ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಳಯ್ಯ‌ ಭವನಕ್ಕೆ ₹ 2.5 ಕೋಟಿ ಬಿಡುಗಡೆಗೆ ಕ್ರಮ

ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಭರವಸೆ
Last Updated 4 ಅಕ್ಟೋಬರ್ 2021, 16:41 IST
ಅಕ್ಷರ ಗಾತ್ರ

ಕಲಬುರ್ಗಿ: ಶಿವಶರಣ ಹರಳಯ್ಯ (ಸಮಗಾರ) ಮಚಗಾರ ಸಮಾಜದಿಂದ ರಾಮ ಮಂದಿರ ಹಿಂದುಗಡೆ ನಿರ್ಮಿಸಲಾಗುತ್ತಿರುವ ಹರಳಯ್ಯ ಭವನದ ಬಾಕಿ ಕಾಮಗಾರಿಗೆ ಸರ್ಕಾರದಿಂದ ಬರಬೇಕಾದ ₹ 2.5 ಕೋಟಿ ಅನುದಾನವನ್ನು ಎರಡು ವಾರದಲ್ಲಿ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಭರವಸೆ ನೀಡಿದರು.

ಶಿವಶರಣ ಹರಳಯ್ಯ (ಸಮಗಾರ) ಮಚಗಾರ ಸಮಾಜದ ಜಿಲ್ಲಾ ಘಟಕದಿಂದ ನಗರದ ಹರಳಯ್ಯ ಸಮಾಜದ ಭವನದಲ್ಲಿ ಆಯೋಜಿಸಿದ್ದ 2020–21ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಅಂಕ‌ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಗಣ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹರಳಯ್ಯ ಭವನಕ್ಕೆ ಸರ್ಕಾರದಿಂದ ಬರಬೇಕಾದ ಬಾಕಿ ಅನುದಾನ ಬಿಡುಗಡೆಗೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿದ್ದೇನೆ. ಹಣ ಬಿಡುಗಡೆಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇನ್ನು 2 ವಾರದಲ್ಲಿ ಹಣ ಬಿಡುಗಡೆಯಾಗಲಿದೆ. ನಮ್ಮ ಸರ್ಕಾರದ ಅವಧಿಯಲ್ಲಿಯೇ ಈ ಭವನ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರ್ಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಮಾತನಾಡಿ, ‘ಸುಸಂಸ್ಕೃತ ಸಮಗಾರ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಇದರ ಏಳಿಗೆಗೆ ಬದ್ಧನಾಗಿದ್ದೇನೆ. ಬಸವರಾಜ ಮತ್ತಿಮೂಡ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸಮಾಜದ ಸುಮಾರು 78 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ರಾಷ್ಟ್ರೀಯ ಉತ್ತಮ ಕೈಗಾರಿಕೋದ್ಯಮಿ ಪ್ರಶಸ್ತಿ ಪಡೆದ ರಾಜ್ಯ ಮಚಗಾರ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಶಿವಣ್ಣ ಮುಳಗುಂದ‌, ಹಿರಿಯ ನಿವೃತ್ತ ವೈದ್ಯಾಧಿಕಾರಿ ಜಿ.ಜಿ. ನಂದೂರಕರ್, ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಹಾಬಾದ್‌ನ ಬಸವೇಶ್ವರ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರಮಿಳಾ ಆರ್. ಅಂಬಲಗಿ ಮತ್ತು ರಾಜಾಪೂರ ಸರ್ಕಾರಿ ಪ್ರೌಢ ಶಾಲೆಯ ರಾಘವೇಂದ್ರ ಹಳ್ಳಿಪೇಟ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶಿವಶರಣ ಹರಳಯ್ಯ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕಾಶಿರಾಯ ಎಸ್.ನಂದೂರಕರ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಎಸ್ಪಿ ಬಿ.ಎಸ್. ಮರತೂರಕರ್‌, ಜಯಶ್ರೀ ಮತ್ತಿಮೂಡ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಂಬಾರಾಯ ರುದ್ರವಾಡಿ, ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ‌ ಜೇರಟಗಿ ಮುಖ್ಯ ಅತಿಥಿಗಳಾಗಿ ಅಗಮಿಸಿದ್ದರು.

ಸಮಾಜದ ಪದಾಧಿಕಾರಿಗಳಾದ ಹಣಮಂತ ಭಾವಿಮನಿ, ವೀರಭದ್ರಪ್ಪ ಹೆಬ್ಬಾಳ, ಸಿದ್ದಣ್ಣ ಭಾವಿಮನಿ, ಶಿವಶರಣಪ್ಪ ಹೀರಾಪೂರ, ಪುಂಡಲೀಕ ಟೆಂಗಳಿ, ಮಹಾದೇವ ಮುದ್ದಡಗಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT