ಭಾನುವಾರ, ಮೇ 22, 2022
28 °C
ದೇವಲ ಗಾಣಗಾಪುರದ ಸಂಗಮದಲ್ಲಿ 16ರಂದು ಚಾಲನೆ: ನಾಸಿರ್ ಹುಸೇನ್ ಉಸ್ತಾದ್

ಜೆಡಿಎಸ್‌ನಿಂದ ಜನತಾ ಜಲಧಾರೆ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ರಾಜ್ಯದಲ್ಲಿನ ನೀರಾವರಿ ಯೋಜನೆಗಳಿಗೆ ಸಾವಿರಾರು ಕೋಟಿ ಸುರಿದರೂ ರೈತರ ಹೊಲಗಳಿಗೆ ನೀರು ಹರಿದಿಲ್ಲ. ಕೃಷ್ಣಾ, ಕಾವೇರಿ, ಭೀಮಾ ಕೊಳ್ಳದ ಹಲವಾರು ಯೋಜನೆಗಳು ನನೆಗುದಿಗೆ ಬಿದ್ದಿವೆ. ಈ ಬಗ್ಗೆ ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಜನತಾ ಜಲಧಾರೆ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ರಾಜ್ಯ ಅಧ್ಯಕ್ಷ ನಾಸಿರ್ ಹುಸೇನ್ ಉಸ್ತಾದ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಏಪ್ರಿಲ್ 16ರಿಂದ ಅಭಿಯಾನ ಆರಂಭಗೊಳ್ಳಲಿದ್ದು, ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕೆಆರ್‌ಎಸ್‌ನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ಕೃಷ್ಣಾ ನದಿಗೆ ಆಲಮಟ್ಟಿಯಲ್ಲಿ ಕಟ್ಟಿರುವ ಲಾಲ್‌ ಬಹದ್ದೂರ್ ಶಾಸ್ತ್ರಿ ಅಣೆಕಟ್ಟೆಯಲ್ಲಿ ಪಕ್ಷದ ವರಿಷ್ಠ ಎಚ್‌.ಡಿ. ಕುಮಾರಸ್ವಾಮಿ ಅವರು ಜಲಧಾರೆ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ’ ಎಂದರು.

ಪಕ್ಷದ ಅಫಜಲಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಕುಮಾರ ನಾಟೀಕಾರ ಮಾತನಾಡಿ, ‘ಬೀದರ್ ಜಿಲ್ಲೆಯಲ್ಲಿ ಅಭಿಯಾನಕ್ಕೆ ಬಂಡೆಪ್ಪ ಕಾಶೆಂಪೂರ ಚಾಲನೆ ನೀಡಲಿದ್ದು, ದೇವಲ ಗಾಣಗಾಪುರದ ಅಮರ್ಜಾ, ಭೀಮಾ ನದಿ ಸಂಗಮ ಸ್ಥಳದಲ್ಲಿ ನಾಸಿರ್ ಹುಸೇನ್ ಉಸ್ತಾದ್ ಅವರು ಚಾಲನೆ ನೀಡಲಿದ್ದಾರೆ. ನಂತರ ಜಾಗೃತಿ ಮೂಡಿಸುವ ವಾಹನಗಳಲ್ಲಿ ಪಕ್ಷದ ಮುಖಂಡರು ಸೊನ್ನ ಭೀಮಾ ಬ್ಯಾರೇಜ್, ಅಮರ್ಜಾ ಜಲಾಶಯ, ಕೆಳದಂಡೆ ಮಲ್ಲಾಮಾರಿ ಸೇರಿದಂತೆ ವಿವಿಧ ಯೋಜನೆಗಳಿರುವ ಅಣೆಕಟ್ಟೆ, ಬ್ರಿಡ್ಜ್ ಕಂ ಬ್ಯಾರೇಜ್‌ಗೆ ತೆರಳಿ ಅರಿವು ಮೂಡಿಸಲಿದ್ದಾರೆ. ಈ ಅವಧಿಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ದಿನಾಂಕ ಶೀಘ್ರದಲ್ಲೇ ಅಂತಿಮವಾಗಲಿದೆ’ ಎಂದು ಹೇಳಿದರು.

‘ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದ ಅವಧಿಯಲ್ಲಿ ರೈತರ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಸಾಧ್ಯವಾದಷ್ಟು ಹೆಚ್ಚು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ನಂತರ ಬಂದ ಸರ್ಕಾರಗಳು ಯೋಜನೆಗೆ ಹಣ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದವು’ ಎಂದು ಟೀಕಿಸಿದರು.

ಪಕ್ಷದ ಮುಖಂಡ ಬಾಲರಾಜ ಗುತ್ತೇದಾರ ಮಾತನಾಡಿ, ‘ವೈಯಕ್ತಿಕ ನೆಲೆಯಲ್ಲಿ ನಮ್ಮಿಂದ ಸಾಧ್ಯವಾದಷ್ಟು ಜನರಿಗೆ ನೆರವು ನೀಡುತ್ತಿದ್ದೇವೆ. ಸಮಸ್ಯೆ ಕಂಡು ಬಂದ ಪ್ರದೇಶಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ್ ಒದಗಿಸಲಾಗಿದೆ’ ಎಂದರು.

ಚಿಂಚೋಳಿಯ ಜೆಡಿಎಸ್ ಮುಖಂಡ ಸಂಜೀವನ ಯಾಕಾಪುರ, ಪಕ್ಷದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಕೃಷ್ಣಾರೆಡ್ಡಿ ಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.