ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಕೋಣೆಯಲ್ಲಿ ಕೂಡಿಹಾಕಿ ವಿವಸ್ತ್ರಗೊಳಿಸಿ ವಿಕೃತಿ

ಸೆಕೆಂಡ್‌ ಹ್ಯಾಂಡ್ ಕಾರುಗಳ ವರ್ತಕನಿಗೆ ತಿಂಗಳಿಗೆ ₹ 1 ಲಕ್ಷ ಕಮಿಷನ್ ಕೊಡುವಂತೆ ತಾಕೀತು
Published 11 ಮೇ 2024, 16:15 IST
Last Updated 11 ಮೇ 2024, 16:15 IST
ಅಕ್ಷರ ಗಾತ್ರ

ಕಲಬುರಗಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಸಂಬಂಧ ಹಣ ಕೊಡಿಸುವುದಾಗಿ ಕರೆದೊಯ್ದ ಗ್ರಾಹಕ ಹಾಗೂ ಆತನ ಸ್ನೇಹಿತರು, ಮೂವರನ್ನು ಕೋಣೆಯಲ್ಲಿ ಕೂಡಿಹಾಕಿ ವಿವಸ್ತ್ರಗೊಳಿಸಿ, ಚಿತ್ರಹಿಂಸೆ ನೀಡಿದ ಘಟನೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗಣೇಶ ನಗರದ ನಿವಾಸಿಗಳಾದ ಇಮ್ರಾನ್ ಪಟೇಲ್, ಮೊಹಮದ್ ಮತೀನ್, ಚಿತ್ತಾಪುರದ ರಮೇಶ ದೊಡ್ಡಮನಿ ಸೇರಿ ಇತರರು ನಡೆಸಿದ ವಿಕೃತಿಗೆ ಸೇಡಂ ತಾಲ್ಲೂಕಿನ ದೇವನೂರಿನ ಅರ್ಜುನಪ್ಪ ಹಣಮಂತ, ಇಸ್ಲಾಮಾಬಾದ್ ಕಾಲೊನಿಯ ಮೊಹಮದ್ ಸಮಿರೊದ್ದೀನ್ ಮತ್ತು ಹೀರಾಪುರದ ಅಬ್ದುಲ್ ರೆಹಮಾನ್ ಅವರು ಸಂಕಷ್ಟ ಅನುಭವಿಸಿದ್ದಾರೆ.

‘ಅರ್ಜುನಪ್ಪ ಬೆಂಗಳೂರಿನಿಂದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ತಂದು ಮಾರುತ್ತಿದ್ದ. ಪರಿಚಯಸ್ಥ ರಮೇಶ ಎಂಬಾತ ಕಾರು ಕೊಡಿಸುವಂತೆ ಅರ್ಜನಪ್ಪ ಅವರಿಗೆ ಕೋರಿದ್ದ. ಅದರಂತೆ ₹ 6 ಲಕ್ಷದ ಕಾರು ಇರುವುದಾಗಿ ಹೇಳಿದ ಅರ್ಜುನಪ್ಪ, ₹ 1 ಲಕ್ಷ ಕಮಿಷನ್ ಕೇಳಿದ. ಮೇ 4ರಂದು ಚಿತ್ತಾಪುರದಿಂದ ಕಾರಿನಲ್ಲಿ ಹೊರಟ ಅರ್ಜುನಪ್ಪ ಮತ್ತು ರಮೇಶ, ಕಾರು ಮಾಲೀಕ ಅಬ್ದುಲ್‌ ರೆಹಮಾನ್ ಹೇಳಿದ ನಾಗನಹಳ್ಳಿ ಕ್ರಾಸ್‌ಗೆ ಬಂದರು. ಅಬ್ದುಲ್‌ ತನ್ನ ಪರಿಚಯಸ್ಥ ಸಮಿರೊದ್ದೀನ್ ಅವರನ್ನು ಕರೆದುಕೊಂಡು ಬಂದಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಇಮ್ರಾನ್ ಬಳಿ ಹೋಗಿ ಹಣ ತರೋಣವೆಂದ ರಮೇಶ, ಮೂವರು ಸಂತ್ರಸ್ತರನ್ನು ನಾಗನಹಳ್ಳಿ ಕ್ರಾಸ್‌ನಿಂದ ಹಾಗರಗಾ ರಸ್ತೆಯ ಮನವೊಂದರ ಸಮೀಪ ಕರೆದೊಯ್ದರು. ಇಮ್ರಾನ್ ಹಾಗೂ ಆತನ ಇಬ್ಬರು ಜೊತೆಗಾರರು ಟೆಸ್ಟ್ ಡ್ರೈವ್‌ಗಾಗಿ ಅಬ್ದುಲ್ ಅವರ ಕಾರು ತೆಗೆದುಕೊಂಡು ಹೋಗಿ ಬಂದರು. ವಾಪಸ್ ಬಂದವರೇ ಮೂವರನ್ನು ಅವಾಚ್ಯ ಪದಗಳಿಂದ ಬೈದು, ಕಾರಿನಿಂದ ಎಳೆದೊಯ್ದು ಮನೆಯ ಕೋಣೆಯಲ್ಲಿ ಕೂಡಿ ಹಾಕಿದರು. 10ರಿಂದ 12 ಮಂದಿ ಸುತ್ತುವರಿದು ಮೂವರ ಬಟ್ಟೆಗಳನ್ನು ಬಿಚ್ಚಿಸಿದರು’ ಎಂದು ಮಾಹಿತಿ ನೀಡಿದ್ದಾರೆ.

ಇಮ್ರಾನ್ ಅವರು ಬ್ಯಾಟರಿ ಕರೆಂಟ್‌ನಿಂದ ಮೂವರ ಗುಪ್ತಾಂಗಕ್ಕೆ ಶಾಕ್‌ ಕೊಟ್ಟರು. ‘ಕಾರು ಕೊಡಲು ತಡ ಮಾಡಿದ್ದೀರಾ. ಎಲ್ಲೆಲ್ಲಿ ಕಾರುಗಳನ್ನು ಕೊಟ್ಟಿದ್ದೀರೋ ಅವೆಲ್ಲವನ್ನು ನಮಗೆ ಕೊಡಬೇಕು. ನಾವು ಹೇಳಿದಂತೆ ಕೇಳದೆ ಇದ್ದರೆ, ಇಲ್ಲಿಂದ ಜೀವಸಹಿತ ಹೋಗುವುದಿಲ್ಲ. ಒಬ್ಬೊಬ್ಬರು ₹ 10 ಲಕ್ಷ ಕೊಡಬೇಕು’ ಎಂದು ಹೆದರಿಸುತ್ತಾ ಬ್ಯಾಟರಿಯಿಂದ ಗುಪ್ತಾಂಗಕ್ಕೆ ಶಾಕ್ ಕೊಟ್ಟರು. ಮತೀನ್ ಸೇರಿ ಇತರೆ 12 ಮಂದಿ ಬಡಿಗೆಗಳಿಂದ ಹಲ್ಲೆ ಮಾಡಿ ತೀವ್ರವಾಗಿ ಗಾಯಗೊಳಿಸಿದರು. ಜತೆಗೆ ಸಿಗರೇಟ್‌ನಿಂದ ಸುಟ್ಟು ಗಾಯ ಮಾಡಿದರು. ಇಮ್ರಾನ್ ಅವರು ಅಬ್ದುಲ್ ಅವರ ಎದೆಗೆ ಲಾಂಗ್‌ಗಳಿಂದ ಚುಚ್ಚಿ, ಬೆನ್ನಿಗೂ ಸವರಿದ ಎಂದು ಸಂತ್ರಸ್ತರು ದೂರಿನಲ್ಲಿ ಆರೋಪಿಸಿದ್ದಾರೆ.

₹ 7 ಲಕ್ಷ ಕೊಡುವಂತೆ ಜೀವ ಬೆದರಿಕೆ: ಕೂಡಿ ಹಾಕಿದ ಮರುದಿನ (ಮೇ 5) ಇಮ್ರಾನ್ ಅರ್ಜುನಪ್ಪಗೆ ಜೀವಬೆದರಿಕೆ ಹಾಕಿದ. ಅರ್ಜುನಪ್ಪ ತಮ್ಮ ಪತ್ನಿಗೆ ಫೋನ್ ಮಾಡಿ, ₹ 50,000 ತನ್ನ ಖಾತೆಗೆ ಜಮಾ ಮಾಡಿಸಿಕೊಂಡ. ಅರ್ಜುನಪ್ಪನ ಮೊಬೈಲ್ ಕಿತ್ತುಕೊಂಡ ಇಮ್ರಾನ್, ಮೊಬೈಲ್ ಪಾಸ್‌ವರ್ಡ್‌, ಫೋನ್‌ ಪೇ ಮಾಹಿತಿ ಪಡೆದು, ₹ 4,200 ಖರ್ಚು ಮಾಡಿದ. ಸಂಜೆ 7ರ ಒಳಗೆ ₹ 7 ಲಕ್ಷ ಕೊಡುವಂತೆ ಜೀವ ಬೆದರಿಕೆ ಹಾಕಿದ. ತಿಂಗಳಿಗೆ ₹ 1 ಲಕ್ಷ ಕಮಿಷನ್ ಕೊಡುವಂತೆ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದು ತಾಕೀತು ಮಾಡಿದ್ದ. ಕೂಡಿ ಹಾಕಿದ್ದನ್ನು ತಿಳಿದು ಪೊಲೀಸರು ಬರುವುದನ್ನು ಕಂಡು ಆರೋಪಿಗಳು ಸ್ಥಳದಿಂದ ಪರಾರಿಯಾದರು ಎಂದು ದೂರಿದ್ದಾರೆ.

ಸಂತ್ರಸ್ತರ ದೂರಿನ ಅನ್ವಯ ಆರೋಪಿತರ ವಿರುದ್ಧ ಐಪಿಸಿ ಸೆಕ್ಷನ್‌ 307 (ಕೊಲೆ ಯತ್ನ), 149, 365, 342, 364(ಎ), 504, 326 ಸೇರಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT