ಮಂಗಳವಾರ, ಮೇ 17, 2022
26 °C
ತಿಂಗಳಲ್ಲಿ ₹ 1 ಸಾವಿರ ಬೆಲೆ ಇಳಿಕೆ; ಇಳುವರಿ ಕುಸಿತದಿಂದ ರೈತರಿಗೆ ನಷ್ಟ

ಶೇಂಗಾ ಧಾರಣೆ ಕುಸಿತ; ಆತಂಕ

ಸಿದ್ದರಾಜ ಎಸ್.ಮಲಕಂಡಿ Updated:

ಅಕ್ಷರ ಗಾತ್ರ : | |

Prajavani

ವಾಡಿ: ನಾಲವಾರ ವಲಯದಲ್ಲಿ ಹಿಂಗಾರು ಬೆಳೆ ಶೇಂಗಾ ಫಸಲು ಕೊಯ್ಲಿಗೆ ಬಂದಿದ್ದು, ರಾಶಿ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ.

ನಾಲವಾರ ವಲಯದ ಯಾಗಾಪುರ ಬೆಳಗೇರ, ಶಿವನಗರ, ಲಾಡ್ಲಾಪುರ ಬಾಪುನಗರ, ಹಣ್ಣಿಕೇರಾ ಸಂಕನೂರು ಹಾಗೂ ಸುಮಾರು 30 ತಾಂಡಾಗಳ ನಿರಾವರಿ ಅಶ್ರಿತ ಬೆಳೆಗಾರರು ಶೇಂಗಾ ಬೆಳೆದಿದ್ದಾರೆ.

ಪಂಪ್ ಸೆಟ್‌ಗಳ ಮೂಲಕ ನೀರುಣಿಸಿ ಶೇಂಗಾ ಬೆಳೆದ ಸಾವಿರಾರು ರೈತರು ಈಗ ಫಸಲಿನ ಖುಷಿಯಲ್ಲಿದ್ದಾರೆ. ಇದರ ಮಧ್ಯೆ ನಿರೀಕ್ಷಿತ ಇಳುವರಿ ಬಾರದೇ ಕಂಗಲಾಗಿದ್ದ ರೈತರಿಗೆ ಶೇಂಗಾ ಧಾರಣೆ ತುಸು ನೆಮ್ಮದಿ ಕೊಟ್ಟಿದೆ. ಆದರೆ ಶೇಂಗಾ ಧಾರಣೆಯಲ್ಲಿನ ಸತತ ಇಳಿಕೆ ಸಹ ಆತಂಕ ಮೂಡಿಸಿದೆ. ಜನವರಿ ಮೊದಲ ವಾರದಲ್ಲಿ ಪ್ರತಿ ಕ್ವಿಂಟಾಲ್‌ ಗೆ ₹7100 ಮಾರಾಟವಾಗಿದ್ದ ಶೇಂಗಾ ನಂತರ ಕುಸಿತ ಕಂಡಿದ್ದು ಈಗ ₹6100– 6200ಕ್ಕೆ ಬಂದು ತಲುಪಿದೆ. ಒಂದೇ ತಿಂಗಳಲ್ಲಿ ₹1 ಸಾವಿರ ರೂಪಾಯಿ ಕುಸಿತ ಕಂಡಿದೆ. ಪ್ರಾರಂಭದಲ್ಲಿ ಮಾರಿದ ಬೆಳೆಗಳಿಗೆ ಉತ್ತಮ ಧಾರಣೆ ಸಿಕ್ಕಿದೆ. ಆದರೆ ಈಗ ಬೆಲೆ ಕುಸಿತದ ಭೀತಿಗೆ ರೈತರು ಸಿಲುಕಿದ್ದಾರೆ.

ಇಳುವರಿಯಲ್ಲಾದ ನಷ್ಟ ಬೆಲೆ ಹೆಚ್ಚಳದ ಮೂಲಕ ಸ್ವಲ್ಪ ಮಟ್ಟಿಗೆ ಸರಿದೂಗಿದೆ ಎಂದು ಮೊದಲು ಸಂತಸ ವ್ಯಕ್ತಪಡಿಸಿದ್ದ ರೈತರಿಗೆ ಧಾರಣೆ ಕುಸಿತ ಚಿಂತೆಗೆ ಕಾರಣವಾಗಿದೆ.

ವಿಜಯಪುರ ಹಾಗೂ ಇತರ ಜಿಲ್ಲೆಗಳಿಂದ ಶೇಂಗಾ ವರ್ತಕರು ರೈತರ ಜಮೀನುಗಳಿಗೆ ಬಂದು ಶೇಂಗಾ ಖರೀದಿ ಮಾಡುತ್ತಿದ್ದಾರೆ. ರೈತರ ಜಮೀನಿಗೆ ಬಂದು ಫಸಲನ್ನು ತೂಕ ಮಾಡಿಸಿಕೊಂಡು ಸ್ಥಳದಲ್ಲಿಯೇ ಹಣ ಪಾವತಿ ಮಾಡುತ್ತಿರುವುದು ರೈತರಿಗೆ ವರದಾನವಾಗಿದೆ.

ಬೆಳೆದ ಶೇಂಗಾವನ್ನು ದುಬಾರಿ ಬಾಡಿಗೆ ನೀಡಿ ಟ್ರ್ಯಾಕ್ಟರ್ ಮೂಲಕ ದೂರದ ಯಾದಗಿರಿ ಹಾಗೂ ಕಲಬುರ್ಗಿ ಸಾಗಿಸಿ ಮಾರಾಟ ಮಾಡುವ ಬದಲು ವರ್ತಕರೇ ನೇರವಾಗಿ ಜಮೀನುಗಳಿಗೆ ಬಂದು ಖರೀದಿ ಮಾಡಿ ಹಣ ನೀಡುತ್ತಿರುವುದು ರೈತರಿಗೆ ಅನುಕೂಲಕರ ಎನಿಸಿದೆ. ಸಾಗಾಣೆ ವೆಚ್ಚ, ಕೂಲಿ ಎಲ್ಲವೂ ಉಳಿತಾಯವಾಗುತ್ತಿದ್ದು, ರೈತರಿಗೆ ಸಂತಸ ಮೂಡಿಸಿದೆ.

ಆದರೆ ಎಕರೆಗೆ ಸರಾಸರಿ 8– 10 ಕ್ವಿಂಟಾಲ್ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರಿಗೆ ಶೇ 40ರಷ್ಟು ಕಡಿಮೆಯಾಗಿದೆ. ಸರಾಸರಿ ಇಳುವರಿ ಕುಸಿತ ಕಂಡಿದ್ದು, ಜತೆಗೆ ಬೆಲೆ ಕುಸಿತ ರೈತರ ಚಿಂತೆಗೆ ಕಾರಣವಾಗಿದೆ.

ನಾಲವಾರ ವಲಯದಲ್ಲಿ ಈ ವರ್ಷ ದಾಖಲೆಯ 5,100 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಅತಿವೃಷ್ಟಿಯಿಂದಾಗಿ ಈ ಬಾರಿ ಇಳುವರಿ ಕಡಿಮೆಯಾಗಿದೆ

ಸತೀಶ್ ಪವಾರ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ನಾಲವಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು