ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ತ್ಯಾಜ್ಯ ತೊಟ್ಟಿಗಳ ನಿರ್ವಹಣೆಯೇ ಸವಾಲು

ಹಸಿ ಕಸ, ಒಣ ಕಸ ವಿಂಗಡಿಸದ ನಾಗರಿಕರು; ಎಲ್ಲ ಕಡೆಯೂ ಸಾಧ್ಯವಾಗುತ್ತಿಲ್ಲ ಮನೆ, ಮನೆ ಕಸ ಸಂಗ್ರಹ
Last Updated 30 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಪೌರ ಕಾರ್ಮಿಕರು, ತ್ಯಾಜ್ಯ ಸಂಗ್ರಹ ವಾಹನಗಳ ಕೊರತೆ, ಸ್ಥಳೀಯ ಆಡಳಿತಗಳ ನಿರ್ಲಕ್ಷ್ಯ ಹಾಗೂ ನಾಗರಿಕರಲ್ಲಿ ಸ್ವಚ್ಛತೆಯ ಅರಿವಿನ ಕೊರತೆಯಿಂದಾಗಿ ನಗರ ಹಾಗೂ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮನೆ, ಮನೆ ಕಸ ಸಂಗ್ರಹ ಕಾರ್ಯ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ.

ಇದರಿಂದಾಗಿ ನಗರ ಹಾಗೂ ಪಟ್ಟಣಗಳ ಪ್ರಮುಖ ಸ್ಥಳಗಳಲ್ಲಿ ‘ಬ್ಲಾಕ್‌ ಸ್ಪಾಟ್ಸ್‌’ (ಕಸದ ರಾಶಿ) ಸೃಷ್ಟಿಯಾಗುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ನಗರದ ವಿವಿಧೆಡೆ ಇರಿಸಲಾದ ತ್ಯಾಜ್ಯ ಸಂಗ್ರಹ ತೊಟ್ಟಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಅವುಗಳು ತುಂಬಿ ಕಸದ ರಾಶಿ ರಸ್ತೆಯಲ್ಲಿ ಬಿದ್ದರೂ ವಿಲೇವಾರಿ ಆಗುವುದಿಲ್ಲ. ಇದರಿಂದ ಸಮಸ್ಯೆ ಆಗುತ್ತಿದೆ ಎಂದು ನಿವಾಸಿಗಳು ದೂರುತ್ತಿದ್ದಾರೆ.

ನಗರದ ಸಮತಾ ಕಾಲೊನಿಯ ಸಿದ್ಧಲಿಂಗೇಶ್ವರ ವಿದ್ಯಾರ್ಥಿ ನಿಲಯದ ಮುಂಭಾಗದಲ್ಲಿ ಪಾಲಿಕೆಯ ಕಸ ಸಂಗ್ರಹ ತೊಟ್ಟಿ ಇದೆ. ಅದು ಭರ್ತಿಯಾಗಿ ಕಸ ರಸ್ತೆಯಲ್ಲಿ ಬೀಳುತ್ತಿದ್ದರೂ, ನಿಯಮಿತವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ತೊಟ್ಟಿ ಇದ್ದೂ ಇಲ್ಲದಂತಾಗಿದೆ. ಅದರ ಪಕ್ಕದಲ್ಲೇ ಕೆಲವರು ಮೂತ್ರ ವಿಸರ್ಜನೆ ಮಾಡುತ್ತಿದ್ದು, ಸುತ್ತಲಿನ ಜಾಗ ಗಬ್ಬು ವಾಸನೆಯಿಂದ ಕೂಡಿದೆ. ನಗರದ ಹಲವು ಕಡೆಗಳಲ್ಲಿ ಇಂತಹದ್ದೇ ಪರಿಸ್ಥಿತಿ ಇದೆ.

ನಗರದ ಸೂಪರ್‌ ಮಾರುಕಟ್ಟೆ, ಕಣ್ಣಿ ಮಾರುಕಟ್ಟೆ, ಆಳಂದ ಚೆಕ್‌ಪೋಸ್ಟ್‌ ಬಳಿ ತ್ಯಾಜ್ಯ ಸುರಿಯಲಾಗುತ್ತಿದೆ. ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಕೊಳೆತ ತರಕಾರಿ, ಹಣ್ಣು, ಹೂವು, ಮರದ ತುಂಡು, ಪ್ಲಾಸ್ಟಿಕ್‌ನಂಥ ತ್ಯಾಜ್ಯವನ್ನು ತೊಟ್ಟಿಯಲ್ಲಿ ಹಾಕಲಾಗುತ್ತಿದೆ.

’ಕೆಲವೊಮ್ಮೆ ತೊಟ್ಟಿಗಳಲ್ಲಿ ತ್ಯಾಜ್ಯ ಹೆಚ್ಚಾಗಿ ರಸ್ತೆ ಮಧ್ಯದವರೆಗೂ ಬರುತ್ತದೆ. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡಬೇಕಾಗುತ್ತದೆ‘ ಎಂದು ದೂರುತ್ತಾರೆ ನಗರದ ನಿವಾಸಿ ಎಸ್‌.ಮನೋಹರ್.

’ಮಹಾನಗರ ಪಾಲಿಕೆಯಿಂದ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ವೃತ್ತಗಳು ಸೇರಿದಂತೆ ಹೆಚ್ಚು ಜನಸಂದಣಿಯ ಸ್ಥಳಗಳಲ್ಲಿ ನಿತ್ಯವೂ ಕಸ ಬಳಿಯುವ, ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಆದರೆ, ಕೆಲ ವಾರ್ಡ್‌ಗಳಲ್ಲಿ ಮಾತ್ರ ಈ ಕೆಲಸ ಎರಡು ಅಥವಾ ಮೂರು ದಿನಗಳಿಗೊಮ್ಮೆ ನಡೆಯುತ್ತಿದೆ. ಕಸ ಸಂಗ್ರಹಿಸುವ ವಾಹನ ಹೋಗುವುದು ಸ್ವಲ್ಪ ತಡವಾದರೂಜನರು ಎಲ್ಲೆಂದರಲ್ಲಿ ಕಸ ಹಾಕುತ್ತಾರೆ. ಇದರಿಂದಾಗಿ ಕೆಲವೆಡೆ ಸಮಸ್ಯೆ ಉಂಟಾಗುತ್ತಿದೆ‘ ಎನ್ನುತ್ತಾರೆ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮುನಾಫ್ ಪಟೇಲ್.

ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡಬೇಕು ಎಂದು ಹಲವು ಬಾರಿ ತಿಳಿಸಿದರೂ ಜನ ಕೇಳುವುದಿಲ್ಲ. ಎಲ್ಲವನ್ನೂ ಒಂದೇ ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ನೀಡುತ್ತಾರೆ. ರಾಶಿಯಲ್ಲಿ ನಾವೇ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಸಂಗ್ರಹಿಸುವುದರಿಂದ ಕೆಲಸ ನಿಧಾನವಾಗುತ್ತದೆ ಎನ್ನುತ್ತಾರೆ ಪೌರ ಕಾರ್ಮಿಕರು.

ಕಸದಿಂದ ಗೊಬ್ಬರ ತಯಾರಿಸುವ 11 ಕಾಂಪೋಸ್ಟ್‌ ಗುಂಡಿಗಳು ನಗರದಲ್ಲಿವೆ. ಅವುಗಳ ಬಳಕೆ, ನಿರ್ವಹಣೆ ನಿರೀಕ್ಷಿತ ಪ್ರಮಾಣದಲ್ಲಿಆಗುತ್ತಿಲ್ಲ.

ಜೇವರ್ಗಿ ಪಟ್ಟಣದಲ್ಲಿ 5 ಸಾವಿರ ಮನೆಗಳಿವೆ. 35 ಸಾವಿರ ಜನಸಂಖ್ಯೆ ಹೊಂದಿದೆ. ಕಸ ಸಂಗ್ರಹಕ್ಕೆ ಪುರಸಭೆಯಿಂದ 3 ಟಾಟಾ ಏಸ್, 2 ಟಂಟಂ, 2 ಟ್ರ್ಯಾಕ್ಟರ್ ಹಾಗೂ ಜೆಸಿಬಿಯನ್ನು ಬಳಸಲಾಗುತ್ತಿದೆ.

’ಪುರಸಭೆಯಲ್ಲಿ 26 ಜನ ಪೌರಕಾರ್ಮಿಕರು ಹಾಗೂ 19 ಜನ ಕಸ ವಿಲೇವಾರಿ ಸಿಬ್ಬಂದಿ ಹಾಗೂ ವಾಹನ ಚಾಲಕರಿದ್ದಾರೆ. 3 ಜನ ಮೇಲ್ವಿಚಾರಕರು ಕಸ ವಿಲೇವಾರಿ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದ್ದಾರೆ‘ ಎಂದು ಪುರಸಭೆಯ ನೈರ್ಮಲ್ಯ ನಿರೀಕ್ಷಕ ರಾಜಶೇಖರಯ್ಯ ಹೀರೇಮಠ ತಿಳಿಸಿದ್ದಾರೆ.

8 ವಾರ್ಡ್‌, 12 ಪೌರ ಕಾರ್ಮಿಕರು, ಒಂದು ವಾಹನ:

ಯಡ್ರಾಮಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 8 ವಾರ್ಡ್‌ಗಳಿದ್ದು, 12 ಪೌರ ಕಾರ್ಮಿಕರು ನಿತ್ಯ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಕಸ ವಿಲೇವಾರಿಗೆ ಇಲ್ಲಿ ಇರುವುದು ಒಂದು ವಾಹನ ಮಾತ್ರ.

ಪಟ್ಟಣ ಪಂಚಾಯಿತಿಯು ಅನುದಾನ ಹಾಗೂ ಪೌರ ಕಾರ್ಮಿಕರ ಕೊರತೆ ಎದುರಿಸುತ್ತಿದೆ. ಇನ್ನೂ 11 ಜನ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ.

ಪಟ್ಟಣ ಪಂಚಾಯಿತಿಯ 15ನೇ ಹಣಕಾಸು ಯೋಜನೆಯಲ್ಲಿ ಟ್ರ್ಯಾಕ್ಟರ್, ಟ್ರಾಲಿ, ಆಟೊ ಟಿಪ್ಪರ್, ಮನೆ ಮನೆ ಕಸ ಸಂಗ್ರಹಕ್ಕೆ ಕೈಯಿಂದ ತಳ್ಳುವ ಗಾಡಿ ಖರೀದಿಸಲು ಪಟ್ಟಣ ಪಂಚಾಯಿತಿ ಮುಂದಾಗಿದೆ.

ಕಸ ಸಂಗ್ರಹಣೆ ತೊಟ್ಟಿಗಳಿಲ್ಲ:

ಕಾಳಗಿ ಪಟ್ಟಣದಲ್ಲಿ 8 ವಾರ್ಡ್‌ಗಳಿದ್ದು, ಮನೆ, ಮನೆ ಕಸ ಸಂಗ್ರಹ ಕೆಲಸ ಆಗುತ್ತಿಲ್ಲ. ಕಸ ಸಂಗ್ರಹಣೆಗೆ ಒಂದು ಹಳೆ ಟಂಟಂ ಇದೆ. 17 ಜನ ಪೌರಕಾರ್ಮಿಕರ ಪೈಕಿ 10 ಜನ ಮಾತ್ರ ಇದ್ದಾರೆ. ಕಸ ವಿಲೇವಾರಿಗೆ ನಿರ್ದಿಷ್ಟ ಸ್ಥಳ ಇಲ್ಲ. ಯಾವುದೇ ವಾರ್ಡ್‌ನಲ್ಲೂ ಕಸ ಸಂಗ್ರಹಣೆ ತೊಟ್ಟಿಗಳಿಲ್ಲ. ಕಾರ್ಮಿಕರು ಸಂಗ್ರಹಿಸಿದ ಒಣ ಕಸವನ್ನು ಒಂದೆಡೆ ಸುಡಲಾಗುತ್ತಿದೆ. ಹಸಿ ಕಸ ವಿಲೇವಾರಿ ಮಾಡಲಾಗುತ್ತಿದೆ.

‘ಈಚೆಗೆ ಒಂದು ಹೊಸ ಟ್ರ್ಯಾಕ್ಟರ್, ಟಂಟಂ ಖರೀದಿಸಲಾಗಿದೆ. ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ. ಕಸ ವಿಲೇವಾರಿಗೆ 6 ಎಕರೆ ಭೂಮಿ ಖರೀದಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮನೆ – ಮನೆಗೆ ತೆರಳಿ ಕಸ ಸಂಗ್ರಹಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ ತಿಳಿಸಿದ್ದಾರೆ.

‘ಮನೆ–ಮನೆ ಕಸ ಸಂಗ್ರಹ; ದೂರದ ಮಾತು’:

ಕಮಲಾಪುರದಲ್ಲಿ ಮನೆ–ಮನೆ ಕಸ ಸಂಗ್ರಹ ದೂರದ ಮಾತು. ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ಇದ್ದರೂ, ಪಟ್ಟಣ ಪಂಚಾಯಿತಿ ವಿಲೇವಾರಿಗೆ ಮುಂದಾಗುತ್ತಿಲ್ಲ ಎಂದು ಪಟ್ಟಣದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಈ ಹಿಂದೆ ಗ್ರಾಮ ಪಂಚಾಯಿತಿ ಇದ್ದಾಗ ಕಸ ವಿಲೇವಾರಿಗೆ ಟಂಟಂ ವಾಹನ ಖರೀದಿಸಿದ್ದರು. ಸದ್ಯ ಕಸ ವಿಲೇವಾರಿ ಮಾಡುತ್ತಿಲ್ಲ. ವಾಹನ ನಿರುಪಯುಕ್ತವಾದಂತಾಗಿದೆ. ಕಸ ಗುಡಿಸುವುದು, ಸಂಗ್ರಹ, ವಿಲೇವಾರಿಗೆ ಪೌರ ಕಾರ್ಮಿಕರ ಕೊರತೆ ಇದೆ. ಇದ್ದವರಿಗೂ ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಬಸ್‌ ನಿಲ್ದಾಣ ಪ್ರದೇಶ, ಬಸವೇಶ್ವರ ವೃತ್ತ, ಮಾರುಕಟ್ಟೆ ಪ್ರದೇಶದಲ್ಲಿ ಕಸದ ರಾಶಿ ಇದೆ. ತರಕಾರಿ, ಹಣ್ಣಿನ ವ್ಯಾಪಾರಿಗಳು, ದಿನಸಿ ಅಂಗಡಿ, ಬೀದಿ ಬದಿಯ ವ್ಯಾಪಾರಿಗಳು ಬಸ್‌ ನಿಲ್ದಾಣ ಹತ್ತಿರದ ನಾಲೆಯಲ್ಲಿ ಕಸ ಬಿಸಾಡುತ್ತಿದ್ದು, ಇಡೀ ಪ್ರದೇಶದಲ್ಲಿ ಗಬ್ಬುವಾಸನೆ ಆವರಿಸಿದೆ. ಪಟ್ಟಣ ಪಂಚಾಯಿತಿ ಸ್ವಚ್ಛತೆಗೆ ಗಮನ ಕೊಡುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

‘ಕರೆ ಮಾಡಿದರೂ ಸ್ಪಂದಿಸುವುದಿಲ್ಲ’:

ಅಫಜಲಪುರ ಪಟ್ಟಣದಲ್ಲಿ ಸುಮಾರು 40 ಸಾವಿರ ಜನಸಂಖ್ಯೆ ಇದ್ದು, 23 ವಾರ್ಡ್‌ಗಳಿವೆ. ನಿತ್ಯ ಜನರು ಹೊರಗೆ ಎಸೆಯುವ ತ್ಯಾಜ್ಯ ವಸ್ತುಗಳ ರಾಶಿಯಲ್ಲಿ ಹಂದಿ, ನಾಯಿಗಳಿರುತ್ತವೆ. ಪ್ರತಿ ವಾರ್ಡ್‌ನಲ್ಲಿ ಕಸದ ತೊಟ್ಟಿಗಳು ಇರದ ಕಾರಣ ಜನರು ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುತ್ತಾರೆ.

’ಪಟ್ಟಣದಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ವಾರ್ಡ್‌ನಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಬೇರೆಡೆ ಸ್ಥಳಾಂತರಿಸಲು ಪುರಸಭೆಗೆ ದೂರವಾಣಿ ಕರೆ ಮಾಡಿದರೂ ಸ್ಪಂದಿಸುವುದಿಲ್ಲ‘ ಎಂದು ಪಟ್ಟಣದ ನಿವಾಸಿ ಅಂಬಾರಾಯ ಹರಳಯ್ಯ ದೂರುತ್ತಾರೆ.

’ವಾರ್ಡ್‌ಗಳಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ಪಟ್ಟಣದ ಹೊರಗಡೆ ಸ್ಥಳಾಂತರ ಮಾಡಲು 13 ವಾಹನಗಳಿವೆ. ಆದರೂ ಅವು ಸಾಕಾಗುತ್ತಿಲ್ಲ. ಅದಕ್ಕಾಗಿ ಪ್ರತಿ ವರ್ಷ ಕಸ ವಿಲೇವಾರಿಗೆ ಟೆಂಡರ್‌ ಕರೆಯಲಾಗುತ್ತದೆ. ಈ ಬಾರಿ ಟೆಂಡರ್ ಕರೆಯಲಾಗಿದ್ದು, 3 ಏಜೆನ್ಸಿಯವರು ಟೆಂಡರ್ ಹಾಕಿದ್ದಾರೆ. ಕಳೆದ ವರ್ಷ ಸುಮಾರು ₹35 ಲಕ್ಷಕ್ಕೆ ಕಸ ವಿಲೇವಾರಿ ಟೆಂಡರ್ ನೀಡಲಾಗಿತ್ತು‘ ಎಂದುಪುರಸಭೆ ಮುಖ್ಯಾಧಿಕಾರಿ ಅಶೋಕ ಬಿಲಗುಂದಿ ಮಾಹಿತಿ ನೀಡಿದರು.

ಇದ್ದೂ ಇಲ್ಲದಂತಿರುವ ಘನತ್ಯಾಜ್ಯ ವಿಲೇವಾರಿ ಘಟಕ:

ಚಿಂಚೋಳಿ ಪುರಸಭೆ ವ್ಯಾಪ್ತಿಯಲ್ಲಿ 21 ಸಾವಿರ ಜನಸಂಖ್ಯೆಯಿದೆ. 5 ವರ್ಷಗಳಿಂದ ಮನೆ ಮನೆ ಕಸ ಸಂಗ್ರಹ ನಡೆಯುತ್ತಿದೆ. ಆರಂಭದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಆದರೆ ಈಚೆಗೆ ವಾಹನಗಳು ನಿಯಮಿತವಾಗಿ ಬಾರದ ಕಾರಣ ಕಸ ಬೇರೆ ಕಡೆ ಎಸೆದು ಸುಡಲಾಗುತ್ತಿದೆ.

ಪುರಸಭೆ ವ್ಯಾಪ್ತಿಯ ಜನವಸತಿ ಪ್ರದೇಶಗಳ ನಿವಾಸಿಗಳಿಗೆ ಹಸಿ ಕಸ ಮತ್ತು ಒಣ ಕಸ ಹಾಕಲು ಮನೆಗಳ ಮುಂದೆ 5 ರಿಂದ 6 ಅಡಿ ಎತ್ತರ ಮತ್ತು ಒಂದು ಅಡಿ ಅಗಲದ ಎರಡು ಪ್ಲಾಸ್ಟಿಕ್ ಕೊಳವೆಗಳನ್ನು ಸ್ಥಾಪಿಸಲಾಗಿದೆ. ಮನೆಯಲ್ಲಿನ ಹಸಿಕಸವನ್ನು ಒಂದು ಕೊಳವೆಯಲ್ಲಿ, ಒಣಕಸವನ್ನು ಇನ್ನೊಂದು ಕೊಳವೆಯಲ್ಲಿ ಹಾಕಬೇಕು ಎಂದು ಪುರಸಭೆ ತಿಳಿಸಿದೆ. ಆದರೆ, ಅವುಗಳನ್ನು ಅಳವಡಿಸಿ 6 ತಿಂಗಳಾದರೂ ಒಮ್ಮೆಯೂ ತೆಗೆದು ಅದರಲ್ಲಿನ ಗೊಬ್ಬರ ವಿಲೇವಾರಿ ಮಾಡಿಲ್ಲ. ಜನರೂ ಇದರ ಬಗ್ಗೆ ಉದಾಸೀನ ಮಾಡಿದ್ದು ಕೊಳವೆಗಳಲ್ಲಿ ಕಸ ವಿಂಗಡಿಸಿ ಹಾಕುತ್ತಿಲ್ಲ.

ಇಲ್ಲಿನ ನೀಮಾಹೊಸಳ್ಳಿ ರಸ್ತೆಯ ಬದಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಿ ದಶಕ ಸಮೀಪಿಸುತ್ತಿದ್ದರೂ ಅಲ್ಲಿ ಕಸ ವಿಂಗಡಣೆ, ಗೊಬ್ಬರ ತಯಾರಿಕೆ ಸಮರ್ಪಕವಾಗಿ ನಡೆಯುತ್ತಿಲ್ಲ. ಸಿಬ್ಬಂದಿ ಕೊರತೆ ಎದುರಾಗಿದೆ. ವಾಹನಗಳ ತೂಕದ ಯಂತ್ರ ಸೇರಿದಂತೆ ಘಟಕದಲ್ಲಿನ ಹಲವು ಯಂತ್ರೋಪಕರಣಗಳು ಬಳಕೆಯಾಗುತ್ತಿಲ್ಲ.

ಕಲಬುರ್ಗಿ: ತ್ಯಾಜ್ಯ ಸಂಗ್ರಹದ ಖರ್ಚು ವೆಚ್ಚ

₹ 2 ಕೋಟಿ; ನಗರದಲ್ಲಿನ ಗುತ್ತಿಗೆ ಪೌರಕಾರ್ಮಿಕರ ಒಟ್ಟು ವೇತನ

₹ 35 ಲಕ್ಷ; ವಾಹನಗಳಿಗೆ ಇಂಧನ ಹಾಗೂ ನಿರ್ವಹಣೆ ವೆಚ್ಚ (ತಿಂಗಳಿಗೆ)

₹50 ಲಕ್ಷ; ಸ್ವಚ್ಛತೆಯ ಬಗ್ಗೆ ಜಾಗೃತಿ ಹಾಗೂ ಇನ್ನಿತರ ವೆಚ್ಚ (ವರ್ಷಕ್ಕೆ)

ಅಂಕಿ–ಅಂಶ

112;ಮಹಾನಗರ ಪಾಲಿಕೆಯ ಪೌರಕಾರ್ಮಿಕರು

1,024;ಗುತ್ತಿಗೆ ಪೌರಕಾರ್ಮಿಕರು

139;ತ್ಯಾಜ್ಯ ಸಂಗ್ರಹ ವಾಹನಗಳ ಚಾಲಕರು

139;ಕಸ ಸಂಗ್ರಹಿಸುವ ಹಳೆ ವಾಹನಗಳು

49;ಹೊಸ ವಾಹನಗಳು (ಮುಂದಿನ ತಿಂಗಳು ರಸ್ತೆಗಿಳಿಯಲಿವೆ)

190 ರಿಂದ 210 ಟನ್‌; ಕಲಬುರ್ಗಿ ನಗರದಲ್ಲಿ ನಿತ್ಯ ಸಂಗ್ರಹವಾಗುವ ತ್ಯಾಜ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT