ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

3 ತಿಂಗಳಲ್ಲಿ ಜಯದೇವ,ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ: ಶರಣಪ್ರಕಾಶ ಪಾಟೀಲ

₹30.14 ಕೋಟಿ ವೆಚ್ಚದ ಸಿಸಿಬಿ, ₹15.57 ಕೋಟಿ ವೆಚ್ಚದ ಸುಟ್ಟ ಗಾಯಗಳ ಚಿಕಿತ್ಸಾ ಘಟಕಗಳ ಕಟ್ಟಡಕ್ಕೆ ಶಂಕುಸ್ಥಾಪನೆ
Published 22 ಜೂನ್ 2024, 14:24 IST
Last Updated 22 ಜೂನ್ 2024, 14:24 IST
ಅಕ್ಷರ ಗಾತ್ರ

ಕಲಬುರಗಿ: ‘ಕಲಬುರಗಿಯನ್ನು ಆರೋಗ್ಯ ಕೇಂದ್ರವಾಗಿಸುವ (ಹೆಲ್ತ್‌ ಹಬ್‌) ಪ್ರಯತ್ನ ಪ್ರಗತಿಯಲ್ಲಿದ್ದು, ಮೂರು ತಿಂಗಳಲ್ಲಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಜಯದೇವ ಹೃದ್ರೋಗ ಸಂಸ್ಥೆಗಳ ಹೊಸ ಕಟ್ಟಡಗಳನ್ನು ಉದ್ಘಾಟಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಹೇಳಿದರು.‌

ನಗರದ ಜಿಮ್ಸ್‌ ಆವರಣದಲ್ಲಿ ಕ್ರಿಟಿಕಲ್‌ ಕೇರ್‌ ಬ್ಲಾಕ್‌(ಸಿಸಿಬಿ) ಹಾಗೂ ಸುಟ್ಟ ಗಾಯಗಳ ಚಿಕಿತ್ಸಾ ಘಟಕಗಳ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿಸಿಬಿ ಹಾಗೂ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ಸ್ಥಾಪನೆಯು ಕಲಬುರಗಿಯನ್ನು ಹೆಲ್ತ್‌ ಹಬ್‌ ಮಾಡುವ ಪ್ರಯತ್ನದ ಮುಂದುವರಿದ ಭಾಗವಾಗಿದೆ. ಇದರೊಂದಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿಯೂ ಈ ತಿಂಗಳಾಂತ್ಯಕ್ಕೆ ಮುಗಿಯಲಿದೆ. ಉಪಕರಣಗಳ ಅಳವಡಿಕೆಗೆ ಈಗಾಗಲೇ ಟೆಂಡರ್‌ ಕೂಡ ಆಗಿದ್ದು, ಸಿಬ್ಬಂದಿ ನೇಮಕವಷ್ಟೇ ಬಾಕಿ ಉಳಿದಿದೆ. ಇನ್ನು, ಜಯದೇವ ಹೃದ್ರೋಗ ಸಂಸ್ಥೆಯ ಹೊಸ ಕಟ್ಟಡವನ್ನು ಆಗಸ್ಟ್‌ ಕೊನೆ ಇಲ್ಲವೇ ಸೆಪ್ಟೆಂಬರ್‌ನಲ್ಲಿ ಜನರ ಸೇವೆಗೆ ಮುಕ್ತಗೊಳಿಸಲು ಚಿಂತನೆ ನಡೆದಿದೆ’ ಎಂದು ವಿವರಿಸಿದರು.

‘ಈಗ ಅಡಿಗಲ್ಲು ಹಾಕಿರುವ ಸುಟ್ಟ ಗಾಯಗಳ ಚಿಕಿತ್ಸಾ ಘಟಕ ಹಾಗೂ ಸಿಸಿಬಿ ಆಸ್ಪತ್ರೆ ಒಂದೂವರೆ ವರ್ಷದೊಳಗೆ ತಲೆ ಎತ್ತಲಿವೆ. ಇದರೊಂದಿಗೆ ಇನ್ನೂ ಮೂರು ಆಸ್ಪತ್ರೆಗಳ ಸ್ಥಾಪನೆಗೆ ಮಂಜೂರಾತಿ ದೊರೆತಿದೆ. ಹಳೇ ಆಸ್ಪತ್ರೆ ಉರುಳಿಸಿ, ಸುಮಾರು ₹92 ಕೋಟಿ ವೆಚ್ಚದಲ್ಲಿ 200 ಹಾಸಿಗೆ ಸಾಮರ್ಥ್ಯದ ತಾಯಿ–ಮಗು ಆಸ್ಪತ್ರೆ ಸ್ಥಾಪಿಸಲಾಗುವುದು. ಅದರ ಜೊತೆಗೆ ₹72 ಕೋಟಿ ವೆಚ್ಚದಲ್ಲಿ 150 ಹಾಸಿಗೆ ಸಾಮರ್ಥ್ಯದ ಕಿದ್ವಾಯಿ ಕ್ಯಾನ್ಸರ್‌ ಸೆಂಟರ್‌ಗೆ ಹೊಸ ಕಟ್ಟಡ ನಿರ್ಮಿಸಲಾಗುವುದು. ಅದಕ್ಕೆ ಸಂಪುಟದ ಅನುಮೋದನೆ ದೊರೆತಿದ್ದು, ಟೆಂಡರ್‌ ಕೂಡ ಕರೆಯಲಾಗಿದೆ. ಇವೆರಡೂ ಕಟ್ಟಡಗಳಿಗೆ ಒಂದೂವರೆ ತಿಂಗಳಲ್ಲಿ ಅಡಿಗಲ್ಲು ಸಮಾರಂಭ ಜರುಗಲಿದೆ’ ಎಂದರು.

‘ಬೆಂಗಳೂರಿನಲ್ಲಿರುವ ಇಂದಿರಾಗಾಂಧಿ ಇನ್‌ಸ್ಟಿಟ್ಯೂಟ್‌ ಚೈಲ್ಡ್‌ ಹೆಲ್ತ್‌ನ (ಮಕ್ಕಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ) ಶಾಖೆಯನ್ನು ₹90 ಕೋಟಿ ವೆಚ್ಚದಲ್ಲಿ ಕಲಬುರಗಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕೂ ಮೂರ್ನಾಲ್ಕು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಇದಲ್ಲದೇ, ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿರುವ ನಿಮ್ಹಾನ್ಸ್‌ನಂಥ ಸಂಸ್ಥೆ ಕಲಬುರಗಿಯಲ್ಲಿ ಸ್ಥಾಪಿಸುವ ಕನಸಿದೆ’ ಎಂದರು.

‘ಕಲಬುರಗಿಯಲ್ಲಿರುವ ಪುರಾತನ ಬಾಲಕರ ಐಟಿಐ ಕಾಲೇಜಿಗೆ ₹20 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು. ₹50 ಕೋಟಿ ವೆಚ್ಚದಲ್ಲಿ ಬಹುಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸುವ ಉದ್ದೇಶವಿದೆ. ಕಲಬುರಗಿಯ ಕೆಜಿಟಿಟಿಐನಲ್ಲಿ ಸೆಂಟರ್ ಆಫ್‌ ಎಕ್ಸಲೆನ್ಸ್ ಸ್ಥಾಪಿಸಲಾಗುವುದು’ ಎಂದು ಕೌಶಲಾಭಿವೃದ್ಧಿ ಸಚಿವರೂ ಆಗಿರುವ ಶರಣಪ್ರಕಾಶ ಪಾಟೀಲ ತಿಳಿಸಿದರು.

ವಿದ್ಯಾರ್ಥಿಗಳಿಗೆ ಸೌಲಭ್ಯ ವಿತರಣೆ:

ಇದೇ‌ ವೇಳೆ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ, ದಂತ‌ ವೈದ್ಯಕೀಯ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಎಸ್.ಸಿ.ಪಿ-ಟಿ.ಎಸ್.ಪಿ ಅನುದಾನದಡಿ ಮಂಜೂರಾದ ಲ್ಯಾಪ್‌ಟಾಪ್, ಪುಸ್ತಕಗಳನ್ನು ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಡಾ. ಶರಣಪ್ರಕಾಶ ಪಾಟೀಲ ವಿತರಿಸಿದರು.

ಸಿ.ಎಂ. ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ, ಅಫಜಲಪುರ ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರಪ್ಪ ಮರತೂರ, ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಬ್ದುಲ್ ರಶೀದ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜಿಲ್ಲಾ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಚೇತನ್‌ ಆರ್., ಎಸ್ಪಿ ಅಕ್ಷಯ ಹಾಕೆ, ಡಿಸಿಪಿ ಕನಿಕಾ ಸಿಕ್ರಿವಾಲ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರಸಿಂಗ್ ಮೀನಾ, ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಜಿಲ್ಲಾ ಸರ್ಜನ್ ಡಾ. ಓಂಪ್ರಕಾಶ, ಜಿಮ್ಸ್‌ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಪಾಟೀಲ ಸೇರಿದಂತೆ ಜಿಮ್ಸ್ ನ ಅಂಗ ಸಂಸ್ಥೆಗಳ ವೈದ್ಯ ಮತ್ತು ವೈದ್ಯಕೀಯೇತರ ಸಿಬ್ಬಂದಿ ಇದ್ದರು. ಜಿಮ್ಸ್ ನಿರ್ದೇಶಕ ಡಾ. ಉಮೇಶ ಎಸ್.ಆರ್. ಸ್ವಾಗತಿಸಿದರು.

‘ಹೆಲ್ತ್‌ ಹಬ್‌ಗೆ 371(ಜೆ) ಬಲ’ ‌

‘ಕಲಬುರಗಿ ಪ್ರಾದೇಶಿಕ ಆರೋಗ್ಯ ಕೇಂದ್ರವಾಗಿ ಪರಿವರ್ತನೆಯಾಗಿದೆ. ಕಾಂಗ್ರೆಸ್‌ ಸರ್ಕಾರ ಕಾಳಜಿ ಇರುವ ಶರಣ ಪ್ರಕಾಶ ಪಾಟೀಲರಂಥ ಸಚಿವರು ಹಾಗೂ ಸಂವಿಧಾನದ 371(ಜೆ) ಕಲಂ ಬಲದಿಂದ ಇದೆಲ್ಲ ಸಾಧ್ಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರತಿಪಾದಿಸಿದರು. ‘ಕಲಬುರಗಿಯಲ್ಲಿ ಜಯದೇವ ಕಿದ್ವಾಯಿ ಟ್ರಾಮಾ ಸೆಂಟರ್‌ ತಾಯಿ–ಮಗು ಆಸ್ಪತ್ರೆ ಸೇರಿದಂತೆ ಹತ್ತಾರು ಸೌಲಭ್ಯಗಳಿವೆ. ಬರೀ ಕಟ್ಟಡಗಳನ್ನು ನಿರ್ಮಿಸಿದರೆ ಹೆಲ್ತ್‌ ಹಬ್‌ ಆಗಲ್ಲ. ಅದಕ್ಕೆ ತಕ್ಕಂತೆ ವೃತ್ತಿಪರತೆ ಮಾನವ ಸಂಪನ್ಮೂಲವನ್ನೂ ಬೆಳೆಸಬೇಕು. ಅದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಪರಿಶ್ರಮಪಟ್ಟು 371(ಜೆ) ಕಲಂನಲ್ಲಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡುವ ಅಂಶ ಸೇರ್ಪಡೆ ಮಾಡಿಸಿದರು. ಅದರ ಫಲವಾಗಿ ಕಳೆದ ಹತ್ತು ವರ್ಷದಲ್ಲಿ ಏಳು ಸಾವಿರ ವೈದ್ಯಕೀಯ ಸೀಟುಗಳು ಈ ಭಾಗಕ್ಕೆ ಸಿಕ್ಕಿವೆ. ಈ ವರ್ಷ 999 ಸೀಟುಗಳು ದೊರೆತಿವೆ. ಒಟ್ಟಾರೆ ಕಲಬುರಗಿಯನ್ನು ಹೆಲ್ತ್‌ ಹಬ್‌ ಮಾಡುವ ನಿಟ್ಟಿನಲ್ಲಿ ಬೇಕಾದ ಅನುದಾನ ಹಾಗೂ ಸಹಕಾರ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.

ಜಿ+2 ಜಿ+1 ಕಟ್ಟಡ...

ಜಿಮ್ಸ್‌ ಆವರಣದಲ್ಲಿ ಶನಿವಾರ ಶಂಕುಸ್ಥಾಪನೆ ನೆರವೇರಿಸಲಾದ ₹30.14 ಕೋಟಿ ವೆಚ್ಚದ 50 ಹಾಸಿಗೆಗಳ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಕಟ್ಟಡವೂ ಇಂಗ್ಲಿಷ್‌ ‘ಎಲ್’ ಆಕಾರದಲ್ಲಿ ಜಿ+2 ಮಾದರಿಯಲ್ಲಿ ನಿರ್ಮಾಣಗೊಳ್ಳಲಿದೆ. ಅದರಲ್ಲಿ 16 ಬೆಡ್‌ಗಳ ಐಸಿಯು/ಎಚ್‌ಡಿಯು ಘಟಕ 5 ಬೆಡ್‌ ತುರ್ತು ಘಟಕ 2 ಬೆಡ್‌ಗಳ ಡಯಾಲಿಸಿಸ್‌ ಘಟಕ ಎರಡು ಬೆಡ್‌ ಎಂಸಿಎಚ್‌ ಒಂದು ಬೆಡ್‌ ಎಲ್‌ಡಿಆರ್‌ 24 ಬೆಡ್‌ಗಳ ಸಾಮಾನ್ಯ ವಾರ್ಡ್‌ ಇರಲಿದೆ. ಇನ್ನು 30 ಹಾಸಿಗೆ ಸಾಮರ್ಥ್ಯದ ಸುಟ್ಟ ಗಾಯಗಳ ಘಟಕದ ಕಟ್ಟಡವು ₹15.57 ಕೋಟಿ ವೆಚ್ಚದಲ್ಲಿ ಜಿ+1 ಮಾದರಿಯಲ್ಲಿ ತಲೆ ಎತ್ತಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT