ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿಯಲ್ಲಿ ಧಾರಾಕಾರ ಮಳೆ: ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನ ಜಲಾವೃತ

Last Updated 5 ಸೆಪ್ಟೆಂಬರ್ 2021, 11:35 IST
ಅಕ್ಷರ ಗಾತ್ರ

ಕಾಳಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಸುರಿಯಲಾರಂಭಿಸಿದ ಗುಡುಗು ಸಹಿತ ಧಾರಾಕಾರ ಮಳೆ ಭಾನುವಾರ ಬೆಳಗಿನ ಜಾವ ಮತ್ತು ಸಂಜೆಯೂ ಬಂದಿದೆ. ಈ ಪರಿಣಾಮ ತಾಲ್ಲೂಕಿನ ಎಲ್ಲಾ ಹಳ್ಳಕೊಳ್ಳಗಳು ನೀರಿನಿಂದ ಭೋರ್ಗರೆದು ಜಮೀನುಗಳು ನೀರು ಪಾಲಾಗಿ ಬೆಳೆಗಳು ಕೊಚ್ಚಿಹೋಗಿವೆ. ಈ ಮಧ್ಯೆ ಕಾಳಗಿಯ ರೌದ್ರಾವತಿ ನದಿ ಉಕ್ಕಿಹರಿದು ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನ ಜಲಾವೃತಗೊಂಡಿದೆ.

ಕಾಳಗಿ-ಕಲಬುರ್ಗಿ ಮುಖ್ಯರಸ್ತೆ ಮಾರ್ಗದ ಕಣಸೂರ-ಗೋಟೂರ ಮತ್ತು ವಚ್ಚಾ-ಕೋರವಾರ ನಡುವಿನ ಹಳ್ಳದ ಸೇತುವೆ, ಕಾಳಗಿ-ಕೊಡದೂರ-ಚಿತ್ತಾಪುರ ರಸ್ತೆ ಸಂಪರ್ಕದ ಢೋರಹಳ್ಳ ಸೇತುವೆ, ತೆಂಗಳಿ-ತೆಂಗಳಿ ಕ್ರಾಸ್ ಹಳ್ಳದ ಸೇತುವೆ, ಮಲಘಾಣ-ಕಾಳಗಿ ನಡುವಿನ ಹಳ್ಳದ ಸೇತುವೆ ಮತ್ತು ಕಂಚನಳ ಹಳ್ಳದ ಸೇತುವೆ ಮಳೆನೀರಿಗೆ ಸಂಪೂರ್ಣ ಮುಳುಗಡೆಯಾಗಿವೆ. ಈ ಸೇತುವೆಗಳ ಮುಳುಗಡೆಯಿಂದಾಗಿ ಕಾಳಗಿ-ಕಲಬುರ್ಗಿ, ಕಾಳಗಿ-ಚಿತ್ತಾಪುರ ಮತ್ತು ಕಂಚನಳ-ರಟಕಲ್ ರಸ್ತೆ ಸಂಪರ್ಕ ಕಡಿತಗೊಂಡು ವಾಹನಗಳ ಓಡಾಟವಿಲ್ಲದೆ ಪ್ರಯಾಣಿಕರು ಪರದಾಡಿದ್ದಾರೆ.

ಕಾಳಗಿ-ಕಲಬುರ್ಗಿ ಮಧ್ಯೆ ಮಾಡಬೂಳ ವಾಯಾ ಸಂಚರಿಸುತ್ತಿದ್ದ ಬಸ್‌ಗಳು ಕಾಳಗಿ-ಕೋಡ್ಲಿ-ರಟಕಲ್-ಮಹಾಗಾಂವ ಮಾರ್ಗವಾಗಿ ಸಂಚರಿಸಿವೆ.

ಹೇರೂರ ಬೆಣ್ಣೆತೊರಾ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದರಿಂದ ಆರಂಭದಲ್ಲಿ 15 ಸಾವಿರ ಕ್ಯುಸೆಕ್ ನೀರು ಹೊರಬಿಟ್ಟು ಬಳಿಕ 11.5 ಸಾವಿರ ಕ್ಯುಸೆಕ್‌ಗೆ ಇಳಿಸಲಾಗಿದೆ. ಈ ನೀರಿಗೆ ಹೆಬ್ಬಾಳ, ಕಣಸೂರ, ಮಲಘಾಣ, ತೆಂಗಳಿ, ಕಲಗುರ್ತಿ, ಗೋಟೂರ ಗ್ರಾಮ ಮತ್ತು ಅಕ್ಕಪಕ್ಕದ ರೈತರ ಸಾವಿರಾರು ಎಕರೆ ಜಮೀನು ಹಾಳಾಗಿದೆ.

ರಾಜಾಪುರ, ಕಂದಗೂಳ, ತೆಂಗಳಿ, ಭರತನೂರ, ಕಲಗುರ್ತಿ, ಕಣಸೂರ, ಹೆಬ್ಬಾಳ ಗ್ರಾಮ ಸೇರಿದಂತೆ ಒಟ್ಟು 148 ಮನೆಗಳಿಗೆ ನೀರು ನುಗ್ಗಿದೆ. ಕಣಸೂರ ಮತ್ತು ತೆಂಗಳಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿ ಹೆಬ್ಬಾಳದಲ್ಲೂ ತಯಾರಿ ಮಾಡಿಕೊಳ್ಳಲಾಗಿದೆ. ಒಟ್ಟು 9 ಮನೆಗಳು ಕುಸಿದು ಬಿದ್ದಿವೆ. ಅಲ್ಲಾಪುರ ಡ್ಯಾಂ ಕೆಳಗಿನ ಹೊಲಗಳು ನೀರುಪಾಲಾಗಿವೆ.

ತಹಶೀಲ್ದಾರ್ ನಾಗನಾಥ ತರಗೆ, ಸಿಪಿಐ ವಿನಾಯಕ ಸೇರಿದಂತೆ ಕಂದಾಯ, ಪಂಚಾಯತ್ ರಾಜ್, ಪೊಲೀಸ್ ಇಲಾಖೆ ಸಿಬ್ಬಂದಿ ಆಯಾ ಊರುಗಳಲ್ಲಿ ಬೀಡುಬಿಟ್ಟು ಮಳೆಹಾನಿ ತಪ್ಪಿಸಲು ಮುನ್ನೆಚ್ಚರಿಕೆ ವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT