಲಕ್ಕಿ ಬಾಳೆಹಣ್ಣು;40;50 (ಕೆ.ಜಿಗೆ)
ಹತ್ತಿಹಣ್ಣು;80;100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT