ಸೋಮವಾರ, ಸೆಪ್ಟೆಂಬರ್ 20, 2021
24 °C
ಕೋವಿಡ್ ವಾರ್ಡ್‌ನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯಿಂದಲೇ ಕೃತ್ಯ

ಕಲಬುರ್ಗಿ: ಜಿಮ್ಸ್‌ ಪ್ರಕರಣ- ಬಯಲಾದ ವಿಡಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಜಿಮ್ಸ್‌ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ ಸೋಂಕಿತ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯು ಈ ಹಿಂದೆ ಇನ್ನೊಬ್ಬ ಮಹಿಳೆ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಪ್ರೇಮಸಾಗರ ಅಲಿಯಾಸ್‌ ಪಿಂಟು ಎಂಬಾತ ಜೂನ್‌ 9ರಂದು ಜಿಮ್ಸ್‌ನ ಕೋವಿಡ್‌ ವಾರ್ಡ್‌ನಲ್ಲಿ 25 ವರ್ಷದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆ ಮಹಿಳೆ ಜೂನ್‌ 16ರಂದು ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲೇ ಮೃತಪಟ್ಟರು. ಈ ಘಟನೆಗೂ ಕೆಲ ದಿನಗಳ ಮುನ್ನ ಇದೇ ಆರೋಪಿ ಇನ್ನೊಬ್ಬ ಮಹಿಳೆಯೊಂದಿಗೆ ಲಿಫ್ಟ್‌ನಲ್ಲಿ ಅಸಭ್ಯವಾಗಿ ವರ್ತಿಸಿದ್ದ. ವಿಷಯವನ್ನು ಆ ಮಹಿಳೆ ತಮ್ಮ ಕುಟುಂಬದವರಿಗೆ ತಿಳಿಸಿದ್ದರು. ಕುಟುಂಬದ ಸದಸ್ಯರು ಜಿಮ್ಸ್‌ನ ಬೌನ್ಸರ್‌ಗಳ ನೆರವಿನೊಂದಿಗೆ ಆರೋಪಿಯನ್ನು ‌ಹಿಡಿದಿದ್ದರು. ಆಸ್ಪತ್ರೆಯಲ್ಲೇ ಭದ್ರತಾ ಸಿಬ್ಬಂದಿ ಸಿಬ್ಬಂದಿ ಆತನನ್ನು ಥಳಿಸಿ, ಎಚ್ಚರಿಕೆ ನೀಡಿದ್ದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಸ್ಪತ್ರೆಯ ಕೋಣೆಯೊಂದರಲ್ಲಿ ಆರೋಪಿಯನ್ನು ಕೂಡಿ ಹಾಕಿದ ಬೌನ್ಸರ್‌ಗಳು ತರಾಟೆ ತೆಗೆದುಕೊಂಡರು. ಮಹಿಳೆಯ ಸಂಬಂಧಿಕರು ಕೂಡ ಆತನನ್ನು ಬೈದು, ಕೆನ್ನೆಗೆ ಹೊಡೆದರು. ನಂತರ ಬೌನ್ಸರ್‌ಗಳು ‘ಇಂಥ ವರ್ತನೆ ಇನ್ನೊಮ್ಮೆ ಮಾಡಿದರೆ ಸುಮ್ಮನಿರುವುದಿಲ್ಲ. ನಿನ್ನನ್ನು ಆಸ್ಪತ್ರೆ ಒಳಗೇ ಬಿಡುವುದಿಲ್ಲ. ಇದೇ ಕೊನೆ’ ಎಂದು ಎಚ್ಚರಿಕೆ ಕೊಟ್ಟು ಕಳಿಸಿದ್ದರು. ಇದನ್ನು ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ.‌

ಮುನ್ನೆಚ್ಚರಿಕೆ ವಹಿಸದ ಅಧಿಕಾರಿಗಳು: ‘ಆರೋಪಿ ಪ್ರೇಮಸಾಗರ ಅಸಭ್ಯ ವರ್ತನೆ ಕುರಿತು ಮಹಿಳೆ ನೇರವಾಗಿ ದೂರು ನೀಡದಿದ್ದರೂ ಆತನ ಮೇಲೆ ಜಿಮ್ಸ್‌ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಅವರು ಕ್ರಮ ಕೈಗೊಳ್ಳಲಿಲ್ಲ. ಪೊಲೀಸರಿಗೂ ಮಾಹಿತಿ ನೀಡಲಿಲ್ಲ. ಇದೇ ಕಾರಣಕ್ಕೆ ಆತ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಮುಂದಾದ. ಜಿಮ್ಸ್ ಅಧಿಕಾರಿಗಳ ಬೇಜವಾಬ್ದಾರಿ ತೋರಿರುವುದು ಇದರಲ್ಲಿ ಸ್ಪಷ್ವವಾಗಿ ಗೋಚರಿಸುತ್ತದೆ’ ಎಂದು ರಾಷ್ಟ್ರೀಯ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾದ್ಯಕ್ಷೆ ಕೆ.ನೀಲಾ ದೂರಿದ್ದಾರೆ.

‘ಆರೋಪಿ ಪ್ರೇಮಸಾಗರ ಕೋವಿಡ್‌ನಿಂದ ಮೃತಪಟ್ಟವರ ಶವ ಸಾಗಿಸುವ ಆಂಬುಲೆನ್ಸ್‌ ಚಾಲಕ. ಜಿಮ್ಸ್‌ನಲ್ಲಿ ಸಾವು ಸಂಭವಿಸಿದಾಗ ಆತ ವಾರ್ಡ್‌ನಲ್ಲಿ ಬಂದು ಶವ ಸಾಗಿಸುತ್ತಿದ್ದ. ಹೀಗಾಗಿ, ಆತ ಆಸ್ಪತ್ರೆಯ ಒಳಗೆ ಬಂದಿದ್ದನ್ನು ಸಿಬ್ಬಂದಿ ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಜಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ ಹೇಳುತ್ತಾರೆ.

ಜಿಲ್ಲಾಧಿಕಾರಿ ವ್ಯತಿರಿಕ್ತ ಹೇಳಿಕೆ: ‘ನಮ್ಮ ಕುಟುಂಬದ ಮಹಿಳೆ ಮೇಲೆ ಅತ್ಯಾಚಾರವಾಗಿಲ್ಲ, ಅತ್ಯಾಚಾರಕ್ಕೆ ಯತ್ನವೂ ನಡೆದಿಲ್ಲ. ಈ ವಿಚಾರ ಕೈಬಿಡಬೇಕು’ ಎಂದು ಆಕೆಯ ಕುಟುಂಬದವರೇ ನನಗೆ ಮನವಿ ನೀಡಿದ್ದಾರೆ. ಅದಾಗಿಯೂ ಪ್ರಕರಣವನ್ನು ಪೊಲೀಸ್‌ ತನಿಖೆಗೆ ಒಪ್ಪಿಸಿದ್ದೇವೆ. ‌ತನಿಖೆ ವರದಿ ಬಂದ ಬಳಿಕ ಸ್ಪಷ್ಟವಾಗಲಿದೆ. ಹಾಗಾಗಿ, ಖಾಸಗಿ ಆಂಬುಲೆನ್ಸ್‌ ಚಾಲಕ ಕೋವಿಡ್‌ ವಾರ್ಡ್‌ಗೆ ನುಗ್ಗಿದ ವಿಷಯವನ್ನೇ ಗಂಭೀರವಾಗಿ ಪರಿಗಣಿಸಿದ್ದು, ಕಾರಣ ಕೇಳಿ ಜಿಮ್ಸ್‌ ನಿರ್ದೇಶಕರಿಗೆ ಷೋಕಾಸ್‌ ನೋಟಿಸ್‌ ನೀಡಿದ್ದೇನೆ’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಇಷ್ಟಾದ ಮೇಲೆ ಜಿಮ್ಸ್‌ ನಿರ್ದೇಶಕಿ ಡಾ.ಕವಿತಾ ಪಾಟೀಲ ಅವರು, ಇಬ್ಬರು ಸಿಬ್ಬಂದಿಗೆ ನೋಟಿಸ್‌ ನೀಡಿ, ಇನ್ನಿಬ್ಬರನ್ನು ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ.

‘ಈ ರೀತಿ ಎರಡು ಘಟನೆಗಳು ನಡೆದಾಗಿಯೂ ವಿಷಯವನ್ನು ಗಂಭೀರವಾಗಿ ಪರಿಗಣಿಸದಿರುವುದು ಜಿಲ್ಲಾಧಿಕಾರಿ ಹಾಗೂ ಜಿಮ್ಸ್‌ ನಿರ್ದೇಶಕರ ಲೋಪ’ ಎಂದು ದಲಿತ ಮಾದಿಗ ಸಮನ್ವಯ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ತಾರಫೈಲ್ ಆರೋಪಿಸುತ್ತಾರೆ.

‘ಆರೋಪಿಯನ್ನು ನಾವೇ ಹಿಡಿದುಕೊಟ್ಟಿದ್ದೇವೆ’

‘ಆತ್ಯಾಚಾರ ಯತ್ನ ಮಾಡಿದ ಆರೋಪಿ ಪ್ರೇಮಸಾಗರ ಅಲಿಯಾಸ್‌ ಪಿಂಟುನನ್ನು ನಾವೇ ಪೊಲೀಸರಿಗೆ ಒಪ್ಪಿಸಿದ್ದೇವೆ. ಈ ಪ್ರಕರಣದಲ್ಲಿ ನ್ಯಾಯಸಮ್ಮತವಾಗಿ ನಡೆದುಕೊಂಡಿದ್ದೇವೆ’ ಎಂದು ಜಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಫಿವುದ್ದಿನ್ ತಿಳಿಸಿದ್ದಾರೆ.

‘ಕೆಲ ದಿನಗಳ ಹಿಂದೆ ಅರೋಪಿಯು ಲಿಫ್ಟ್‌ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರ ಬಗ್ಗೆ ದೂರು ಬಂದಿತ್ತು.  ಆದರೆ, ಮಹಿಳೆಯು ‘ಆರೋಪಿ ಅಸಭ್ಯವಾಗಿ ವರ್ತಿಸಿಲ್ಲ. ನನ್ನನ್ನು ಮುಟ್ಟಿಲ್ಲ’ ಎಂದು ಮಹಿಳೆ ಹಾಗೂ ಕುಟುಂಬದವರೇ ಹೇಳಿದ್ದರು. ಹಾಗಾಗಿ, ಆರೋಪಿಗೆ ಭದ್ರತಾ ಸಿಬ್ಬಂದಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು’ ಎಂದು ಅವರು ತಿಳಿಸಿದರು.

‘ಅದೇ ವ್ಯಕ್ತಿ ಮತ್ತೊಬ್ಬ ಸೋಂಕಿತ ಮಹಿಳೆ

ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ ಎಂಬುದು ಗೊತ್ತಾದ ಮೇಲೆ ನಾವೇ ನೇರವಾಗಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ. ಅಲ್ಲದೇ, ಆತನ ಸಂಬಂಧಿ ಮಹಿಳೆ ಜಿಮ್ಸ್‌ನಲ್ಲೇ ಕೆಲಸ ಮಾಡುತ್ತಾರೆ. ಅವರನ್ನು ಭೇಟಿ ಆಗುವ ನೆಪದಲ್ಲಿ ಆತ ಒಳಗೆ ಬರುತ್ತಿದ್ದ. ಹಾಗಾಗಿ, ಆ ಮಹಿಳೆಯನ್ನೂ ಅಮಾನತು ಮಾಡಿದ್ದೇವೆ. ಪ್ರಕರಣ ನಡೆದ ದಿನ ಕರ್ತವ್ಯದಲ್ಲಿದ್ದ ನರ್ಸಿಂಗ್‌ ಸ್ಟಾಫ್‌, ಭದ್ರತಾ ಸಿಬ್ಬಂದಿ, ಗ್ರೂಪ್‌ ಡಿ ನೌಕರರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ಮುಚ್ಚಿಡುವ ಯಾವುದೇ ಪ್ರಯತ್ನ ನಡೆದಿಲ್ಲ’ ಎಂದೂ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು