ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣಗುರು ನಿಗಮಕ್ಕೆ ₹500 ಕೋಟಿ ನೀಡಿ: ಸತ್ಯಜಿತ್ ಸುರತ್ಕಲ್

ಜ. 29ರಂದು ಮಂಗಳೂರಿನಲ್ಲಿ ಬೃಹತ್ ಸಮಾವೇಶ: ಸತ್ಯಜಿತ್ ಸುರತ್ಕಲ್
Last Updated 8 ನವೆಂಬರ್ 2022, 7:31 IST
ಅಕ್ಷರ ಗಾತ್ರ

ಕಲಬುರಗಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಕೋಶ ಆರಂಭಿಸಿರುವ ಸರ್ಕಾರದ ಕ್ರಮ ವಿರೋಧಿಸಿ ಮತ್ತು ಗುರುಗಳ ಹೆಸರಿನಲ್ಲಿ ಈಡಿಗರ ಅಭಿವೃದ್ಧಿ ನಿಗಮ ಆರಂಭಿಸುವಂತೆ ಒತ್ತಾಯಿಸಿ ಮಂಗಳೂರಿನಲ್ಲಿ ಜನವರಿ 29ರಂದು ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದರು.

‘ಕೋಶದಲ್ಲಿ ಸರ್ಕಾರದ ಅಧಿಕಾರಿಗಳು ಇರುತ್ತಾರೆಯೇ ಹೊರತು ಅಧ್ಯಕ್ಷರು, ಸದಸ್ಯರು, ಕಾರ್ಯದರ್ಶಿ ಇರುವುದಿಲ್ಲ. ಕೋಶಕ್ಕೆ ನೀಡುವ ಅನುದಾನವೂ ಅತ್ಯಲ್ಪವಾಗಿದೆ. ಹೀಗಾಗಿ, ಈ ಕೋಶಕ್ಕೆ ಸಮಸ್ತ ಈಡಿಗ ಸಮುದಾಯದ ವಿರೋಧವಿದೆ. ಅದರ ಬದಲಾಗಿ ಅಭಿವೃದ್ಧಿ ನಿಗಮವನ್ನು ಆರಂಭಿಸಿ ₹ 500 ಕೋಟಿ ಅನುದಾನ ಮೀಸಲಿಡಬೇಕು’ ಎಂದು ಅವರು ಒತ್ತಾಯಿಸಿದರು.

‘ರಾಜ್ಯದ ಜನಸಂಖ್ಯೆಯಲ್ಲಿ ಶೇ 2ರಷ್ಟೂ ಇಲ್ಲದ ಕ್ರೈಸ್ತರಿಗೆ ಸರ್ಕಾರ ₹ 200 ಕೋಟಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹ 1500 ಕೋಟಿ ಮೀಸಲಿಟ್ಟಿದೆ. ಆದರೆ, ಜನಸಂಖ್ಯೆಯ ಶೇ 35ರಷ್ಟಿರುವ ಹಿಂದುಳಿದ ವರ್ಗಗಳಿಗಾಗಿ ಇರುವ ಡಿ. ದೇವರಾಜ ಅರಸು ನಿಗಮಕ್ಕೆ ಕೇವಲ ₹ 120 ಕೋಟಿ ಅನುದಾನ ನೀಡಲಾಗಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಬಡ್ಡಿರಹಿತ ಸಾಲ ನೀಡುವುದಕ್ಕೂ ಹಣವಿಲ್ಲದ ಸ್ಥಿತಿ ಈ ನಿಗಮದ್ದು’ ಎಂದು ಬೇಸರ ವ್ಯಕ್ತಪಡಿಸಿದರು.

‘45 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಬಿಲ್ಲವ ಹಾಗೂ 26 ಪಂಗಡಗಳ ಸಮಾಜದ ಕಣ್ಣಿಗೆ ಸುಣ್ಣವನ್ನೇ ಹಾಕಲಾಗುತ್ತಿದೆ. ನಾರಾಯಣ ಗುರುಗಳ ಸ್ತಬ್ಧಚಿತ್ರ ದೆಹಲಿಯಲ್ಲಿ ಕೊನೆಗೂ ಪ್ರದರ್ಶನ ಕಾಣಲಿಲ್ಲ. ರಾಜ್ಯದಲ್ಲಿ ಪಠ್ಯದಿಂದ ಕೈಬಿಡಲಾಗಿತ್ತು. ಹೋರಾಟದ ಬಳಿಕ ಮತ್ತೆ ಸೇರಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕೆಂಬ ಬೇಡಿಕೆ ಇಟ್ಟರೆ, ಸೈನಿಕರ ತರಬೇತಿ ಶಾಲೆಗೆ ಕೋಟಿ ಚೆನ್ನಯರ ಹೆಸರು ಇಡುತ್ತಾರೆ. ಆ ಶಾಲೆಯಲ್ಲಿ ವರ್ಷಕ್ಕೆ 30 ಮಂದಿಗಷ್ಟೇ ತರಬೇತಿ ನೀಡಬಹುದು. ನಾರಾಯಣ ಗುರು ಹೆಸರಿನಲ್ಲಿ ಸ್ಥಾಪಿಸಿದ ವಸತಿ ಶಾಲೆಯಲ್ಲಿ 100 ವಿದ್ಯಾರ್ಥಿಗಳೂ ಇಲ್ಲ. ಈ ಶಾಲೆಯಿಂದ ಸಮಾಜಕ್ಕೆ ನಯಾಪೈಸೆ ಉಪಯೋಗವೂ ಇಲ್ಲ’ ಎಂದರು.

ಈಡಿಗ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರಣವಾನಂದ ಸ್ವಾಮೀಜಿ ಅವರು 35 ದಿನಗಳ ಕಾಲ 600 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ ಎಂದು ಹೇಳಿದರು.

ಮುಖಂಡರಾದ ವೆಂಕಟೇಶ ಕಡೇಚೂರ, ಪ್ರವೀಣ ಜತ್ತನ್, ವೆಂಕಟೇಶ ಗುತ್ತೇದಾರ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT