ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಯಾಥ್‌ಲ್ಯಾಬ್‌ ಆರಂಭಕ್ಕೆ ತ್ವರಿತ ಕ್ರಮ’

ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪಂಚಮಹೋತ್ಸವ; ಸಚಿವ ತುಕಾರಾಂ ಭರವಸೆ
Last Updated 1 ಜುಲೈ 2019, 16:18 IST
ಅಕ್ಷರ ಗಾತ್ರ

ಗದಗ: ‘ವೈದ್ಯರ ಮೇಲಿನ ಹಲ್ಲೆ ತಡೆಗೆ ಸದ್ಯ ಇರುವ ಕಾನೂನು ಬಲಪಡಿಸುವುದೂ ಸೇರಿದಂತೆ ವೈದ್ಯರಿಗೆ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಪೂರಕ ವಾತಾವರಣ ನಿರ್ಮಿಸಲು ಸರ್ಕಾರ ಬದ್ಧವಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಹೇಳಿದರು.

ಸೋಮವಾರ ಇಲ್ಲಿ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಜಿಮ್ಸ್‌) ಪಂಚ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಮ್ಸ್‌’ನಲ್ಲಿ ಹೃದಯ ಸಂಬಂಧಿತ ರೋಗಗಳ ಪತ್ತೆ ಮತ್ತು ಚಿಕಿತ್ಸೆಗೆ ನೆರವಾಗುವಂತಹ ಅತ್ಯಾಧುನಿಕ ಪ್ರಯೋಗಾಲಯ ‘ಕ್ಯಾಥ್‌ ಲ್ಯಾಬ್‌’ ಸ್ಥಾಪನೆಗೆ ಸಿದ್ಧರಾಮಯ್ಯ ಅವರು ಮಂಡಿಸಿದ್ದ ಬಜೆಟ್‌ನಲ್ಲಿ ₹ 15 ಕೋಟಿ ಅನುದಾನ ಘೋಷಿಸಲಾಗಿದೆ. ಈ ಹಣಕಾಸು ವರ್ಷದ ಅಂತ್ಯದೊಳಗೆ ಈ ಅನುದಾನವನ್ನು ಕೊಡಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

‘ಗದುಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಕ್ರಮ ವಹಿಸಬೇಕು ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್‌) ಶಾಖೆಯನ್ನು ತೆರೆಯಬೇಕು ಎಂಬ ಶಾಸಕ ಎಚ್‌.ಕೆ ಪಾಟೀಲ ಅವರ ಮನವಿಗೆ ಸ್ಪಂದಿಸಿದ ತುಕಾರಾಂ, ‘ಇದಕ್ಕೆ ದೊಡ್ಡ ಮೊತ್ತದ ಅನುದಾನ ಬೇಕಾಗುತ್ತದೆ, ಈ ಭಾಗದ ಮುಖಂಡರು ಜತೆಯಾಗಿ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ, ಮನವಿ ಸಲ್ಲಿಸೋಣ’ ಎಂದರು.

‘ಪಂಚಮಹೋತ್ಸವ ಆಚರಿಸಿಕೊಳ್ಳುತ್ತಿರುವ ‘ಜಿಮ್ಸ್‌’, ಅಲ್ಪಾವಧಿಯಲ್ಲೇ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧನೆ ಮಾಡಿದೆ. ವೈದ್ಯಕೀಯ ಶಿಕ್ಷಣ, ಚಿಕಿತ್ಸೆ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಗದಗದಲ್ಲಿ ವೈದ್ಯಕೀಯ ಕಾಲೇಜಿನ ಅವಶ್ಯಕತೆ ಏನಿದೆ ಎಂದು ಕುಹಕವಾಡಿದವರಿಗೆ ತನ್ನ ಕಾರ್ಯಕ್ಷಮತೆಯ ಮೂಲಕವೇ ‘ಜಿಮ್ಸ್‌’ ಉತ್ತರ ಹೇಳಿದೆ.ಇದು ಖುಷಿಯ ಸಂಗತಿ’ ಎಂದು ಶಾಸಕ ಎಚ್‌.ಕೆ ಪಾಟೀಲ ಅಭಿಪ್ರಾಯಪಟ್ಟರು.

‘ಗದಗ ಜಿಲ್ಲಾ ಆಸ್ಪತ್ರೆಗೆ ಮೊದಲು ಪ್ರತಿನಿತ್ಯ ಹೊರರೋಗಿಗಳಾಗಿ ಸರಾಸರಿ 150 ಜನರು ಚಿಕಿತ್ಸೆಗೆ ಬರುತ್ತಿದ್ದರು. ಈಗ ನಿತ್ಯ ಚಿಕಿತ್ಸೆಗಾಗಿ ಬರುವ ಹೊರರೋಗಿಗಳ ಸಂಖ್ಯೆ 1 ಸಾವಿರಕ್ಕೂ ಹೆಚ್ಚಿದೆ. ಪ್ರತಿನಿತ್ಯ 20ಕ್ಕೂ ಹೆಚ್ಚು ಹೆಚ್ಚು ಹೆರಿಗೆಗಳು ಇಲ್ಲಿ ಆಗುತ್ತವೆ. ಸಂಸ್ಥೆಯು ವಿಶ್ವಮಟ್ಟದಲ್ಲಿ ಮಾನ್ಯತೆ ಗಳಿಸಬೇಕು’ ಎಂದು ಎಚ್ಕೆ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್, ಶಾಸಕ ಸಿ.ಸಿ. ಪಾಟೀಲ, ಕಳಕಪ್ಪ ಬಂಡಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಮೋಹನ ದುರಗಣ್ಣವರ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಸಿಇಒ ಮಂಜುನಾಥ ಚವ್ಹಾಣ, ಜಿಲ್ಲಾ ಶಸ್ತ್ರಚಿಕಿತ್ಸಕಡಾ. ಜಿ.ಎಸ್. ಪಲ್ಲೇದ, ಜಿಮ್ಸ್ ಪ್ರಾಚಾರ್ಯ ಡಾ. ಶ್ರೀನಿವಾಸ ದೇಶಪಾಂಡೆ, ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ಇದ್ದರು.

ಸಿಟಿಸ್ಕ್ಯಾನ್‌ ಸೌಲಭ್ಯ ಆರಂಭ
ಜಿಲ್ಲಾ ಆಸ್ಪತ್ರೆಯಲ್ಲಿ ಸಿ.ಟಿ ಸ್ಕ್ಯಾನ್‌ (ಕಂಪ್ಯೂಟೆಡ್ ಟೋಮೊಗ್ರಫಿ) ಸೌಲಭ್ಯ ಆರಂಭಗೊಂಡಿದ್ದು, ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ದುಬಾರಿ ಎನಿಸಿದ್ದ ಈ ಸೇವೆಯು ಉಚಿತವಾಗಿ ಲಭಿಸುವಂತಾಗಿದೆ. ಖಾಸಗಿ ಸಾರ್ವಜನಿಕ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ₹ 1.5 ಕೋಟಿ ಮೊತ್ತದಲ್ಲಿ ಇಲ್ಲಿ ಸಿಟಿ ಸ್ಕ್ಯಾನ್‌ ಯಂತ್ರ ಅಳವಡಿಸಲಾಗಿದ್ದು, ಜಿಲ್ಲಾ ಆಸ್ಪತ್ರೆಗೆ ಬರುವ ಮತ್ತು ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್‌) ರೋಗಿಗಳಿಗೆ ಇದರಿಂದ ಅನುಕೂಲವಾಗಲಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಸ್ಕ್ಯಾನ್ ಸೌಲಭ್ಯ ಇರದ ಕಾರಣ, ರೋಗಿಗಳು ಈ ಸೇವೆಗಾಗಿ ಖಾಸಗಿ ಆಸ್ಪತ್ರೆ ಅಥವಾ ಹುಬ್ಬಳ್ಳಿಯ ಕಿಮ್ಸ್‌ಗೆ ಹೋಗಬೇಕಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್‌ಗೆ ಕನಿಷ್ಠ ₹ 2,500 ರಿಂದ ₹ 5 ಸಾವಿರ ಖರ್ಚು ಮಾಡಬೇಕಿತ್ತು. ಇದೀಗ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಈ ಸೌಲಭ್ಯ ಲಭಿಸಲಿದೆ. ಹೊರಗಿನ ಖಾಸಗಿ ಆಸ್ಪತ್ರೆಯ ರೋಗಿಗಳಿಗೆ ರಿಯಾಯ್ತಿ ದರದಲ್ಲೂ ಈ ಸೇವೆ ಲಭ್ಯವಿದೆ.

ವೈದ್ಯರ ನೇಮಕಾತಿ ಮಾಡಿ; ಸಂಕನೂರ
‘ರಾಜ್ಯದ ವೈದ್ಯರ ತೀವ್ರ ಕೊರತೆ ಇದೆ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ 1 ಸಾವಿರ ರೋಗಿಗಳಿಗೆ ಒಬ್ಬ ವೈದ್ಯ ಇರಬೇಕು. ಆದರೆ, ರಾಜ್ಯದಲ್ಲಿ ಈ ಅನುಪಾತ 13 ಸಾವಿರ ರೋಗಿಗಳಿಗೆ ಒಬ್ಬ ವೈದ್ಯರು ಇದ್ದಾರೆ. ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಿಕೊಳ್ಳಬೇಕು. ಗುತ್ತಿಗೆ ಆಧಾರದ ನೇಮಕಾತಿ ಕೈಬಿಟ್ಟು ಸರ್ಕಾರ ಕಾಯಂ ನೇಮಕಾತಿ ಮಾಡಬೇಕು. ಜತೆಗೆ ಹೊಸ ವೈದ್ಯಕೀಯ ಕಾಲೇಜುಗಳಲ್ಲಿ ಹೊಸದಾಗಿ ನೇಮಕಗೊಂಡ ವೈದ್ಯರನ್ನೂ ಹೊಸ ಪಿಂಚಣಿ ವ್ಯವಸ್ಥೆಯ ವ್ಯಾಪ್ತಿಗೆ ತರಬೇಕು’ ಎಂದು ವಿಧಾನಪರಿಷತ್‌ ಸದಸ್ಯ ಎಸ್‌.ವಿ ಸಂಕನೂರ ಆಗ್ರಹಿಸಿದರು.

**

ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿಯೇ ರೋಗಿಗಳೊಂದಿಗೆ ಪ್ರೀತಿ ಮತ್ತು ತಾಳ್ಮೆಯಿಂದ ವರ್ತಿಸಬೇಕು. ಜೀವನ್ಮರಣ ಹೋರಾಟದಲ್ಲಿರುವ ರೋಗಿಗಳು ವೈದ್ಯರಲ್ಲೇ ದೇವರನ್ನು ಕಾಣುತ್ತಾರೆ
– ಈ ತುಕಾರಾಂ, ವೈದ್ಯಕೀಯ ಶಿಕ್ಷಣ ಸಚಿವ

**

ಭೂಮಿ ನೀಡಿದರೆ, ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು (ಏಮ್ಸ್‌) ಶಾಖೆ ಆರಂಭಿಸಲು ಸಿದ್ಧವಿದೆ. ಜಿಮ್ಸ್ ಆಡಳಿತ ಮಂಡಳಿ ಶೀಘ್ರವೇ ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಬೇಕು
– ಎಚ್.ಕೆ.ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT