ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯ ನಿವಾರಣೆಗೆ ಕೈ ಜೋಡಿಸಿ: ನಟರಾಜ್‌

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ಗೆ ಸದಸ್ಯತ್ವ ನೋಂದಣಿ ಆರಂಭ
Last Updated 1 ಏಪ್ರಿಲ್ 2021, 14:57 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಮಾಜದಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವ ಬೆಳೆಸುವ ಉದ್ದೇಸದಿಂದಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ ಸ್ಥಾಪಿಸಿದ್ದೇವೆ. ರಾಜ್ಯದಾದ್ಯಂತ ಇದಕ್ಕೆ ಸದಸ್ಯತ್ವ ಅಭಿಯಾನ ಕೂಡ ಆರಂಬವಾಗಿದೆ. ಆಸಕ್ತಿ ಇರುವ ಯಾರೆಲ್ಲರೂ ಸೇರಿಕೊಂಡು, ಸಮಾಜದಲ್ಲಿ ಮೌಢ್ಯ ನಿವಾರಣೆಗೆ ಕೈಜೋಡಿಸಬೇಕು’ ಎಂದು ಪರಿಷತ್ತಿನ ಅಧ್ಯಕ್ಷ ಹುಲಿಕಲ್‌ ನಟರಾಜ್‌ ಹೇಳಿದರು.

‘ನಮ್ಮ ಸಮಾಜದಲ್ಲಿ ವಿದ್ಯಾವಂತರು ಹೆಚ್ಚಾಗುತ್ತಿದ್ದಾರೆ ವಿನಃ ಪ್ರಜ್ಞಾವಂತರು ಕಡಿಮೆ ಆಗುತ್ತಿದ್ದಾರೆ. ಸುಶಿಕ್ಷತರಲ್ಲಿಯೂ ಮೌಢ್ಯಾಚರಣೆ, ಕಂದಾಚಾರಗಳಿಗೆ ಒಳಗಾದವರ ಸಂಖ್ಯೆ ದೊಡ್ಡದು. ಜನರಲ್ಲಿ ಇದರ ಬಗ್ಗೆ ಅರಿವು ಮೂಡಿಸಿ, ವಿಜ್ಞಾನದ ಸತ್ಯಗಳನ್ನು ತಿಳಿಸಲು ನಾನು ಜೀವನ ಪುಡಿಪಾಗಿಟ್ಟಿದ್ದೇನೆ. ಈಗ ಪರಿಷತ್‌ ಸ್ಥಾಪಿಸುವ ಮೂಲಕ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದ್ದೇನೆ. ನಾಡಿನ ಚಿಂತಕರು, ನಿವೃತ್ತ ನ್ಯಾಯಾಧೀಶರು, ವಿಜ್ಞಾನಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಯುವಕ– ಯುವತಿಯರು ಕೂಡ ಇದರಲ್ಲಿ ಇದ್ದಾರೆ. ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ಘಟಕದ ಹಾಗೂ ಎಲ್ಲ ತಾಲ್ಲೂಕುಗಳಲ್ಲಿಯೂ ತಲ್ಲೂಕು ಘಟಕ ರಚನೆ ಮಾಡಲಿದ್ದೇವೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಿವೃತ್ತ ನ್ಯಾಯಾಧೀಶ ನಾಗಮೋಹನ ದಾಸ್, ಇಸ್ರೋ ಮಾಜಿ ಅಧ್ಯಕ್ಷ, ವಿಜ್ಞಾನಿ ಕಿರಣಕುಮಾರ್‌ (ಮಾರ್ಗದರ್ಶಕರು),ನಿವೃತ್ತ ಎಸ್ಪಿ ಉಮೇಶ,ನಿವೃತ್ತ ಎಸಿಪಿ ಲೋಕೇಶ (ಗೌರವಾಧ್ಯಕ್ಷರು) ಸೇರಿದಂತೆ ಹಲವರು ಸಹಕಾರ ನೀಡಿದ್ದಾರೆ. ಕೆಲವೇ ತಿಂಗಳಲ್ಲೇ 32 ಸಾವಿರ ಮಂದಿ ಸದಸ್ಯತ್ವ ಪಡೆದಿದ್ದಾರೆ. ಜೂನ್‌ 5ರೊಳಗೆ ಒಂದುಲಕ್ಷ ಜನರಿಗೆ ಸದಸ್ಯತ್ವ ನೀಡಿಯುವ ಗುರಿ ಹೊಂದಲಾಗಿದೆ’ ಎಂದರು.

‘ಮೇ 2ರಂದು ಚಿತ್ರದುರ್ಗದ ಮುರುಘಾ ಮಠದಲ್ಲಿ ಹಾಗೂ ಜೂನ್‌ 5ರಂದು ಶಿವಮೊಗ್ಗದ ಕುಪ್ಪಳ್ಳಿಯ ಕವಿಶೈಲದಲ್ಲಿಪರಿಷತ್ತಿನ ಕಾರ್ಯಕಾರಿಸಮಿತಿ ಸದಸ್ಯರು ಮತ್ತು ಜಿಲ್ಲಾಧ್ಯಕ್ಷರಿಗೆ ತರಬೇತಿ ಆಯೋಜಿಸಲಾಗಿದೆ. ತರಬೇತಿ ಪಡೆದವರು ಹಳ್ಳಿಗಳಿಗೆ ಹೋಗಿ ಜನರಲ್ಲಿ ಅರಿವು ಮೂಡಿಸಲಿದ್ದಾರೆ’ ಎಂದರು.

‘ಪರಿಷತ್ತಿನಿಂದ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ವಿಜ್ಞಾನ ಕೇಂದ್ರಗಳು, ತರಬೇತಿಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ವಿಜ್ಞಾನಸಂಘ– ಸಂಸ್ಥೆಗಳ ಪ್ರೋತ್ಸಾಹ ನೀಡುವುದರ ಜತೆಗೆ ವಿಜ್ಞಾನ ಕೇಂದ್ರಗಳಸ್ಥಾಪಿಸಲಾಗುತ್ತದೆ. ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾಸಂಸ್ಥೆ, ಸರ್ಟಿಪಿಕೇಟ್ ಕೋರ್ಸ್, ಡಿಪ್ಲೊಮಾ, ಪದವಿ,ಸ್ನಾತಕೋತ್ತರ ಪದವಿಗಳನ್ನು ಪ್ರಾರಂಭಿಸುವ ಉದ್ದೇಶವಿದೆ’ ಎಂದು ನಟರಾಜ್‌ ಹೇಳಿದರು.

ಕಾನೂನು ನೆರವು: ‘ದುರ್ಬಲ ಮನಸ್ಸಿನ ವ್ಯಕ್ತಿಗಳೇ ಮೌಢ್ಯ, ಕಂದಾಚಾರ, ದೆವ್ವ– ಗಳಿ ಎಂಬ ಸುಳ್ಳುಗಳಿಗೆ ಒಳಗಾಗುತ್ತಾರೆ. ಜ್ಯೋತಿಷಿಗಳಿಂದ ವಂಚನೆಗೆ ಒಳಗಾಗುತ್ತಾರೆ. ಇದನ್ನು ತಡೆಯಲು ಯಾರಾದರೂ ಕಾನೂನು ಹೋರಾಟಕ್ಕೆ ಮುಂದೆ ಬಂದರೆ ಅವರಿಗೆ ಎಲ್ಲ ರೀತಿಯ ನೆರವು ನೀಡಲು ಪರಿಷತ್‌ ಸಿದ್ಧವಿದೆ. ಯಾರೇ, ಎಲ್ಲಿಯೇ ಮಾಟ, ಮಂತ್ರ, ಮೌಢ್ಯಾಚರಣೆ ಮಾಡುತ್ತಿದ್ದರೆ ಪರಿಷತ್ತಿನ ಸದಸ್ಯರ ಗಮನಕ್ಕೆ ತಂದರೆ ಸಾಕು; ತಕ್ಷಣಕ್ಕೆ ನಾವು ಧಾವಿಸುತ್ತೇವೆ’ ಎಂದೂ ಹೇಳಿದರು.

‘ಸಾಮಾಜಿಕ ಜಾಲತಾಣಗಳ ಮೂಲಕ ಮೌಢ್ಯಾಚರಣೆ ಜೀವಂತವಾಗಿ ಇಡುವ ಪ್ರಯತ್ನಗಳು ನಡೆದೇ ಇವೆ. ಇದರ ವಿರುದ್ಧ ಕೂಡ ಪರಿಷತ್ತು ಕಾನೂನು ಹೋರಾಟ ಮಾಡಲಿದೆ. ಈಗಾಗಲೇ ನೂರಾರು ಮಂದಿಯನ್ನು ನಾವು ಬಯಲಿಗೆಳೆದಿದ್ದೇವೆ. ಯಾವುದೇ ಬೆದರಿಕೆಗೂ ಜಗ್ಗದೇ ಹೋರಾಟ ಮುಂದುವರಿಸುತ್ತೇವೆ. ಈಗ ಪರಿಷತ್‌ನ ಪದಾಧಿಕಾರಿಗಳ ಮೂಲಕ ನನಗೆ ದೊಡ್ಡ ಶಕ್ತಿ ದೊರೆತಿದೆ’ ಎಂದರು.

ಪರಿಷತ್‌ನ ಜಿಲ್ಲಾ ಘಟಕದ ಗೌರವಾಧ್ಯಕ್ಷ ರವೀಂದ್ರ ಶಾಬಾದಿ, ಅಧ್ಯಕ್ಷ ಬಸವರಾಜ ಚಟ್ನಳ್ಳಿ, ಪ್ರಧಾನ ಕಾರ್ಯದರ್ಶಿ ಶಿವರಂಜನ್‌ ಸತ್ಯಂಪೇಟೆ, ರಾಜ್ಯ ಘಟಕದ ಉಪಾಧ್ಯಕ್ಷೆ ಗೀತಾ ವಿ. ಶಾಂತಕುಮಾರ, ರೇಣಿಕಾ ಶಿಂಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT