ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಾಲು ಸ್ವೀಕರಿಸಿದರೆ; ದಾಖಲೆ ಬಿಡುಗಡೆ: ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್

Last Updated 20 ಜೂನ್ 2021, 4:45 IST
ಅಕ್ಷರ ಗಾತ್ರ

ಚಿಂಚೋಳಿ: ‘ಬಂಜಾರಾ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಬೇಕೆಂದು ಪೌರಾದೇವಿಯ ಲಂಬಾಣಿಗರ ಸ್ವಾಮೀಜಿ ಡಾ. ರಾಮರಾವ್ ಮಹಾರಾಜ, ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದ ಅಧ್ಯಕ್ಷ ಡಾ. ಶಂಕರ ಪವಾರ, ಸಂಸದ ಡಾ. ಉಮೇಶ ಜಾಧವ ಅವರು 2020ರ ಮಾರ್ಚ್‌ 5ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದು ನಿಜ’ ಎಂದು ಎಐಬಿಎಸ್‌ಎಸ್ ಕರ್ನಾಟಕ ಘಟಕದ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ್ ತಿಳಿಸಿದ್ದಾರೆ.

ಚಿಂಚೋಳಿಯಲ್ಲಿ ಈಚೆಗೆ ಶಾಸಕ ಪ್ರಿಯಾಂಕ್ ಖರ್ಗೆ ಅವರು, ‘ಉಮೇಶ ಜಾಧವ ಕಬ್ಬಲಿಗ, ಕುರುಬ ಸಮಾಜ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವುದಾಗಿ ಹೇಳಿ ಚುನಾವಣೆಯಲ್ಲಿ ಗೆದ್ದು ನಂತರ ವರಸೆ ಬದಲಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಪ್ರಯತ್ನ ನಡೆಸುತ್ತಿದ್ದಾರೆ. ಈ ಕುರಿತ ದಾಖಲೆ ತಮ್ಮ ಬಳಿ ಇವೆ‘ ಎಂದು ಹೇಳಿದ್ದರು.

ಬಿಜೆಪಿ ಬೆಂಬಲಿತ ಚಿಂಚೋಳಿಯ ತಾಲ್ಲೂಕಿನ ಬಂಜಾರಾ ಸಮುದಾಯದ ಕೆಲವು ಮುಖಂಡರು, ಪ್ರಿಯಾಂಕ್ ಹೇಳಿಕೆ ಸುಳ್ಳು, ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ನೀವು ಹೇಳಿದ್ದು ನಿಜಾವಾಗಿದ್ದರೆ ಉಮೇಶ ಜಾಧವ ರಾಜಕೀಯ ನಿವೃತ್ತಿ ಹೊಂದುತ್ತಾರೆ. ಇಲ್ಲದಿದ್ದರೆ ನೀವೇನು ಮಾಡುವಿರಿ ಎಂದು ಪ್ರಶ್ನಿಸಿದ್ದರು.

ಕಾಂಗ್ರೆಸ್ ಬೆಂಬಲಿತ ಬಂಜಾರಾ ಸಮುದಾಯದ ನೂರಾರು ಮುಖಂಡರು ಶನಿವಾರ ಸಭೆ ನಡೆಸಿ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

‘ಪ್ರಿಯಾಂಕ್ ಖರ್ಗೆ ಅವರು ಹಾಗೆ ಹೇಳಿದ್ದು ಸತ್ಯ. ಸಂಸದ ಉಮೇಶ ಜಾಧವ ಸ್ಪಷ್ಟನೆ ನೀಡಬೇಕು’ ಎಂದು ಸುಭಾಷ ರಾಠೋಡ್ ಒತ್ತಾಯಿಸಿದರು.

‘ಉಮೇಶ ಜಾಧವ ಮೌನ ವಹಿಸದೇ ಈ ಬಗ್ಗೆ ಬಾಯಿ ಬಿಡಲಿ. ನಾನು ಯಾವುದೇ ಪ್ರಯತ್ನ ನಡೆಸಿಲ್ಲ. ಪ್ರಿಯಾಂಕ್ ಖರ್ಗೆ ಸುಳ್ಳು ಹೇಳಿದ್ದಾರೆ. ಅವರು ಆರೋಪ ಸಾಬೀತು ಮಾಡಲಿ ಆಗ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದರೆ ಇದನ್ನು ಸವಾಲಾಗಿ ಸ್ವೀಕರಿಸಲು ಸಿದ್ಧರಿರುವ ಪ್ರಿಯಾಂಕ್ ಖರ್ಗೆ ಅವರು ಆರೋಪ ಸಾಬೀತು ಪಡಿಸಲಿದ್ದಾರೆ. ಇದಕ್ಕೆ ಸಂಸದರು ಸಿದ್ಧರಿದ್ದಾರೆಯೇ’ ಎಂದು ಸವಾಲು ಹಾಕಿದರು.

ಕಲಬುರ್ಗಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಒಬ್ಬ ಸಂಸದ ತಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮನವಿ ಸಲ್ಲಿಸಿದ್ದು ನೋಡಿದರೆ ಇವರ ಅಜ್ಞಾನ ಎದ್ದು ಕಾಣುತ್ತದೆ ಎಂದು ಟೀಕಿಸಿದ ಅವರು, ಒಂದು ವೇಳೆ ಸಂಸದ ಉಮೇಶ ಜಾಧವ ಅವರಿಗೆ ಪರಿಶಿಷ್ಟ ಪಂಗಡ ಸೇರ್ಪಡೆಗೆ ತಮ್ಮ ಸಹಮತ ಇಲ್ಲವೆಂದರೆ ಈ ಹಿಂದೆಯೇ ಸ್ಪಷ್ಟನೆ ನೀಡಬೇಕಿತ್ತು. ಆದರೆ ತಾವು ಎಐಬಿಎಸ್‌ಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಇದ್ದುಕೊಂಡು, ಅಧ್ಯಕ್ಷರ ಜತೆಗೆ ಸಂಘದ ಲೆಟರ್ ಹೆಡ್ ಮೇಲೆ ಮನವಿ ಸಲ್ಲಿಸಿಲ್ಲವೇ. ನಿಮಗೆ ಪರಿಶಿಷ್ಟ ಪಂಗಡ ಮೀಸಲಾತಿ ಬೇಡಿಕೆಗೆ ಸಹಮತವಿಲ್ಲದಿದ್ದರೆ ಸ್ಪಷ್ಟನೆ ನೀಡಬೇಕಿತ್ತು ಆದರೆ ತೆರೆಮರೆಯಲ್ಲಿ ಕಸರತ್ತು ನಡೆಸಿ ರಾಜ್ಯದ ಬಂಜಾರಾ ಜನರನ್ನು ಮೀಸಲಾತಿಯಿಂದ ವಂಚಿಸು ತ್ತಿರುವುದೇಕೆ ಎಂದು ಪ್ರಶ್ನಿಸಿದರು.

‘ಕರ್ನಾಟಕದ ಬಂಜಾರಾ ಲಂಬಾಣಿ ಜನಾಂಗವನ್ನು ಪರಿಶಿಷ್ಟ ಜಾತಿಯಲ್ಲಿಯೇ ಮುಂದುವರೆಸಬೇಕು ಎಂಬುದು ನಮ್ಮ ಅಚಲ ನಿಲುವಾಗಿದೆ‘ ಎಂದರು.

ದೇವರಾಜ ನಾಯಕ್, ರಾಮಶೆಟ್ಟಿ ಪವಾರ, ಗೋಪಾಲ ಜಾಧವ, ಜಗನ್ನಾಥ ರಾಠೋಡ್, ಮೇಘರಾಜ ರಾಠೋಡ್, ಡಾ. ತುಕಾರಾಮ ಪವಾರ, ಬಲಭಿಮ ನಾಯಕ, ರಾಮರಾವ್ ರಾಠೋಡ್, ಹರಿಸಿಂಗ್, ತಾರಾಸಿಂಗ್ ಹಾಗೂ ಅನಿಲಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT