ಶುಕ್ರವಾರ, ಡಿಸೆಂಬರ್ 2, 2022
20 °C
ಗುವಿವಿ ಸಂಸ್ಥಾಪನಾ ದಿನಾಚರಣೆಯಲ್ಲಿ ತುಮಕೂರು ವಿ.ವಿ. ಕುಲಪತಿ ಪ್ರೊ. ವೆಂಕಟೇಶ್ವರಲು

‘ಭಾರತದ ಮಾನವ ಸಂಪನ್ಮೂಲ ವಿಶ್ವ ಮಾನ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಭಾರತದ ಮಾನವ ಸಂಪನ್ಮೂಲವು ವಿಶ್ವದಲ್ಲೇ ಮಾನ್ಯತೆ ಪಡೆದಿದ್ದು, ವಿವಿಧ ದೇಶಗಳಲ್ಲಿ ಭಾರತೀಯ ಮೂಲದವರೇ ಉಪಾಧ್ಯಕ್ಷರು, ಸಚಿವರು, ಸಂಸದರಾಗಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳ ಸಿಇಒಗಳಾಗಿದ್ದಾರೆ. ಇದು ಹೆಮ್ಮೆಯ ಸಂಗತಿ’ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ 43ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವು ಅಹರ್ನಿಶಿ ಶ್ರಮಿಸಬೇಕು. ಭಾರತೀಯರು ಅದರಲ್ಲೂ ರಾಜ್ಯದ ಬೆಂಗಳೂರಿನವರು ಎಲ್ಲಾ ಕ್ಷೇತ್ರಗಳಲ್ಲೂ ದಾಪುಗಾಲು ಇಡುತ್ತಿದ್ದಾರೆ ಎಂದು ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಒಮ್ಮೆ ಹೇಳಿದ್ದರು. ಐಟಿ ಕ್ಷೇತ್ರದಲ್ಲಿ ರಾಜ್ಯದ ಕಂಪನಿಗಳು ಮಾಡುತ್ತಿರುವ ಸಾಧನೆಯನ್ನು ಗಮನಿಸಿ ಒಬಾಮ ಹೇಳಿದ್ದರು’ ಎಂದರು.

'ಹಾರ್ವರ್ಡ್ ವಿಶ್ವವಿದ್ಯಾಲಯವೊಂದರಲ್ಲೇ ಓದಿದ 130 ಜನರಿಗೆ ನೊಬೆಲ್ ಪ್ರಶಸ್ತಿ ದೊರಕಿದೆ. ಹಲವು ಐಟಿ ಕಂಪನಿಗಳು, ಪ್ರಖ್ಯಾತ ವೈದ್ಯರು, ಎಂಜಿನಿಯರ್‌ಗಳು, ಬಾಹ್ಯಾಕಾಶ ತಂತ್ರಜ್ಞರು ಇದೇ ಹಾರ್ವರ್ಡ್‌ನಲ್ಲಿ ಓದಿದ್ದಾರೆ. ಅದೇ ರೀತಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯವನ್ನು ಅದರ ಸಂಸ್ಥಾಪಕರು ತಮ್ಮ ಪುತ್ರನ ಸ್ಮರಣಾರ್ಥವಾಗಿ ಎಲ್ಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲಿ ಎಂಬ ಉದ್ದೇಶದಿಂದ ವಿ.ವಿ. ಆರಂಭಿಸಿದರು’ ಎಂದು ಹೇಳಿದರು.

‘ಮದನ ಮೋಹನ ಮಾಳವೀಯ ಅವರಿಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಆರಂಭಿಸುವಾಗ ಹಣಕಾಸಿನ ತೀವ್ರ ಕೊರತೆ ಕಾಡಿತು. ಈ ಕುರಿತು ಅಲ್ಲಿನ ರಾಜರಿಗೆ ಮನವಿ ಸಲ್ಲಿಸಿದರು. ನನ್ನ ಹತ್ತಿರ ಹಣ ಇಲ್ಲ. ಬೇಕಿದ್ದರೆ ನನ್ನ ಚಪ್ಪಲಿ ಒಯ್ಯಬಹುದು ಎಂದರು. ಮಾಳವೀಯರು ಅದೇ ಚಪ್ಪಲಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಇರಿಸಿ, ಹಣ ಸಂಗ್ರಹಿಸಿ  ವಿವಿ ಕಟ್ಟಲು ಹಣ ಸಂಗ್ರಹಿಸಿದರು. ಸಂಗ್ರಹವಾದ ಹಣದಿಂದ ವಿಶ್ವವಿದ್ಯಾಲಯ ಸ್ಥಾಪಿಸಿದರು. ಆ ನಂತರ 19 ವರ್ಷ ಕುಲಪತಿಗಳಾಗಿ ಕಾರ್ಯನಿರ್ವಹಿಸಿದರು’ ಎಂದು ಪ್ರೊ. ವೆಂಕಟೇಶ್ವರಲು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ದಯಾನಂದ ಅಗಸರ ಮಾತನಾಡಿ, ‘ವಿಶ್ವವಿದ್ಯಾಲಯಕ್ಕೆ ಕೆಲವೇ ತಿಂಗಳಲ್ಲಿ ನ್ಯಾಕ್ ಸಮಿತಿಯು ಭೇಟಿ ನೀಡಿ ವಿ.ವಿ.ಗೆ ಗ್ರೇಡ್ ನೀಡಲಿದೆ. ಕಳೆದ ಬಾರಿ ಕೈತಪ್ಪಿ ಹೋಗಿದ್ದ ‘ಎ’ ಗ್ರೇಡ್ ಪಡೆಯಲು ಈಗಿನಿಂದಲೇ ಕೆಲಸ ಪ್ರಾರಂಭಿಸಲಾಗಿದೆ. ರಾಜ್ಯದಲ್ಲಿ ಅಳವಡಿಸಿಕೊಂಡಿರುವ ರಾಷ್ಟ್ರೀಯ ಶಿಕ್ಷಣ ನೀತಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಹೊಣೆ ನಮ್ಮ ಮೇಲಿದೆ. ವಿವಿ ಪೀಠೋಪರಣಕ್ಕೆ ₹ 9 ಕೋಟಿ ಹಾಗೂ ಸಾಫ್ಟ್‌ವೇರ್, ಐಟಿ ಸಂಬಂಧಿಸಿದ ಮೂಲಸೌಕರ್ಯಕ್ಕೆ ₹ 14 ಕೋಟಿ ಬಿಡುಗಡೆಯಾಗಿದೆ. ಬೋಧಕ, ಬೋಧಕೇತರ ಸಿಬ್ಬಂದಿ ಪ್ರಕ್ರಿಯೆ ಆರಂಭಗೊಳ್ಳಲಿದೆ’ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಫೆಲೋಶಿಪ್, ಪ್ರಶಸ್ತಿ ಪಡೆದ ಪ್ರೊ. ದಯಾನಂದ ಅಗಸರ, ಪ್ರೊ.ಎಚ್.ಟಿ. ಪೋತೆ, ಪ್ರೊ. ವೆಂಕಟರಮಣ, ಹಣಮಂತ ಜಂಗೆ, ಶಾಹೀದ್ ಪಾಶಾ ಅವರನ್ನು ಸನ್ಮಾನಿಸಲಾಯಿತು.

ಮೌಲ್ಯಮಾಪನ ಕುಲಸಚಿವೆ ಡಾ. ಮೇಧಾವಿನಿ ಎಸ್. ಕಟ್ಟಿ, ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಯೋಗೇಶ ಎಂ.ಬಿ,ಪ್ರೊ. ರಮೇಶ ಲಂಡನಕರ್ ಮತ್ತು ಪ್ರೊ. ಪರಿಮಳಾ ಅಂಬೇಕರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು