ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಪುತ್ಥಳಿಗೆ ಅಪಮಾನ: ಕಲಬುರಗಿ‌ ನಗರದಲ್ಲಿ ಅಂಗಡಿ- ಮುಂಗಟ್ಟುಗಳು ಬಂದ್

Published 23 ಜನವರಿ 2024, 11:48 IST
Last Updated 23 ಜನವರಿ 2024, 11:48 IST
ಅಕ್ಷರ ಗಾತ್ರ

ಕಲಬುರಗಿ: ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯ ಅಪಮಾನ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನಗರದ ಅಂಗಡಿ- ಮುಂಗಟ್ಟುಗಳನ್ನು ಮಂಗಳವಾರ ಒತ್ತಾಯವಾಗಿ ಬಂದ್ ಮಾಡಿಸಲಾಯಿತು.

ಸರ್ದಾರ್ ವಲ್ಲಭಭಾಯಿ ಪಟೇಲ್, ರಾಮಮಂದಿರ ವೃತ್ತ, ಜಗತ್ ವೃತ್ತ, ಸೂಪರ್ ಮಾರ್ಕೆಟ್, ಗಂಜ್ ಪ್ರದೇಶ ಸೇರಿದಂತೆ ಹಲವೆಡೆ ಅಂಗಡಿಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿಸಿದರು.

ಜಗತ್ ವೃತ್ತದಲ್ಲಿ ಎಲ್ಲ ರಸ್ತೆಗಳನ್ನು ತಡೆದು ಕಳೆದ ನಾಲ್ಕೈದು ತಾಸುಗಳಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಡಿಸಿಪಿ ಕನ್ನಿಕಾ ಸಿಕ್ರಿವಾಲ್ ಅವರ ಕಾರನ್ನು ತಡೆದು ನಿಲ್ಲಿಸಿದ ಪ್ರತಿಭಟನಾಕಾರರು, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.

ನಗರದ ಪ್ರಮುಖ ವೃತ್ತಗಳಲ್ಲಿ ಟೈಯರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಗಿದೆ.

ವಿವಿಧ ಸಂಘಟನೆಗಳ ಮತ್ತು ಬಹುಜನ ಸಮಾಜದ ಮುಖಂಡರು ಹಾಗೂ ಯುವಕರು ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ರಸ್ತೆ ಸಂಚಾರ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ವೃತ್ತದಲ್ಲಿ ಟೈಯರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಮೂರು ಗಂಟೆಗಳ ಕಾಲ ನಾಲ್ಕೂ ದಿಕ್ಕುಗಳಲ್ಲಿ ವಾಹನಗಳ ಸಂಚಾರ ಬಂದ್‌ ಆಗಿತ್ತು. ಪ್ರಯಾಣಿಕರು ಪರದಾಡಿದರು. ವೃತ್ತದಲ್ಲಿ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿತ್ತು.

ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮುಖಂಡರು ‘ಕಿಡಿಗೇಡಿಗಳ ಬಂಧನ ಆಗಿದೆ. ಜಿಲ್ಲಾಧಿಕಾರಿ ಅವರು ರಾಮಮಂದಿರ ವೃತ್ತದ ಧರಣಿ ಸ್ಥಳಕ್ಕೆ ಬಂದು ಮನವಿ ಆಲಿಸಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲಿ ಧರಣಿ ಕೈಬಿಡಲಾಗಿದೆ. ಕಾರಣ ಇಲ್ಲಿಯೂ ಪ್ರತಿಭಟನೆ ಹಿಂಪಡೆಯೋಣ’ ಎಂದು ಹೇಳಿದರು. ಆದರೆ, ಯುವಕರು ಕಿಡಿಗೇಡಿಗಳ ಬಂಧನದ ಚಿತ್ರ ತೋರಿಸಿ ಎಂದು ಪಟ್ಟು ಹಿಡಿದರು.

ಭೀಮ ಆರ್ಮಿ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಎಸ್.ತಾವಡೆ, ಭಾರತೀಯ ಬೌದ್ಧ ಮಹಾಸಭಾದ ಸುರೇಶ ಕಾನೇಕರ್‌, ದಿಗಂಬರ್ ಬೆಳಮಗಿ, ಸಂತೋಷ ಮೇಲಮನಿ, ಸೂರ್ಯಕಾಂತ ನಿಂಬಾಳಕರ್‌, ಲಕ್ಷ್ಮಿಕಾಂತ ಹುಬ್ಬಳ್ಳಿ, ಪವನಕುಮಾರ ವಳಕೇರಿ, ಭೀಮರಾಯ ನಗನೂರ, ಅರ್ಜುನ ಗೊಬ್ಬೂರ್‌, ಚಂದ್ರಕಾಂತ ಕಟ್ಟಿ, ದೇವಾ ಧರ್ಮಾಪೂರ, ಪ್ರಕಾಶ ಬಾಲೆ, ಶಾಮರಾವ್‌ ಶಿಂದೆ ಇತರರು ಪಾಲ್ಗೊಂಡಿದ್ದರು.

ಕಲಬುರಗಿಯಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಿಂದಾಗಿ ಮುಚ್ಚಲಾದ ಅಂಗಡಿಗಳು

ಕಲಬುರಗಿಯಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಿಂದಾಗಿ ಮುಚ್ಚಲಾದ ಅಂಗಡಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT