ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನಿಗೆ ನುಗ್ಗಿದ ನೀರು; ಅಪಾರ ಬೆಳೆ ಹಾನಿ

ಅಪೂರ್ಣ ಕಾಲುವೆಯಿಂದ ಅವಾಂತರ; ರೈತರ ಆರೋಪ
Last Updated 17 ಸೆಪ್ಟೆಂಬರ್ 2020, 9:06 IST
ಅಕ್ಷರ ಗಾತ್ರ

ಜೇವರ್ಗಿ: ತಾಲ್ಲೂಕಿನ ಹರವಾಳ ಗ್ರಾಮದ ಜಮೀನಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದಿಂದ ಕಾಲುವೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಕೈ ಬಿಟ್ಟಿರುವುದರಿಂದ ಕಾಲುವೆ ಒಡೆದು ನೀರು ಜಮೀನುಗಳಿಗೆ ನುಗ್ಗಿ ಸುಮಾರು 25-30 ಎಕರೆ ಹತ್ತಿ, ತೊಗರಿ ಸೇರಿದಂತೆ ವಿವಿಧ ಮುಂಗಾರು ಬೆಳೆಗಳು ಕೊಚ್ಚಿಕೊಂಡು ಹೋಗಿವೆ.

ಭಾರಿ ಮಳೆಯಿಂದ ಹರವಾಳ- ನೆಲೋಗಿ ರಸ್ತೆ ಮಧ್ಯದಲ್ಲಿರುವ ಹಳ್ಳದ ಹತ್ತಿರ ಕೃಷ್ಣಾ ಕಾಲುವೆ ಒಡೆದು ಹೆಚ್ಚಿನ ಪ್ರಮಾಣದಲ್ಲಿ ಹಳ್ಳಕ್ಕೆ ಹರಿದ ನೀರು ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ.

ರೈತರು ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬೆಳೆಗಳನ್ನು ಉಳಿಸಿಕೊಳ್ಳಲು ನಾನಾ ರೀತಿಯ ಕಸರತ್ತು ಮಾಡುತ್ತಿದ್ದಾರೆ. ಅವೈಜ್ಞಾನಿಕವಾಗಿ ಕಾಲುವೆ ನಿರ್ಮಿಸಿರುವುದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ.

ಹಳ್ಳದ ಎರಡು ಬದಿಗಳಲ್ಲಿರುವ ಜಮೀನುಗಳಿಗೆ ನೀರು ನುಗ್ಗಿರುವುದರಿಂದ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ ಎಂದು ರೈತ ಗಿರಿಮಲ್ಲಪ್ಪ ಹಳ್ಳಿ ದೂರಿದ್ದಾರೆ.

ಕೊನೆ ಹಂತದಲ್ಲಿ ಕಾಲುವೆಗಳನ್ನು ನದಿಗೆ ಅಥವಾ ಹಳ್ಳಕ್ಕೆ ಬಿಡಬೇಕು. ಆದರೆ ಅದಾವುದೂ ಈ ಗ್ರಾಮದಲ್ಲಿ ನಡೆದಿಲ್ಲ. ಜೆಬಿಸಿ ವಿಭಾಗದ 14ರ ವಿತರಣಾ ಕಾಲುವೆ ಅಡಿ ಬರುವ 13ರ ಉಪ ಕಾಲುವೆಯನ್ನು ಪೊರ್ಣಗೊಳಿಸದೆ ಇರುವುದರಿಂದ ಕಾಲುವೆಯ ನೀರು ಜಮೀನುಗಳಿಗೆ ನುಗ್ಗಿ ಬೆಳೆಗಳು ಹಾನಿಯಾಗಿವೆ.

ಈ ಕಾಲುವೆಗಳನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಕೆಬಿಜೆಎನ್‍ಎಲ್ ಅಧಿಕಾರಿಗಳಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಕೂಡಾ ರೈತರ ಪರವಾಗಿ ತಿರ್ಪು ನೀಡಿ ಕಾಲುವೆ ಪೂರ್ಣಗೊಳಿಸುವಂತೆ 2018ರಲ್ಲಿಯೇ ಆದೇಶಿಸಿದೆ. ಆದರೂ ಇಲ್ಲಿಯವರೆಗೆ ಕಾಮಗಾರಿಪೂರ್ಣಗೊಳಿಸುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹಾನಿಯಾದ ಬೆಳೆಗಳಿಗೆ ಕೃಷ್ಣಾ ಭಾಗ್ಯ ಜಲ ನಿಗಮ ಸೂಕ್ತ ಪರಿಹಾರ ನೀಡಬೇಕೆಂದು ಬೆಳೆ ಹಾನಿಗೊಳಗಾದ ರೈತ ರವಿಕುಮಾರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT