ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ಮಾ.5ರಂದು ಜಿಲ್ಲಾ ಮಟ್ಟದ ಜನಸ್ಪಂದನ ಸಭೆ

Published 3 ಮಾರ್ಚ್ 2024, 13:56 IST
Last Updated 3 ಮಾರ್ಚ್ 2024, 13:56 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾ.5ರಂದು ಬೆಳಿಗ್ಗೆ 11ಗಂಟೆಯಿಂದ ಸಂಜೆ 5 ರವರೆಗೆ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಯಲಿದೆ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆ ವಹಿಸಲಿದ್ದು, ಸಚಿವ ಡಾ. ಶರಣಪ್ರಕಾಶ ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್‌, ಶಾಸಕರಾದ ಕನೀಜ್‌ ಫಾತಿಮಾ, ಬಿ.ಆರ್‌.ಪಾಟೀಲ, ಎಂ.ವೈ.ಪಾಟೀಲ, ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಸೇರಿ ಮತ್ತಿತರರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ಅಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಕಲಬುರಗಿಗೆ ಆಗಮಿಸಲಿದ್ದು, ಕೆಕೆಆರ್‌ಟಿಸಿ ಹುದ್ದೆಗೆ ನೇಮಕವಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಿಸಲಿದ್ದಾರೆ. ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದು ಸಮಸ್ಯೆಗಳನ್ನು ಆಲಿಸಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ಹೇಳಿದರು.

ಹೊಸ ಬಸ್‌ ನಿಲ್ದಾಣಕ್ಕೆ ಮನವಿ: ‘ಮತಕ್ಷೇತ್ರದ ಸಿಂಧಗಿ, ಕೋಟನೂರ ಗ್ರಾಮದ ಕೃಷಿ ತರಬೇತಿ ಕೇಂದ್ರ, ಆಳಂದ ಚೆಕ್ ಪೋಸ್ಟ್‌ ಬಳಿ ಇರುವ ಕೃಷಿ ಇಲಾಖೆ ಕಚೇರಿ, ವಿಶ್ವವಿದ್ಯಾಲಯದ ಬಳಿ ಹೊಸ ಬಸ್‌ ನಿಲ್ದಾಣಕ್ಕೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಅನುದಾನ ನೀಡುವ ಭರವಸೆ ಇದೆ’ ಎಂದು ಹೇಳಿದರು.

ಜಾತಿಗಣತಿ ಅಂಕಿ ಅಂಶಗಳನ್ನು ಆಯೋಗದ ತಂಡ ಮುಖ್ಯಮಂತ್ರಿಗೆ ವರದಿ ಸಲ್ಲಿಸಿದೆ. ಅದರಲ್ಲಿರುವ ಸಾಧಕ– ಬಾಧಕಗಳ ಬಗ್ಗೆ ಪರ ವಿರೋಧ ಚರ್ಚೆ ನಡೆದಿದೆ. ಚರ್ಚೆಯ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್ ಮುಖಂಡರಾದ ಲಿಂಗರಾಜ ತಾರಫೈಲ, ಲಿಂಗರಾಜ ಕಣ್ಣಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT