ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಪ್ರಮಾಣ ಪತ್ರಕ್ಕೆ ಗಡಿಬಿಬಿಡಿ

ಕಾಳಗಿ ತಾಲ್ಲೂಕಿನಲ್ಲಿ ರಂಗೇರಿದ ಗ್ರಾಮ ಪಂಚಾಯಿತಿ ಚುನಾವಣಾ ಕಣ, ಆಕಾಂಕ್ಷಿಗಳ ಭರ್ಜರಿ ತಯಾರಿ
Last Updated 7 ಡಿಸೆಂಬರ್ 2020, 14:40 IST
ಅಕ್ಷರ ಗಾತ್ರ

ಕಾಳಗಿ: ಕಾಳಗಿ ಹೊಸ ತಾಲ್ಲೂಕಾಗಿ ಅಸ್ತಿತ್ವಕ್ಕೆ ಬಂದ ಮೇಲೆ ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುತ್ತಿದೆ. ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಲು ಹೊಸ ಹುಮ್ಮಸ್ಸಿನಲ್ಲಿರುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಜಾತಿ ಪ್ರಮಾಣ ಪತ್ರಕ್ಕಾಗಿ ಇಲ್ಲಿನ ತಹಶೀಲ್ದಾರ್‌ ಕಚೇರಿಗೆ ಮುಗಿಬಿದ್ದಿದ್ದಾರೆ.

‍ಪಂಚಾಯಿತಿ ಚುನಾವಣೆ ಘೋಷಣೆಯಾದಾಗಿಂದಲೂ ಪ್ರಮಾಣ ಪತ್ರಗಳಿಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಳ್ಳಿಗಳಿಂದ ತಂಡೋಪ ತಂಡವಾಗಿ ಬರುವ ಜನ ಇಡೀ ದಿನ ಕಚೇರಿ ಮುಂದೆ ಕಾದು ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ಡಿ.11 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ವಿವಿಧ ಊರಿನ ಆಕಾಂಕ್ಷಿ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಪಡೆಯಲು ಗಡಿಬಿಡಿ ಮಾಡುತ್ತಿದ್ದಾರೆ.

‌ಜನರ ತೊಂದರೆ ತಪ್ಪಿಸಲು ಕಚೇರಿಯ ಸಿಬ್ಬಂದಿ ಪ್ರತಿ ದಿನ ರಾತ್ರಿ 7 ಗಂಟೆವರೆಗೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಡಿ 6 ಭಾನುವಾರದ ರಜೆ ಇದ್ದರೂ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಸಂಜೆಯವರೆಗೂ ಕಾರ್ಯನಿರ್ವಹಿಸಿ, ಉಮೇದುವಾರರ ಉತ್ಸಾಹ ಹೆಚ್ಚಿಸಿದರು.

ತಾಲ್ಲೂಕಿನಲ್ಲಿ ಡಿ. 22ರಂದು ಮೊದಲ ಹಂತದಲ್ಲಿ ನಡೆಯುವ ಇಲ್ಲಿನ ಚುನಾವಣೆಗೆ 17 ಗ್ರಾಮ ಪಂಚಾಯಿತಿಗಳ ಪೈಕಿ 14 ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ತಾಲ್ಲೂಕಾಡಳಿತ ಸಜ್ಜುಗೊಂಡಿದೆ. ಶೆಳ್ಳಗಿ, ಮೊಘಾ ಮತ್ತು ರುಮ್ಮನಗೂಡ ಪಂಚಾಯಿತಿಗಳ ಅವಧಿ ಇನ್ನೂ ಮುಗಿದಿಲ್ಲ. ಹಾಗಾಗಿ, ಅವುಗಳನ್ನು ಚುನಾವಣೆಯಿಂದ ಹೊರಗಿಡಲಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 122 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು 24 ಸೂಕ್ಷ್ಮ, 8 ಅತಿ ಸೂಕ್ಷ್ಮ, 56 ಸಾಮಾನ್ಯ ಹಾಗೂ 27 ಆ್ಯಕ್ಸಿಲರ್‌ ಮತಗಟ್ಟೆಗಳೆಂದು ಗುರುತಿಸಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು 76,118 ಮತದಾರರಿದ್ದು ಈ ಪೈಕಿ 38,565 ಪುರುಷರು, 37,893 ಮಹಿಳೆಯರು ಮತ್ತು 5 ಇತರ ಮತದಾರರಿದ್ದಾರೆ.

ರಾಜಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲಹಳ್ಳಿ ಮತಗಟ್ಟೆ ಅತಿಹೆಚ್ಚು ಅಂದರೆ; 1336 ಮತದಾರರನ್ನು ಹೊಂದಿದ್ದರೆ, ಅರಣಕಲ್ ವ್ಯಾಪ್ತಿಯ ಗೊಣಗಿ ಮತಗಟ್ಟೆ ಅತಿಕಡಿಮೆ ಅಂದರೆ; 216 ಮತದಾರರನ್ನು ಹೊಂದಿದೆ.

ಒಟ್ಟಾರೆ ತಾಲ್ಲೂಕಿನಲ್ಲಿ ಮೊದಲ ದಿನ ಸೋಮವಾರ ಹಲಚೇರಾ ಮತ್ತು ಪಸ್ತಾಪುರ ಪಂಚಾಯಿತಿಯಲ್ಲಿ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿವೆ ಎಂದು ತಹಶೀಲ್ದಾರ್ ನೀಲಪ್ರಭಾ ಬಬಲಾದ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT