ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌ನಲ್ಲಿ ಪ್ರತಿಷ್ಠಿತರ ಜೂಜಾಟ: ವರದಿ ಕೇಳಿದ ಡಿ.ಜಿ.

ಉನ್ನತ ಮಟ್ಟದ ತನಿಖೆಗೆ ಶಾಸಕ ಪ್ರಿಯಾಂಕ್‌ ಆಗ್ರಹ
Last Updated 9 ಮೇ 2020, 9:30 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಖಾಸಗಿ ಹೋಟೆಲ್‌ನಲ್ಲಿ ಏಪ್ರಿಲ್ 11ರಂದು ಜಿಲ್ಲೆಯ ತಹಶೀಲ್ದಾರ್‌ ಸೇರಿದಂತೆ ಹಲವು ಉದ್ಯಮಿಗಳು ಇಸ್ಪೀಟ್‌ ಜೂಜಾಟವಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ವರದಿ ನೀಡುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಕಲಬುರ್ಗಿ ಪೊಲೀಸ್‌ ಕಮಿಷನರ್‌ ಸತೀಶಕುಮಾರ್‌ ಎನ್. ಅವರಿಗೆ ಸೂಚನೆ ನೀಡಿದ್ದಾರೆ.

ಲಾಕ್‌ಡೌನ್‌ ಇದ್ದ ಸಂದರ್ಭದಲ್ಲಿ ಎಲ್ಲ ಹೋಟೆಲ್‌ಗಳನ್ನು ಬಂದ್‌ ಮಾಡಿಸಲಾಗಿತ್ತು. ಆದಾಗ್ಯೂ, ನಿಯಮ ಉಲ್ಲಂಘಿಸಿ ಹೋಟೆಲ್‌ ಬಾಗಿಲು ತೆರೆಸಿ ಜೂಜಾಟವಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಲಕ್ಷಾಂತರ ರೂಪಾಯಿ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ. ಜೂಜಾಟದಲ್ಲಿ ತೊಡಗಿದ್ದ ತಹಶೀಲ್ದಾರ್‌, ಉದ್ಯಮಿಗಳ ಹೆಸರನ್ನು ಹೊರತುಪಡಿಸಿ ಬೇರೆಯವರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಪ್ರಿಯಾಂಕ್‌ ಪತ್ರ

ಏತನ್ಮಧ್ಯೆ ಮುಖ್ಯಮಂತ್ರಿ, ಗೃಹ ಸಚಿವರಿಗೆ ಶುಕ್ರವಾರ ಪತ್ರ ಬರೆದಿರುವ ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ, ‘ಇಲ್ಲಿಯ ಚೌಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಲಾಡ್ಜ್‌ವೊಂದರಲ್ಲಿ ಉನ್ನತ ಅಧಿಕಾರಿಗಳು ಹಾಗೂ ಉದ್ಯಮಿಗಳು ಜೂಜಾಟದಲ್ಲಿ ತೊಡಗಿದ್ದಾಗ ಪೊಲೀಸರು ದಾಳಿ ಮಾಡಿದ್ದರು.

ಈ ಸಂದರ್ಭದಲ್ಲಿ ದೊಡ್ಡ ಮಟ್ಟದ ಹಣ ಸಿಕ್ಕರೂ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಈ ಕುರಿತು ಸಿಐಡಿ ಅಥವಾ ವಿಶೇಷ ತನಿಖಾ ದಳ (ಎಸ್‌ಐಟಿ) ದಿಂದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

‘ದಾಳಿ ನಡೆದ ಲಾಡ್ಜ್‌ನ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿರುವ ದೃಶ್ಯಾವಳಿಗಳನ್ನು ಸ್ವತಃ ಪೊಲೀಸರೇ ನಾಶಪಡಿದ್ದಾರೆ ಎಂದು ವರದಿಯಾಗಿದೆ. ನಂತರ ಎಸ್‌ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಪಿಐ ಒಬ್ಬರು ದಾಳಿ ಮಾಡಿರುವ ಸಿಪಿಐಗೆ ಫೋನ್‌ ಮಾಡಿದ್ದರು. ನಂತರ ಏಪ್ರಿಲ್‌ 18ರಂದು ಈ ಇಬ್ಬರು ಪೊಲೀಸ್‌ ಅಧಿಕಾರಿಗಳು ಪರಸ್ಪರ ಅವಾಚ್ಯ ಪದಗಳಿಂದ ನಿಂದಿಸಿಕೊಂಡು, ಮಾರಾಮಾರಿ ಮಾಡಿಕೊಂಡು ಇಲಾಖೆಯ ಗೌರವಕ್ಕೆ ಧಕ್ಕೆ ತಂದಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ಈ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿದೆ’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT