ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುನ್ನೊಳ್ಳಿ: ಗಂಗಮ್ಮನ ಕೆರೆ ಜೀರ್ಣೋದ್ಧಾರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ-–ನರೇಗಾ ಯೋಜನೆಯಿಂದ ಅನುದಾನದ ನೆರವು
Published 18 ಮೇ 2024, 7:32 IST
Last Updated 18 ಮೇ 2024, 7:32 IST
ಅಕ್ಷರ ಗಾತ್ರ

ಆಳಂದ: ತಾಲ್ಲೂಕಿನ ಮುನ್ನೊಳ್ಳಿ ಗ್ರಾಮದಲ್ಲಿ ಹಾಳುಬಿದ್ದಿದ್ದ ಗಂಗಮ್ಮನ ಕೆರೆ ಜೀರ್ಣೋದ್ಧಾವಾಗಿದ್ದು, ಕೆರೆಗೆ ಹೊಸ ಕಳೆ ಬಂದಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ನರೇಗಾ ಯೋಜನೆ ನೆರವಿನಿಂದ ಕೆರೆಯ ಕಾಯಕಲ್ಪ ಮಾಡಲಾಗಿದ್ದು, ಮಳೆಗಾಲಕ್ಕಾಗಿ ಕಾಯುತ್ತಿದೆ.

ಗ್ರಾಮಕ್ಕೆ ಹೊಂದಿಕೊಂಡಿದ್ದು, 7 ಎಕರೆ ಪ್ರದೇಶದಲ್ಲಿರುವ ಕೆರೆಯನ್ನು 1972 ರ ಬರಗಾಲ ಕಾಮಗಾರಿ ಅಡಿಯಲ್ಲಿ ಹೊಸದಾಗಿ ನಿರ್ಮಿಸಲಾಗಿತ್ತು. ಈ ಕೆರೆಯು ಮುನ್ನೊಳ್ಳಿ ಗ್ರಾಮದ ಕುಡಿಯುವ ನೀರಿನ ಮೂಲವಾಗಿತ್ತು. ಕಳೆದ 10 ವರ್ಷದಿಂದ ಕೆರೆಯಲ್ಲಿ ಹೂಳು ತುಂಬಿ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಇದರಿಂದ ಜನ ಜಾನುವಾರಿಗೆ ನೀರಿನ ಸಂಕಷ್ಟ ಎದುರಾಗಿತ್ತು.

ಪ್ರಸಕ್ತ ವರ್ಷ ಬೇಸಿಗೆ ಆರಂಭದಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಇಲ್ಲಿಯ ಗ್ರಾ.ಪಂ ಅಧ್ಯಕ್ಷ ರಾಜಕುಮಾರ ಚವ್ಹಾಣ ನೇತೃತ್ವದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ಕೆರೆ ಜೀರ್ಣೊದ್ಧಾರ ಕಾಮಗಾರಿಗೆ ಯೋಜನೆ ರೂಪಿಸಲಾಯಿತು. ಧರ್ಮಸ್ಥಳ ಸಂಸ್ಥೆಯು ₹ 18 ಲಕ್ಷ ಅನುದಾನದ ಕ್ರಿಯಾಯೋಜನೆ ಸಿದ್ಧಪಡಿಸಿದರೆ, ಮುನ್ನೊಳ್ಳಿ ಗ್ರಾ.ಪಂ ನರೇಗಾ ಯೋಜನೆಯಡಿ ₹ 10 ಲಕ್ಷದ ಅನುದಾನದ ಕ್ರಿಯಾಯೋಜನೆ ರೂಪಿಸಿ, ಕಾಮಗಾರಿ ಆರಂಭಿಸಿದರು.

ನರೇಗಾ ಯೋಜನೆಯಡಿ ಗ್ರಾಮದ 200 ಕೂಲಿಕಾರ್ಮಿಕರು, ಟ್ರ್ಯಾಕ್ಟರ್‌, ಟಿಪ್ಪರ್‌ ವ್ಯವಸ್ಥೆ ಕೈಗೊಳ್ಳಲಾಯಿತು. ಧರ್ಮಸ್ಥಳ ಯೋಜನೆಯಡಿ ಹಿಟಾಚಿ ಮಷಿನ್‌ ಸೇರಿದಂತೆ ಅಗತ್ಯ ಹೂಳೆತ್ತುವ ಯಂತ್ರ ಸಾಮಗ್ರಿ ನೆರವು ಒದಗಿಸಲಾಯಿತು.

ಕಳೆದ 20 ದಿನಗಳಿಂದ ಆರಂಭಗೊಂಡ ಕೆರೆ ಹೂಳೆತ್ತುವ ಕಾಮಗಾರಿ ಹಾಗೂ ಕೆರೆಗೆ ಸುತ್ತಲು ಕಲ್ಲಿನ ತಡೆಗೋಡೆ ನಿರ್ಮಾಣವು ಭರದಿಂದ ಸಾಗಿದೆ. ಶೇ 70ರಷ್ಟು ಕಾಮಗಾರಿಯು ಈಗ ಪೂರ್ಣಗೊಂಡಿದೆ. ಅಂದಾಜು 8 ಅಡಿ ಆಳದ ಹೂಳೆತ್ತುವ ಕಾರ್ಯ ಕೈಗೊಂಡ ಪರಿಣಾಮ ಈ ಹಿಂದಿಗಿಂತ 3 ಪಟ್ಟು ಹೆಚ್ಚು ನೀರು ಸಂಗ್ರಹವಾಗಲಿದೆ ಎಂದು ಗ್ರಾ.ಪಂ ಅಧ್ಯಕ್ಷ ರಾಜಕುಮಾರ ಚವ್ಹಾಣ ತಿಳಿಸಿದರು.

ಕೆರೆ ಜೀರ್ಣೋದ್ಧಾರ ಕಾಮಗಾರಿಯಷ್ಟೇ ಕೈಗೊಳ್ಳದೆ ಕೆರೆಗೆ ನೀರು ಹರಿದು ಬರಲಿರುವ ಮಾರ್ಗದ ಸಣ್ಣ ನಾಲಾ, ಚೆಕ್‌ಡ್ಯಾಮ್‌ಗಳಲ್ಲಿನ ಹೂಳು ಸಹ ಎತ್ತಲಾಗಿದೆ. ಹೀಗಾಗಿ ಈ ಬಾರಿ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹಗೊಳ್ಳಲಿದೆ. ಸುತ್ತಲೂ ಅಂತರ್ಜಲದ ಪ್ರಮಾಣವು ಅಧಿಕಗೊಳ್ಳಲಿದೆ. ಮಳೆಗಾಲ ಆರಂಭವಾಗುವ ಮುನ್ನ ಕಾಮಗಾರಿಯು ಸಂಪೂರ್ಣಗೊಳಿಸುವ ಉದ್ದೇಶದಿಂದ ಗ್ರಾ.ಪಂ ಅಧ್ಯಕ್ಷ, ಸದಸ್ಯರು ಮತ್ತು ಧರ್ಮಸ್ಥಳ ಸಂಸ್ಥೆಯ ಅಧಿಕಾರಿಗಳು ಹೆಚ್ಚಿನ ಮುತುವರ್ಜಿವಹಿಸಿ ಕೆರೆ ಕಾಮಗಾರಿ ಮೇಲೆ ನಿಗಾವಹಿಸಿದ್ದಾರೆ.

ಬೇಸಿಗೆಯಲ್ಲಿ ಗ್ರಾಮದ ಕೂಲಿಕಾರ್ಮಿಕರಿಗೂ ನರೇಗಾ ಉದ್ಯೋಗ ನೀಡಿದ್ದು, ವಿಶೇಷವಾಗಿ ನರೇಗಾ ಯೋಜನೆಯು ಸದ್ಬಳಕೆ ಆಗಿರುವುದು ಗ್ರಾಮಸ್ಥರಿಗೆ ಹೆಚ್ಚು ಖುಷಿ ತಂದಿದೆ. ವರುಣನ ಆಗಮನಕ್ಕೆ ಗಂಗಮ್ಮನ ಕೆರೆಯು ನವವಧುವಿನಂತೆ ಸಿಂಗಾರಗೊಂಡು ಕಾಯುತ್ತಿದೆ.

₹18 ಲಕ್ಷ ವೆಚ್ಚದ ಜಂಟಿ ಕ್ರಿಯಾಯೋಜನೆ ರೂಪಿಸಲಾಗಿದ್ದು, ₹10 ಲಕ್ಷ ಖರ್ಚು ಮಾಡಲಾಗಿದೆ. ಕೆರೆ ಹೂಳೆತ್ತುವ ಕಾಮಗಾರಿಯಿಂದ ಸಂಗ್ರಹ ಸಾಮರ್ಥ್ಯ ಹೆಚ್ಚಳವಾಗಿದೆ
ನಾಗೇಶಮೂರ್ತಿ, ಪಿಡಿಒ ಗ್ರಾ.ಪಂ ಮುನ್ನೊಳ್ಳಿ
ಧರ್ಮಸ್ಥಳ ಸಂಸ್ಥೆಯು ಕೆರೆ ಹೂಳೆತ್ತಲು ನೀಡಿದ ಅನುದಾನದ ನೆರವಿನಿಂದ ಗ್ರಾ.ಪಂ, ಕೆರೆ ಜೀರ್ಣೋದ್ಧಾರಕ್ಕೆ ಮುಂದಾಗಿದೆ. ಇದರಿಂದ ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ
ರಾಜಕುಮಾರ ಚವ್ಹಾಣ, ಅಧ್ಯಕ್ಷ, ಗ್ರಾ.ಪಂ ಮುನ್ನೊಳ್ಳಿ
ಪಾಳುಬಿದ್ದ ಕೆರೆ ಜೀರ್ಣೋದ್ಧಾರ ಕಾರ್ಯದಿಂದ ಸುತ್ತಲಿನ ರೈತರಿಗೂ ಅನುಕೂಲವಾಗಲಿದೆ. ಕೆರೆ ಸುತ್ತಲಿನ ಮರಗಿಡ ನೆಡುವ ಕಾರ್ಯ ನರೇಗಾ ಯೋಜನೆಯಡಿ ಕೈಗೊಳ್ಳಬೇಕು
ಸಿದ್ದು ವೇದಶೆಟ್ಟಿ, ಗ್ರಾಮಸ್ಥ ಮುನ್ನೊಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT