ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಎಚ್‌ಕೆಇಎಸ್‌ ‌ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು’

Published 14 ಮಾರ್ಚ್ 2024, 15:07 IST
Last Updated 14 ಮಾರ್ಚ್ 2024, 15:07 IST
ಅಕ್ಷರ ಗಾತ್ರ

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ (ಎಚ್‌ಕೆಇ) ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಿ, ಬಸವೇಶ್ವರ ಹಾಗೂ ಸಂಗಮೇಶ್ವರ ಆಸ್ಪತ್ರೆಗಳ ಉನ್ನತೀಕರಣಕ್ಕೆ ಶ್ರಮಿಸಲಾಗುವುದು’ ಎಂದು ಸಂಸ್ಥೆ ಚುನಾವಣೆಯ ಅಧ್ಯಕ್ಷ ಅಭ್ಯರ್ಥಿ ಡಾ.ಶರಣಬಸಪ್ಪ ಬಿ.ಕಾಮರೆಡ್ಡಿ ಹೇಳಿದರು.

ತಮ್ಮ ಪೆನಲ್‌ನ ಚುನಾವಣಾ ಅಭ್ಯರ್ಥಿಗಳೊಂದಿಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಸ್ಥೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಸಜ್ಜಿತ ವಸತಿ ನಿಲಯಗಳನ್ನು ನಿರ್ಮಾಣ ಮಾಡಲಾಗುವುದು. ಆದ್ಯತೆಯ ಮೇರೆಗೆ ಹೊಸ ಸದಸ್ಯತ್ವ ಬಗ್ಗೆ ಚಿಂತಿಸಲಾಗಿದೆ. ಹೀಗಾಗಿ, ಬಾರಿ ಹೊಸಬರಿಗೆ ಆದ್ಯತೆ ಕೊಡಬೇಕು’ ಎಂದು ಮನವಿ ಮಾಡಿದರು.

‘ಸಂಸ್ಥೆಗೆ ಎರಡು ಬಾರಿ ಆಡಳಿತ ಮಂಡಳಿ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ನಿರೀಕ್ಷಿತ ಪ್ರಮಾಣದಲ್ಲಿ ಸಂಸ್ಥೆಯು ಬೆಳವಣಿಗೆ ಮತ್ತು ಅಭಿವೃದ್ಧಿ ಸಾಧಿಸಲಿಲ್ಲ. ಸಂಸ್ಥೆಯ ಬೆಳವಣಿಗೆಗಾಗಿ ನಾನು ನೀಡಿದ ಅಭಿಪ್ರಾಯಗಳಿಗೆ ಸೂಕ್ತ ಬೆಲೆ ಸಿಗಲಿಲ್ಲ. ಹೀಗಾಗಿ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ಬದಲಾವಣೆ ತರಲು ಬಯಸಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ಈ ಹಿಂದಿನ ಅಧ್ಯಕ್ಷರ ಆಡಳಿತ ವೈಫಲ್ಯದಿಂದ ಎಂಆರ್‌ಎಂಸಿ ಕಾಲೇಜಿನ ವೈದ್ಯ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಹಗರಣ ಬೆಳಕಿಗೆ ಬಂದಿದೆ. ಈ ಬಗ್ಗೆ ತಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಬೇಕು. ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲು ಹಿಂದೇಟು ಹಾಕುವುದಿಲ್ಲ’ ಎಂದು ಆಶ್ವಾಸನೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ನಿತಿನ್ ಜವಳಿ, ಆಡಳಿತ ಮಂಡಳಿ ಸದಸ್ಯ ಅಭ್ಯರ್ಥಿಗಳಾದ ಅನಿಲಕುಮಾರ ಮರಗೋಳ, ನಾಗಣ್ಣ ಘಂಟಿ, ದೊಡ್ಡಪ್ಪ ನಿಷ್ಠಿ, ದಿನೇಶ ಅಣಕಲ್, ರವಿಕುಮಾರ ಸರಸಂಬಿ, ಡಾ.ಅಲ್ಲಮಪ್ರಭು ಆನಂದವಾಡೆ, ಡಾ.ಶಿವಾನಂದ ದೇವರಮನಿ, ಡಾ.ಸುಧಾ ಹಾಲಕಾಯಿ, ಮಲ್ಲಿಕಾರ್ಜುನ ಕಪಾಟೆ, ಶಶಿಕಾಂತ ಸೊರಡೆ, ಡಾ.ಪ್ರಶಾಂತ ಹರಸೂರ, ಶಿವಾನಂದ ಚುಕ್ಕಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT