ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಆಗ್ರಹಿಸಿ ಅಹೋರಾತ್ರಿ ಸತ್ಯಾಗ್ರಹ

ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಆಗ್ರಹಿಸಿ ಧರಣಿ; ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆ
Published 24 ಜನವರಿ 2024, 13:17 IST
Last Updated 24 ಜನವರಿ 2024, 13:17 IST
ಅಕ್ಷರ ಗಾತ್ರ

ಕಲಬುರಗಿ: ‘ಬಡವರು, ಕೂಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರಿ ಶಾಲೆಗಳೇ ಆಧಾರ. ಆದರೆ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು, ಸೌಕರ್ಯಗಳ ಕೊರತೆಯಿಂದ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ’ ಎಂದು ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆ ಅಧ್ಯಕ್ಷೆ ಮೋಕ್ಷಮ್ಮ ಆರೋಪಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.25ರಿಂದ ಕಲಬುರಗಿ ಮಿನಿ ವಿಧಾನಸೌಧದ ಎದುರು ಅಹೋರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ವೇದಿಕೆಯ ಸದಸ್ಯೆ ವಿದ್ಯಾ ಪಾಟೀಲ ಮಾತನಾಡಿ, ‘ಕಲ್ಯಾಣ ಕರ್ನಾಟಕ ವಿಭಾಗದ ಶಾಲೆಗಳಲ್ಲಿ 12.5 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಆದರೆ, ಶಾಲೆಗಳಲ್ಲಿ ಶೇ 40ರಷ್ಟು ಕಾಯಂ ಶಿಕ್ಷಕರ ಕೊರತೆ ಇದೆ. ಹೀಗಾದರೆ ಗುಣಮಟ್ಟದ ಶಿಕ್ಷಣ ಸಿಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಕಲ್ಯಾಣ ಭಾಗದಲ್ಲಿ 371(ಜೆ) ಕಲಂ ಅನುಷ್ಠಾನವಾಗಿ 10 ವರ್ಷಗಳೇ ಕಳೆದಿದ್ದು, ಈ ಕಾಯ್ದೆ ಅನುಷ್ಠಾನದ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದರು.

ವೇದಿಕೆಯ ಸದಸ್ಯ ಸಯ್ಯದ್ ಹಫೀಜುಲ್ಲಾ ಮಾತನಾಡಿ, ‘ಕಲ್ಯಾಣ ಭಾಗದ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಕ್ರಮವಹಿಸಬೇಕು. ಮಕ್ಕಳಿಗೆ ಅನುಗುಣವಾಗಿ ಮೂಲ ಸೌಕರ್ಯ, ಶಿಕ್ಷಕರ ನಿಯೋಜನೆ ಸೇರಿದಂತೆ ಪ್ರತಿ ವಿಧಾನಸಭಾ ಕ್ಷೇತ್ರದ 50 ಶಾಲೆಗಳನ್ನು ಆಯ್ದು ಅಭಿವೃದ್ಧಿ ಪಡಿಸಬೇಕು. ಇದರಿಂದ ಕಲ್ಯಾಣ ಭಾಗದಲ್ಲಿ 2 ಸಾವಿರ ಶಾಲೆ ಅಭಿವೃದ್ಧಿಯಾಗಿ ಗುಣಮಟ್ಟದ ಶಿಕ್ಷಣ ಖಾತ್ರಿಯಾಗಲಿದೆ’ ಎಂದರು.

‘ಇದಕ್ಕಾಗಿ ಪ್ರತಿಶಾಲೆಗೆ ವಾರ್ಷಿಕ ₹6.50 ಲಕ್ಷದಂತೆ ಒಟ್ಟು ₹130 ಕೋಟಿ ವೆಚ್ಚವಾಗಲಿದ್ದು, ಕೆಕೆಆರ್‌ಡಿಬಿ ಅನುದಾನವನ್ನು ಇದಕ್ಕೆ ಬಳಸಬಹುದು’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಸದಸ್ಯ ಬಸವರಾಜ, ಶರಣಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT