ಬುಧವಾರ, ಮೇ 18, 2022
28 °C
27ರಂದು ಮತದಾನ; ಪಾರದರ್ಶಕ ಚುನಾವಣೆಗೆ ಸಕಲ ಸಿದ್ಧತೆ

ಎಚ್‌ಕೆಇ; ಅಧ್ಯಕ್ಷ ಗಾದಿಗೆ ನಾಲ್ವರ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ)ಯ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು,  ಫೆ. 27ರಂದು ಮತದಾನ ನಡೆಯಲಿದೆ. ಫೆ. 12ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದ್ದು, ನಾಲ್ವರು ಅಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಹಾಲಿ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಮಾಜಿ ಅಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಶಶೀಲ್‌ ಜಿ. ನಮೋಶಿ, ಡಾ.ರಾಜಶೇಖರ ನಿಪ್ಪಾಣಿ ಹಾಗೂ ಮಾಜಿ ಅಧ್ಯಕ್ಷ ಬಸವರಾಜ ಭೀಮಳ್ಳಿ ಅಧ್ಯಕ್ಷ ಸ್ಥಾನದ ಸ್ಪರ್ಧಿಗಳು. ಇವರಲ್ಲಿ ರಾಜಶೇಖರ ನಿಪ್ಪಾಣಿ ಅವರು ಈ ಹಿಂದೆ ಕೂಡ ಕೆಲವು ಬಾರಿ ಸ್ಪರ್ಧಿಸಿದ್ದಾರೆ. ಈ ಬಾರಿ ಕೂಡ ಸ್ವತಂತ್ರರಾಗಿ ಕಣಕ್ಕಿಳಿದಿದ್ದಾರೆ.

ಉಳಿದಂತೆ, ಉಪಾಧ್ಯಕ್ಷ ಸ್ಥಾನಕ್ಕೆ ಸದ್ಯ ಡಾ.ಶರಣಬಸಪ್ಪ ಹರವಾಳ (ಒಬ್ಬರೇ) ಹಾಗೂ ಆಡಳಿತ ಮಂಡಳಿಗೆ 42 ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಇನ್ನೂ ನಾಲ್ಕು ದಿನ ಅವಕಾಶವಿದ್ದು, ಫೆ. 18ರವರೆಗೆ ಹಿಂಪಡೆಯಲು ಅವಕಾಶವಿದೆ. ಆ ನಂತರವಷ್ಟೇ ಕಣದಲ್ಲಿ ಉಳಿಯುವವರ ಬಗ್ಗೆ  ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಚುನಾವಣಾಧಿಕಾರಿ ಡಾ.ಸಿ.ಸಿ. ಪಾಟೀಲ ತಿಳಿಸಿದರು.

ಸಂಸ್ಥೆಯಲ್ಲಿ ಒಟ್ಟು 1,578 ಮತದಾರರು ಈ ಬಾರಿ ಹಕ್ಕು ಚಲಾಯಿಸಲಿದ್ದಾರೆ. ಒಬ್ಬ ಅಧ್ಯಕ್ಷ, ಒಬ್ಬ ಉಪಾಧ್ಯಕ್ಷ ಹಾಗೂ 13 ಮಂದಿಯನ್ನು ಆಡಳಿತ ಮಂಡಳಿ ಮಂಡಳಿಗೆ ಆಯ್ಕೆ ಮಾಡಬೇಕಿದೆ. ಇದರಲ್ಲಿ ರಾಯಚೂರು ಹಾಗೂ ಬೀದರ್‌ ಜಿಲ್ಲೆಗಳಿಗೆ ತಲಾ ಒಂದು ಪ್ರತಿನಿಧಿ ಸ್ಥಾನವನ್ನು ನೀಡಲಾಗಿದ್ದು, ಉಳಿದ 11 ಮಂದಿ ಕಲಬುರ್ಗಿ ಜಿಲ್ಲೆಯಿಂದ ಆಯ್ಕೆಯಾಗಲಿದ್ದಾರೆ.

ಹೀಗಿರಲಿದೆ ಮತದಾನ ಪ್ರಕ್ರಿಯೆ: ಪಿಡಿಎ ಎಂಜಿನಿಯರಿಂಗ್‌ ಕಾಲೇಜು ಆವರಣದಲ್ಲಿ ಮತದಾನಕ್ಕಾಗಿ ಐದು ಬೂತ್‌ ತೆರೆಯಲಾಗುತ್ತಿದೆ. ಬೀದರ್‌ನ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯ ಹಾಗೂ ರಾಯಚೂರಿನ ಎಸ್‌.ಎಲ್‌.ಎನ್‌. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕೂಡ ತಲಾ ಒಂದು ಬೂತ್‌ ಸೇರಿ 7 ಬೂತ್‌ಗಳನ್ನು ತೆರೆಯಲಾಗುವುದು.

ಫೆ. 27ರಂದು ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಫೆ. 28ರಂದು ಬೆಳಿಗ್ಗೆ 8ಕ್ಕೆ ಮತ ಎಣಿಕೆ ನಡೆದು, ಅದೇ ದಿನ ಸಂಜೆ 5ರ ಹೊತ್ತಿಗೆ ಫಲಿತಾಂಶ ಹೊರಬೀಳಿದೆ. ಪ್ರತಿ ಮತಗಟ್ಟೆಯಲ್ಲೂ ಮೂರು ಪ್ರತ್ಯೇಕ ಮತಪೆಟ್ಟಿಗೆ ಇಡಲಾಗುತ್ತದೆ. ಮೊದಲು ಅಧ್ಯಕ್ಷ ಹುದ್ದೆ, ನಂತರ ಉಪಾಧ್ಯಕ್ಷ ಬಳಿಕ ಆಡಳಿತ ಮಂಡಳಿ ಸದಸ್ಯರ ಆಯ್ಕೆ; ಹೀಗೆ ಪ್ರತಿಯೊಬ್ಬ ಮತದಾರ ತಲಾ ಮೂರು ಮತಗಳನ್ನು ಹಾಕಲಿದ್ದಾರೆ.

ಮತ ಎಣಿಕೆಗಾಗಿ 8 ಟೇಬಲ್‌ಗಳನ್ನು ಹಾಕಲಿದ್ದು, ಪ್ರತಿಯೊಂದರ ಒಳಗೆ ಹೋಗಲು ಮೂವರಿಗೆ ಅನುಮತಿ ಇದೆ.

ಸಿ.ಸಿ.ಟಿ.ವಿ, ಪೊಲೀಸ್‌ ಭದ್ರತೆ
ಕಲಬುರ್ಗಿ: ಚುನಾವಣೆ ಘೋಷಣೆಯಾದ ದಿನದಿಂದಲೇ ಪಿಡಿಎ ಕಾಲೇಜಿನ ಪ್ರತಿ ಕೋನಗಳಲ್ಲೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಚುನಾವಣಾ ಕಚೇರಿ, ಮತದಾನದ ಬೂತ್‌ಗಳು, ಪಾರ್ಕಿಂಗ್‌, ವರಾಂಡ, ಸಭಾಂಗಣ ಹೀಗೆ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲೆಲ್ಲಿ ಚಟುವಟಿಕೆಗಳು ನಡೆಯುತ್ತವೆಯೋ ಅದೆಲ್ಲವನ್ನೂ ಚುನಾವಣಾಧಿಕಾರಿ 24X7 ವೀಕ್ಷಣೆ ಮಾಡಲಿದ್ದಾರೆ. ಇದಕ್ಕಾಗಿಯೇ ₹ 1 ಲಕ್ಷ ವೆಚ್ಚ ಮಾಡಲಾಗಿದೆ ಎನ್ನುವುದು ಡಾ.ಸಿ.ಸಿ. ಪಾಟೀಲ ಅವರ ಹೇಳಿಕೆ.

ಈಗಾಗಲೇ ಪೊಲೀಸ್‌ ಭದ್ರತೆ, ಅಗ್ನಿಶಾಮಕ ದಳದ ವಾಹನ– ಸಿಬ್ಬಂದಿ ನಿಯೋಜನೆಗೆ ಮನವಿ ಮಾಡಲಾಗಿದೆ. ಬಸವೇಶ್ವರ ಆಸ್ಪತ್ರೆಯ ವೈದ್ಯರ ಒಂದು ತಂಡವು ಆಂಬುಲೆನ್ಸ್‌ ಸಮೇತ ಚುನಾವಣೆ ನಡೆಯುವ ಸ್ಥಳದಲ್ಲಿ ಬೀಡು ಬಿಡಲಿದೆ. ಕೋವಿಡ್‌ನ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವುದೂ ಸೇರಿದಂತೆ ಯಾವುದೇ ತರದ ಅವಘಡಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಲಾಗಿದೆ ಎನ್ನುತ್ತಾರೆ ಅವರು.

ಮತಪತ್ರದ ಮೇಲೆ ಹೋಲೋಗ್ರಾಮ್‌
ಕಲಬುರ್ಗಿ:
ಎಚ್‌ಕೆಇ ಸಂಸ್ಥೆಯ ಚುನಾವಣೆಗೆ ಇದೇ ಮೊದಲಬಾರಿಗೆ ಬ್ಯಾಲೆಟ್‌ ಪೇಪರ್‌ಗಳಿಗೆ ‘ತ್ರಿ ಡಿ ಹೋಲೋಗ್ರಾಮ್‌’ ಬಳಸಲಾಗುತ್ತಿದೆ. ವಿಶ್ವವಿದ್ಯಾಲಯಗಳು ಅಂಕಪಟ್ಟಿಗಳ ಮೇಲೆ ಅಂಟಿಸುವ ಸ್ಟಿಕ್ಕರ್‌ ರೀತಿಯಲ್ಲೇ ಇದು ಇರಲಿದೆ. ಸ್ವತಃ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನಿಂದಲೇ ಪರಿಚಯಿಸಿದ ಈ ಹೋಲೋಗ್ರಾಮ್‌ ಬಳಕೆಯಿಂದ ಮತಪತ್ರಗಳ ನಕಲು ಅಸಾಧ್ಯವಾಗಲಿದೆ. ಚುನಾವಣೆಗೆ ಮೂರು ಬಣ್ಣದ ಮತಪತ್ರಗಳನ್ನು ನೀಡಲಾಗುತ್ತಿದ್ದು, ಅವುಗಳ ಮೇಲೆ ಹೋಲೋಗ್ರಾಮ್‌ ಇದ್ದರೆ ಮಾತ್ರ ಅದು ಮತವಾಗಿ ಚಲಾವಣೆಯಾಗುತ್ತದೆ. ಉಲ್ಲದಿದ್ದರೆ ತಿರಸ್ಕೃತವಾಗುತ್ತದೆ.

ಉಪವಿಭಾಗಾಧಿಕಾರಿ ಪರಿಶೀಲನೆ
ಕಲಬುರ್ಗಿ:
ಚುನಾವಣೆ ವೀಕ್ಷಕರಾದ ಸೇಡಂ ಉಪವಿಭಾಗಾಧಿಕಾರಿ ರಮೇಶ ಕಲ್ಲೂರ ಅವರು ಸೋಮವಾರ ಪಿಡಿಎ ಕಾಲೇಜಿಗೆ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿದರು.

ಒಬ್ಬರು ಚುನಾವಣಾಧಿಕಾರಿ, ಸರ್ಕಾರಿ ಹುದ್ದೆಯಲ್ಲಿರುವ ಮೂವರು ವೀಕ್ಷಕರು, ಈ ಮೂವರ ಮೇಲೆ ಉಪವಿಭಾಗಾಧಿಕಾರಿ ಇದ್ದಾರೆ. ಪ್ರಿಸೈಡಿಂಗ್ ಅಧಿಕಾರಿ–1, ಪೋಲಿಂಗ್‌ ಆಫೀಸರ್ಸ್‌–3, ಅಟೆಂಡರ್‌–1, ಸಹಾಯಕ–1 ಹುದ್ದೆಗಳನ್ನು ನಿಯೋಜನೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು