ಮಂಗಳವಾರ, ನವೆಂಬರ್ 19, 2019
29 °C
ಡಯಾಲಿಸ್‌ ಮಾಡುವಾಗ ಸಾವು: ತಜ್ಞರ ತಂಡ ಜಿಮ್ಸ್‌ಗೆ ಭೇಟಿ

ಅವಘಡಕ್ಕೆ ಕೆಮಿಕಲ್‌ ಪ್ರಮಾಣ ಹೆಚ್ಚಳ ಶಂಕೆ

Published:
Updated:
Prajavani

ಕಲಬುರ್ಗಿ: ಇಲ್ಲಿನ ಜಿಲ್ಲಾ ಆಸ್ಪತ್ರೆ ಜಿಮ್ಸ್‌ನಲ್ಲಿ ಡಯಾಲಿಸಿಸ್‌ ಮಾಡುವಾಗಲೇ ಶಹಾಬಾದ್ ಬಾಲಕ ಆಕಾಶ್‌ (16) ಮೃತಪಟ್ಟು, ಇನ್ನುಳಿದ 12 ಜನರ ಆರೋಗ್ಯ ಏರುಪೇರಾದ್ದರಿಂದ ಆರೋಗ್ಯ ಇಲಾಖೆಯ ಉಪನಿರ್ದೇಶಕ ಸೆಲ್ವರಾಜ್‌ ನೇತೃತ್ವದ ಅಧಿಕಾರಿಗಳ ತಂಡ ಡಯಾಲಿಸಿಸ್‌ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಒಂದೂವರೆ ತಾಸಿಗೂ ಅಧಿಕ ಕಾಲ ಘಟಕದ ಯಂತ್ರಗಳು, ಮುಖ್ಯ ನಿಯಂತ್ರಣ ಕೊಠಡಿ, ಆರ್‌.ಒ. ಘಟಕವನ್ನು ತಪಾಸಣೆಗೆ ಒಳಪಡಿಸಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೆಲ್ವರಾಜ್‌, ಘಟನೆಗೆ ಕಾರಣ ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ. ಕೆಮಿಕಲ್ ಪ್ರಮಾಣದ ಹೆಚ್ಚಳದಿಂದ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಘಟನೆಗೆ ನಿಖರ ಕಾರಣ ಇನ್ನಷ್ಟೇ ಪತ್ತೆಯಾಗಬೇಕಿದೆ. ಡಯಾಲಿಸಿಸ್‌ ಮಾಡುವ ಸಂದರ್ಭದಲ್ಲಿ ಬಳಸಲಾದ ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಈ ಅವಘಡಕ್ಕೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಕಾಯ್ದು ವಾಪಸಾದ ರೋಗಿಗಳು: ಡಯಾಲಿಸಿಸ್‌ ಘಟಕ ತಾತ್ಕಾಲಿಕವಾಗಿ ಸ್ಥಗಿತವಾದ ಮಾಹಿತಿ ಇಲ್ಲದೇ ಬಂದಿದ್ದ ನಾಲ್ಕೈದು ರೋಗಿಗಳು ವಾಪಸಾದರು. ಜೇವರ್ಗಿ ತಾಲ್ಲೂಕಿನ ಅಂದೋಲಾದಿಂದ ಬಂದಿದ್ದ ನಾಗರಾಜ ಹಾಗೂ ಅಫಜಲಪುರ ತಾಲ್ಲೂಕಿನ ಮಾಶ್ಯಾಳದಿಂದ ಮಗನನ್ನು ಕರೆತಂದಿದ್ದ ನಿರ್ಮಲಾ ಎಂಬುವವರು ಬಡವರಾದ ನಮಗೆ ಖಾಸಗಿ ದವಾಖಾನೆಗೆ ಹೋಗಿ ಡಯಾಲಿಸಿಸ್‌ ಮಾಡಿಸುವುದು ಆಗುವುದಿಲ್ಲ. ಕೂಡಲೇ ಇದನ್ನು ಚಾಲೂ ಮಾಡಬೇಕು ಎಂದು ಕಣ್ಣೀರಿಡುತ್ತಾ ಹೇಳಿದರು.

ಡಯಾಲಿಸಿಸ್‌ ಘಟಕದಲ್ಲಿ ತೊಂದರೆ ಕಾಣಿಸಿಕೊಂಡ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದ್ದ 12 ಜನರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪೈಕಿ ಒಬ್ಬರು ನಮ್ಮ ಸಲಹೆಯನ್ನು ಮೀರಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ ಎಂದು ಜಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ತಿಳಿಸಿದರು.

ಪ್ರತಿಕ್ರಿಯಿಸಿ (+)