ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕಲ್ಯಾಣ’ಕ್ಕೆ ಸರ್ಕಾರ ಕಂಕಣ: ₹ 11,770 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ

Published : 17 ಸೆಪ್ಟೆಂಬರ್ 2024, 20:07 IST
Last Updated : 17 ಸೆಪ್ಟೆಂಬರ್ 2024, 20:07 IST
ಫಾಲೋ ಮಾಡಿ
Comments

ಕಲಬುರಗಿ: ‘ಕಲ್ಯಾಣ’ ಕರ್ನಾಟಕವೆಂಬ ಶಿರೋನಾಮೆ ಇಟ್ಟುಕೊಂಡರೂ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿಯನ್ನು ಕಳಚಿಕೊಳ್ಳದ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನದ ಸ್ಮರಣೆಗಾಗಿ ‘ಕಲ್ಯಾಣ ಕರ್ನಾಟಕ ಉತ್ಸವ’ ಆಚರಣೆಯ ದಿನವಾದ ಮಂಗಳವಾರ ( ಸೆ.17) ರಾಜ್ಯ ಸರ್ಕಾರವೇ ಇಲ್ಲಿಗೆ ಸ್ಥಳಾಂತರಗೊಂಡಿತ್ತು. ಕಡೆಗಣನೆಗೆ ಗುರಿಯಾಗಿದೆ ಎಂದು ಟೀಕೆಯನ್ನು ಸದಾ ಎದುರಿಸುತ್ತಾ ಬಂದಿರುವ ಈ ಪ್ರದೇಶಕ್ಕೆ ಇನ್ನಾದರೂ ‘ಪ್ರಗತಿ ವರ್ಷಧಾರೆ ಹರಿಯಬೇಕು‘ ಎಂಬ ಬೇಡಿಕೆಯನ್ನು ಈಡೇರಿಸುವತ್ತ ಸರ್ಕಾರ ಮಹತ್ವದ ದಾಖಲೆಗಳನ್ನೂ ಬರೆಯಿತು.

ಬೆಳಿಗ್ಗೆ ನಡೆದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಂಡು, ಭರವಸೆಗಳ ಹೊಂಬೆಳಕು ಚೆಲ್ಲಿದ್ದ ಸರ್ಕಾರದ ನೇತಾರರು, ಸಂಜೆಯ ಹೊತ್ತಿಗೆ ಸಚಿವ ಸಂಪುಟ ಸಭೆ ನಡೆಸಿ ಮಹತ್ವದ ಯೋಜನೆಗಳಿಗೆ ಅನುದಾನ ಒದಗಿಸುವ ಕಡತಗಳಿಗೆ ಒಪ್ಪಿಗೆಯನ್ನು ನೀಡಿದರು. ದಶಕಗಳ ಬಳಿಕ ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಉದ್ಯೋಗ ಸೃಷ್ಟಿ ಹಾಗೂ ವಿವಿಧ ಯೋಜನೆಗಳಿಗೆ ಭರಪೂರ ಅನುದಾನ ನೀಡುವ ತೀರ್ಮಾನವನ್ನೂ ಕೈಗೊಳ್ಳಲಾಯಿತು.

ಸಂಪುಟ ಸಭೆ ಬಳಿಕ ಸಚಿವರ ದಂಡಿನೊಂದಿಗೆ ತಾವೇ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಸರ್ಕಾರದ ನಿರ್ಣಯಗಳನ್ನು ಪ್ರಕಟಿಸಿದರು. 

‘ಸಂಪುಟದ ಮುಂದೆ ಬಂದಿದ್ದ ಒಟ್ಟು ₹ 12,692 ಕೋಟಿ ಮೊತ್ತದ 56 ವಿಷಯಗಳಿಗೆ ಅನುಮೋದನೆ ನೀಡಿದ್ದೇವೆ. ಇವುಗಳ ಪೈಕಿ ₹ 11,770 ಕೋಟಿ ಮೊತ್ತದ 46 ವಿಷಯಗಳು ಕಲ್ಯಾಣ ಕರ್ನಾಟಕ ಭಾಗಕ್ಕೇ ಸೇರಿದ್ದು, ಇವುಗಳಿಗೆ ಅನುಮೋದನೆ ನೀಡಲಾಗಿದೆ. ಬೀದರ್‌ ಹಾಗೂ ಕಲಬುರಗಿ ಜಿಲ್ಲೆಗಳ ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ₹ 7,200 ಕೋಟಿ ಯೋಜನೆಗೆ ಒಪ್ಪಿಗೆ ನೀಡಿದ್ದೇವೆ’ ಎಂದೂ ಅವರು ಹೇಳಿದರು.

ಕಲ್ಯಾಣದ ಖಾಲಿ ಹುದ್ದೆ ಭರ್ತಿ: ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ 17,439 ಹುದ್ದೆಗಳನ್ನು ಹಂತ–ಹಂತವಾಗಿ ಭರ್ತಿ ಮಾಡಲು ಸಂಪುಟ ಒಪ್ಪಿಗೆ ಕೊಟ್ಟಿದೆ.

‘ಹುದ್ದೆ ಭರ್ತಿಗೆ ಕಾಲಮಿತಿ ಇದೆಯೇ’ ಎಂಬ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರ ನೀಡದ ಮುಖ್ಯಮಂತ್ರಿ, ‘ಎಲ್ಲವನ್ನೂ ಒಂದೇ ಬಾರಿಗೆ ಭರ್ತಿ ಮಾಡಲು ಆಗುವುದಿಲ್ಲ. ಹಂತ–ಹಂತವಾಗಿ ಭರ್ತಿ ಮಾಡುತ್ತೇವೆ’ ಎಂದಷ್ಟೇ ಹೇಳಿದರು.

ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಬ್ಯಾಂಕ್‌ ಖಾತೆಗಳಲ್ಲಿ ಲಭ್ಯವಿರುವ ಬಡ್ಡಿ ಮೊತ್ತದಲ್ಲಿ 15 ಮಹಿಳಾ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯನ್ನು ₹ 447.76 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ.

ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಜಿ.‍ಪರಮೇಶ್ವರ, ಎಚ್.ಕೆ. ಪಾಟೀಲ, ಪ್ರಿಯಾಂಕ್ ಖರ್ಗೆ, ಶರಣ ಪ್ರಕಾಶ್ ಪಾಟೀಲ, ಶಿವರಾಜ ತಂಗಡಗಿ, ಶರಣಬಸಪ್ಪ ದರ್ಶನಾಪುರ, ಎನ್.ಎಸ್. ಬೋಸರಾಜು ಉಪಸ್ಥಿತರಿದ್ದರು.

‘ಕೇಂದ್ರವೂ ₹5000 ಕೋಟಿ ನೀಡಲಿ’

'ರಾಜ್ಯಕ್ಕೆ ನ್ಯಾಯಯುತ ಪಾಲುಕೊಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ’ ಎಂದು ಏರಿದ ಧ್ವನಿಯಲ್ಲಿ ಪ್ರತಿಪಾದಿಸುತ್ತಿರುವ ರಾಜ್ಯ ಸರ್ಕಾರ ಇಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಯೂ ಕೇಂದ್ರದ ಮುಂದೆ ಹಕ್ಕೊತ್ತಾಯ ಮಂಡಿಸುವ ನಿರ್ಣಯವನ್ನು ಕೈಗೊಂಡಿತು. ‘ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ ₹ 5000 ಕೋಟಿ ಅನುದಾನ ನೀಡುತ್ತಿದೆ. ‘371 ಜೆ’ ಜಾರಿಗೊಳಿಸಿ 10 ವರ್ಷಗಳಾದರೂ ಕೇಂದ್ರ ಸರ್ಕಾರ ಒಂದು ರೂಪಾಯಿಯನ್ನೂ ನೀಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರವೂ ಈ ಭಾಗದ ಅಭಿವೃದ್ಧಿಗೆ ಪ್ರತಿ ವರ್ಷ ₹ 5000 ಕೋಟಿ ಅನುದಾನ ನೀಡಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಗಿದ್ದು ಕೇಂದ್ರಕ್ಕೆ ಪ್ರಸ್ತಾವ ಕಳುಹಿಸಿಕೊಡುತ್ತೇವೆ’ ಎಂದು ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೀದರ್‌, ರಾಯಚೂರಿಗೆ ಪಾಲಿಕೆ

ಬೀದರ್‌ ಹಾಗೂ ರಾಯಚೂರು ನಗರಸಭೆಗಳನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಮನ್ನಣೆ ನೀಡಿದೆ. ಬೀದರ್‌ ಹಾಗೂ ರಾಯಚೂರಿಗೆ ಮಹಾನಗರ ಪಾಲಿಕೆ ರಚಿಸಲು ಸಚಿವ ಸಂಪುಟವು ಒಪ್ಪಿಗೆ ನೀಡಿತು.

ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ

ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ನಿರ್ಮಿಸಬೇಕು ಎಂಬ ಈ ಭಾಗದ ಕೂಗಿಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಡಿ ಈ ಭಾಗದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆಗಾಗಿ ಪ್ರತ್ಯೇಕ ಸಚಿವಾಲಯ ನಿರ್ಮಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇದಕ್ಕೆ ಒಬ್ಬ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಒಬ್ಬ ಮುಖ್ಯ ಎಂಜಿನಿಯರ್‌ ನೇಮಕ ಮಾಡಲಾಗುವುದು. ಎಲ್ಲ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗುವುದು’ ಎಂದು ಮುಖ್ಯಮಂತ್ರಿ ತಿಳಿಸಿದರು.

ಮಿನಿ ವಿಧಾನಸೌಧ ಇನ್ನು ‘ಪ್ರಜಾಸೌಧ’

‘ಬೀದರ್‌ ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಿಸಲು ₹ 59.80 ಕೋಟಿ ಪರಿಷ್ಕೃತ ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ. ಇದಕ್ಕೆ ‘ಪ್ರಜಾಸೌಧ’ ಎಂದು ನಾಮಕರಣ ಮಾಡಲಾಗುವುದು. ಇನ್ನು ಮುಂದೆ ತಾಲ್ಲೂಕುಗಳಲ್ಲಿ ನಿರ್ಮಿಸುವ ಮಿನಿ ವಿಧಾನಸೌಧಗಳಿಗೂ ಪ್ರಜಾಸೌಧ ಎಂದೇ ನಾಮಕರಣ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT