ಕಲಬುರಗಿ/ಚಿತ್ತಾಪುರ: ಶನಿವಾರ ಸಂಜೆ ಶುರುವಾದ ಧಾರಾಕಾರ ಮಳೆಯು ರಾತ್ರಿಯಿಡಿ ಬಿಡುವಿಲ್ಲದೆ ಜಿಟಿಜಿಟಿಯಾಗಿ ಬಿತ್ತು. ಭಾನುವಾರ ಬೆಳಿಗ್ಗೆ ಜೋರಾಗಿ ಬೀಳುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ.
ಮುಂಗಾರು ಹಂಗಾಮಿನ ಆಗಸ್ಟ್ ತಿಂಗಳಲ್ಲಿ ಶೇ 81ರಷ್ಟು ಮಳೆ ಕೊರತೆಯಿಂದಾಗಿ ಜಿಲ್ಲೆಯ ಕಲಬುರಗಿ, ಅಫಜಲಪುರ, ಆಳಂದ, ಚಿತ್ತಾಪುರ, ಕಾಳಗಿ, ಶಹಾಬಾದ್, ಚಿಂಚೋಳಿ ತಾಲ್ಲೂಕುಗಳ ಸೇರಿದಂತೆ ಹಲವೆಡೆ ತೇವಾಂಶದ ಕೊರತೆಗೆ ಹೆಸರು, ತೊಗರಿ, ಹತ್ತಿ, ಸೋಯಾದಂತಹ ಬೆಳೆಗಳು ಬಾಡುತ್ತಿದ್ದವು. ಶನಿವಾರ ತಡರಾತ್ರಿ ಸುರಿದ ಜಿಟಿಜಿಟಿ ಮಳೆ ಹಾಗೂ ಭಾನುವಾರ ಬೆಳಿಗ್ಗೆಯಿಂದಲೇ ಬೀಳುತ್ತಿರುವ ಜೋರು ಮಳೆಯು ಬೆಳೆಗಳಿಗೆ ಜೀವಕಳೆ ತಂದಿದೆ.
ಭಾನುವಾರ ಆಗಿದ್ದರಿಂದ ಸರ್ಕಾರಿ, ಖಾಸಗಿ ಕಂಪನಿ ನೌಕರರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರಿಗೆ ಮಳೆಯಿಂದ ಯಾವುದೇ ಅಡ್ಡಿಯಾಗಿಲ್ಲ.
ನಿರಂತರ ಮಳೆಯಿಂದ ರಸ್ತೆಗಳು ಮತ್ತು ಹೊಲಗದ್ದೆಗಳಲ್ಲಿ ಮಳೆ ನೀರು ಹರಿದಾಡುತ್ತಿದೆ. ಕೆಲವು ಕಡೆ ಕಟಾವಿಗೆ ಅಣಿಗೊಂಡಿದ್ದು ರಾಶಿ ಮಾಡದೆ ಉಳಿದಿರುವ ಹೆಸರು ಮತ್ತು ಉದ್ದಿನ ಬೆಳೆಗಳ ರೈತರು ಬೆಳೆ ಹಾನಿಯ ಆತಂಕಕ್ಕೆ ಸಿಲುಕಿದ್ದಾರೆ.
ವಿದ್ಯುತ್ ಕಣ್ಣುಮುಚ್ಚಾಲೆ: ಶನಿವಾರ ಸಂಜೆಯಿಂದ ಭಾನುವಾರ ಬೆಳಗಿನವರೆಗೆ ಗ್ರಾಮೀಣ ಸೇರಿದಂತೆ ನಗರದ ಹಲವು ಭಾಗದಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆ ಮುಂದುವರೆದಿದೆ. ಪದೇ ಪದೇ ವಿದ್ಯುತ್ ಹೋಗುವುದು, ಬರುವುದು ನಡೆಯುತ್ತಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ರಾತ್ರಿ ನಿದ್ದೆ ಮಾಡಲಾಗದೆ ಜನರು ಚಡಪಡಿಸಿದರು.
ಮಳೆ ವಿವರ: ಚಿತ್ತಾಪುರ- 105.2 ಮಿ.ಮೀ., ಅಳ್ಳೊಳ್ಳಿ- 32.0, ನಾಲವಾರ- 18.2, ಗುಂಡಗುರ್ತಿ 12.2 ಮಿ.ಮೀ., ಮಳೆ ದಾಖಲಾಗಿದೆ.
ಕಾಳಗಿಯಲ್ಲಿ 22.4 ಮಿ.ಮೀ., ಹೇರೂರು ಕೆ 80.2 ಮಿ.ಮೀ. ಕೊಡ್ಲಿ 38.8 ಮಿ.ಮೀ., ಕಮಲಾಪುರ 14.8 ಮಿ.ಮೀ., ಮಹಾಗಾಂವ್ ಡ್ಯಾಮ್ 18 ಮಿ.ಮೀ ಮತ್ತು ಮಹಾಗಾಂವ್ ಕ್ರಾಸ್ 23.5 ಮಿ.ಮೀ. ಮಳೆ ಸುರಿದಿದೆ.
ಕಲಬುರಗಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.