ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲೇಜು ಮೂರು: ಸಮಸ್ಯೆ ಹತ್ತಾರು

ಜೇವರ್ಗಿ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಬೆಂಚ್, ಕೊಠಡಿ, ಉಪನ್ಯಾಸಕರ ಕೊರತೆ
ವೆಂಕಟೇಶ ಹರವಾಳ
Published 20 ಜೂನ್ 2024, 7:17 IST
Last Updated 20 ಜೂನ್ 2024, 7:17 IST
ಅಕ್ಷರ ಗಾತ್ರ

ಜೇವರ್ಗಿ: ಪಟ್ಟಣದಲ್ಲಿನ ಮೂರು ಪದವಿಪೂರ್ವ ಕಾಲೇಜುಗಳ ಪೈಕಿ ಬಸವೇಶ್ವರ ವೃತ್ತದಲ್ಲಿನ ಸರ್ಕಾರಿ ಪಿಯು ಕಾಲೇಜು ಹಳೆಯದಾಗಿದೆ. ಇದರ ಜತೆಗೆ ಬಾಲಕಿಯರ ಸರ್ಕಾರಿ ಸ್ವತಂತ್ರ ಪಿಯು ಹಾಗೂ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜುಗಳಲ್ಲಿ ನೂರಾರು ವಿದ್ಯಾರ್ಥಿಗಳು ಹತ್ತಾರು ಸಮಸ್ಯೆಗಳ ನಡುವೆ ತಮ್ಮ ಶಿಕ್ಷಣವನ್ನು ಮುಂದುವರಿಸಿದ್ದಾರೆ.

ಹಳೆಯ ಪಿಯು ಕಾಲೇಜಿನ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸೇರಿ ದ್ವಿತೀಯ ವರ್ಷದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. 12 ಉಪನ್ಯಾಸಕರು ಇದ್ದಾರೆ. ಸಮಾಜ ವಿಜ್ಞಾನ, ಕನ್ನಡ, ಹಿಂದಿ ಮತ್ತು ಶಿಕ್ಷಣ ವಿಷಯಗಳ ಬೋಧನೆಗೆ ಕಾಯಂ ಉಪನ್ಯಾಸಕರಿಲ್ಲ. ಮೂರು ಸ್ಮಾರ್ಟ್‌ಕ್ಲಾಸ್‌ ಕೊಠಡಿ, ಮೂರು ಪ್ರಯೋಗಾಲಯ ಕೋಣೆಗಳಿದ್ದರೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೂರಲು ಬೆಂಚ್‌ಗಳಿಲ್ಲ.

‘₹ 8 ಲಕ್ಷ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರೂ ಹನಿ ನೀರು ಬರುತ್ತಿಲ್ಲ. ಮೇಲಿನ ಮಹಡಿಯ ಕೋಣೆಗಳು ಅಪೂರ್ಣವಾಗಿದ್ದು, ಇನ್ನೂ ಮೂರು ಸ್ಮಾರ್ಟ್‌ಕ್ಲಾಸ್‌ಗಳು ಆರಂಭವಾಗಬೇಕಿದೆ. ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕಾಲೇಜಿಗೆ ಕೀರ್ತಿ ತಂದಿದ್ದಾರೆ’ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯ ರವೀಂದ್ರಕುಮಾರ ಬಟಗೇರಿ.

ಬಾಲಕಿಯರ ಸರ್ಕಾರಿ ಸ್ವತಂತ್ರ ಪಿಯು ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ 10 ಕೋಣೆಗಳಿದ್ದರೂ ಪ್ರಯೋಗಾಲಯ ಮತ್ತು ಗ್ರಂಥಾಲಯ ಸೌಕರ್ಯವಿಲ್ಲ. ಪಿಯು ದ್ವಿತೀಯ ವರ್ಷದಲ್ಲಿ 341 ಹಾಗೂ ಪ್ರಥಮ ವರ್ಷದಲ್ಲಿ 125 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಪ್ರಾಚಾರ್ಯರು ಸೇರಿ 12 ಮಂದಿ ಉಪನ್ಯಾಸಕರಿದ್ದಾರೆ.

ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕವಿದೆ. ಆದರೆ, ಕೊಳವೆಬಾವಿ ಇಲ್ಲದೆ ಸಮರ್ಪಕವಾದ ನೀರಿನ ವ್ಯವಸ್ಥೆ ಇಲ್ಲ. ಇದೇ ಕಾಲೇಜನ್ನು ಪ್ರಸಕ್ತ ವರ್ಷದಲ್ಲಿ ಆದರ್ಶ ಕಾಲೇಜು ಎಂದು ಸರ್ಕಾರ ಘೋಷಿಸಿದೆ. ‘ಸ್ಥಳಾವಕಾಶ ಕೊರತೆಯ ಈ ಕಾಲೇಜಿಗೆ ಹಳೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಿವೇಶನ ನೀಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂಬುದು ಪಾಲಕರ ಕೋರಿಕೆಯಾಗಿದೆ.

‘ಕಾಂಪೌಂಡ್ ಇಲ್ಲದ ಸರ್ಕಾರಿ ಸ್ವತಂತ್ರ ಸಂಯುಕ್ತ ಪಿಯು ಕಾಲೇಜಿನಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ 3 ಕೊಠಡಿ ನಿರ್ಮಾಣವಾಗಿದ್ದರೂ ಇನ್ನೂ ಹಸ್ತಾಂತರವಾಗಿಲ್ಲ. ಒಂದು ಪ್ರಾಚಾರ್ಯರ ಹಾಗೂ ಮೂರು ತರಗತಿ ಕೋಣೆಗಳಿವೆ. ಪಿಯು ಪ್ರಥಮ ವರ್ಷದಲ್ಲಿ 27 ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಪ್ರವೇಶ ಪಡೆದಿದ್ದಾರೆ. ದ್ವಿತೀಯ ವರ್ಷದಲ್ಲಿ 14 ವಿದ್ಯಾಥಿಗಳಿದ್ದಾರೆ. ಕಲಾ ಮತ್ತು ವಾಣಿಜ್ಯ ಬೋಧನೆಗೆ 7 ಮಂದಿ ಉಪನ್ಯಾಸಕರಿದ್ದು, ಮೂವರನ್ನು ನಿಯೋಜನೆ ಮಾಡಲಾಗಿದೆ’ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಿರಾದಾರ.

‘ಪಟ್ಟಣದಲ್ಲಿ ಖಾಸಗಿ ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳನ್ನು ಹುಡುಕಿ ಕರೆತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ಹೇಳಿದರು.

ಈ ಮೂರು ಕಾಲೇಜುಗಳಲ್ಲಿ ‘ಡಿ’ ಗ್ರೂಪ್ ನೌಕರರ ಕೊರತೆಯಿದ್ದು, ಸರ್ಕಾರ ಕೂಡಲೇ ನೇಮಕ ಮಾಡಿದರೆ ಕಾಲೇಜಿನ ಕೆಲಸಗಳಿಗೆ ಅನುಕೂಲ ಆಗುತ್ತದೆ ಎನ್ನುತ್ತಾರೆ ಉಪನ್ಯಾಸಕರು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಉಪನ್ಯಾಸಕ ವರ್ಗ ನಿರಂತರವಾಗಿ ಶ್ರಮಿಸುತ್ತಿದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ರವೀಂದ್ರಕುಮಾರ ಬಟಗೇರಿ, ಬಸವೇಶ್ವರ ವೃತ್ತದಲ್ಲಿನ ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ
ತಾಲ್ಲೂಕಿನಲ್ಲಿ ಹಳೆಯ ಕಾಲೇಜಿನಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರತಿ ವಾರ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಶ್ರಮದಾನ ಸ್ವಚ್ಛತೆ ಕಾರ್ಯ ನಡೆಸಲಾಗುತ್ತದೆ.
ಎಚ್.ಬಿ.ಪಾಟೀಲ, ಬಸವೇಶ್ವರ ವೃತ್ತದಲ್ಲಿನ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ
ಬಾಲಕಿಯರ ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿಗೆ ಪ್ರಯೋಗಾಲಯ ಸೇರಿ ಹೆಚ್ಚುವರಿಯಾಗಿ 4 ಕೊಠಡಿ ಅಗತ್ಯವಿದೆ. ಶೌಚಾಲಯ ನಿರ್ಮಾಣ ಮಾಡಿ ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಬೇಕು.
ಶಿವಶರಣಪ್ಪ ಜೆ., ಬಾಲಕಿಯರ ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನ ಪ್ರಾಚಾರ್ಯ
ದೂರದೃಷ್ಟಿಯ ಪ್ರಾಚಾರ್ಯರೊಂದಿಗೆ ಉಪನ್ಯಾಸಕರ ಬಳಗವೂ ಗ್ರಾಮೀಣ ಭಾಗದ ಮಕ್ಕಳ ಕಲಿಕೆಗಾಗಿ ಶ್ರಮಿಸುತ್ತಿದೆ. ಕಳೆದ 20 ವರ್ಷಗಳಿಂದ ಉತ್ತಮ ಫಲಿತಾಂಶ ದಾಖಲಾಗುತ್ತಿದೆ.
ಗೋವಿಂದರಾಜ್ ಆಲ್ದಾಳ, ಬಾಲಕಿಯರ ಸರ್ಕಾರಿ ಸ್ವತಂತ್ರ ಪಿಯು ಕಾಲೇಜಿನ ಉಪನ್ಯಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT