ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗಿಣಾ ಸೇತುವೆ ಜಲಾವೃತ; ಸಂಚಾರ ಸ್ಥಗಿತ

Last Updated 5 ಸೆಪ್ಟೆಂಬರ್ 2021, 12:32 IST
ಅಕ್ಷರ ಗಾತ್ರ

ಚಿತ್ತಾಪುರ: ತಾಲ್ಲೂಕಿನ ದಂಡೋತಿ ಗ್ರಾಮದ ಹತ್ತಿರ ಕಾಗಿಣಾ ನದಿಗೆ ಕಟ್ಟಿರುವ ಸೇತುವೆಯು ಭಾನುವಾರ ನಸುಕಿನ ಜಾವಾದಿಂದ ನದಿಯಲ್ಲಿ ಉಕ್ಕಿ ಬಂದ ಭಾರಿ ಪ್ರವಾಹದಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ಈ ಮಾರ್ಗದ ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ.

ಬೆಳಗ್ಗೆಯಿಂದ ಈ ಸೇತುವೆ ಮಾರ್ಗದಿಂದ ಚಿತ್ತಾಪುರ ಪಟ್ಟಣವು ತಾಲ್ಲೂಕಿನ ವಿವಿಧ ಗ್ರಾಮಗಳು ಹಾಗೂ ಕಲಬುರ್ಗಿ, ಕಾಳಗಿ, ಸೇಡಂ ನಗರಗಳಿಂದ ಸಾರಿಗೆ ಸಂಪರ್ಕ ಕಡಿದುಕೊಂಡಿದೆ. ಧಾರಾಕಾರ ಮಳೆ ಮತ್ತು ಪ್ರವಾಹದಿಂದ ಸಾರ್ವಜನಿಕ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕಲಬುರ್ಗಿ ಜಿಲ್ಲೆಯ ಆಳಂದ, ಸೇಡಂ, ಚಿಂಚೋಳಿ, ಕಾಳಗಿ ಹಾಗೂ ಕಮಲಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಮತ್ತು ಚಿತ್ತಾಪುರ ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಧಾರಾಕಾರ ಮಳೆ ಬಂದು ಕಾಗಿಣಾ ನದಿಗೆ ಭಾನುವಾರ ಭಾರಿ ಪ್ರವಾಹ ಬಂದು ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಸೇಡಂ ತಾಲ್ಲೂಕಿನ ಕಮಲಾವತಿ ನದಿ ನೀರು ಕಾಗಿಣಾ ನದಿಗೆ ಸೇರಿ ನದಿಯು ಪ್ರವಾಹದಿಂದ ಉಕ್ಕಿ ಬಂದು ತಾಲ್ಲೂಕಿನಲ್ಲಿ ಪ್ರವೇಶ ಮಾಡಿದೆ. ಕಾಳಗಿ ತಾಲ್ಲೂಕಿನ ಬೆಣ್ಣೆತೊರಾ ಜಲಾಶಯದಿಂದ ನೀರು ಹೊರಗೆ ಬಿಟ್ಟಿದ್ದರಿಂದ ಬೆಣ್ಣೆತೊರಾ ನದಿ ಉಕ್ಕಿ ಹರಿಯುತ್ತಿದೆ.

ಕಾಳಗಿ ಪಟ್ಟಣದ ಪಕ್ಕದಿಂದ ಹರಿಯುವ ರೌದ್ರಾವತಿ ನದಿ ಪ್ರವಾಹದಿಂದ ತುಂಬಿ ಬೆಣ್ಣೆತೊರಾ ನದಿಗೆ ಸೇರಿ ಬೆಣ್ಣೆತೊರಾ ನದಿ ಬೋರ್ಗೆರೆಯುತ್ತಾ ಮಳಖೇಡ ಹತ್ತಿರ ಕಾಗಿಣಾ ನದಿಗೆ ಸೇರುತ್ತಿರುವುದರಿಂದ ಚಿತ್ತಾಪುರ ತಾಲ್ಲೂಕಿನಲ್ಲಿ ಕಾಗಿಣಾ ರೌದ್ರಾವತಾರ ತಾಳಿದೆ.
ಮುಡಬೂಳ, ಕದ್ದರಗಿ ಗ್ರಾಮದ ಹತ್ತಿರ ಕಾಗಿಣಾ ನದಿಗೆ ಕಟ್ಟಿರುವ ಬಾಂದಾರ ಸೇತುವೆ ಪ್ರವಾಹದಲ್ಲಿ ಮುಳುಗಿವೆ. ಕದ್ದರಗಿ ಹತ್ತಿರದ ಬಾಂದಾರ ಸೇತುವೆ ಮಾರ್ಗದಿಂದ ಚಿತ್ತಾಪುರ ತಾಲ್ಲೂಕಿನ ವಿವಿಧ ಗ್ರಾಮಗಳು ಶಹಾಬಾದ್ ನಗರ ಮತ್ತು ಶಹಾಬಾದ್ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಸಾರಿಗೆ ಸಂಪರ್ಕ್ ಕಡಿದುಕೊಂಡಿವೆ.

ಮುಡಬೂಳ ಗ್ರಾಮದ ಹತ್ತಿರ ನಾಗಾವಿ ಹಳ್ಳದ ಸೇತುವೆ ಮುಳುಗಡೆಯಾಗಿ ಗ್ರಾಮವು ಚಿತ್ತಾಪುರದಿಂದ ಸಂಪರ್ಕ ಕಡಿದುಕೊಂಡಿದೆ. ಕಾಗಿಣಾ ನದಿ ಪ್ರವಾಹ ಗ್ರಾಮವನ್ನು ಸುತ್ತುವರೆದಿದೆ. ಇವಣಿ ಗ್ರಾಮದ ಹತ್ತಿರದ ಹಳ್ಳದ ಸೇತುವೆ ಮುಳುಗಡೆಯಾಗಿ ಈ ಮಾರ್ಗದ ಬೆಳಗುಂಪಾ, ಪೇಠಶಿರೂರ, ಕಲಬುರ್ಗಿ ಹಾಗೂ ಭಾಗೋಡಿ, ಚಿತ್ತಾಪುರದಿಂದ ಗ್ರಾಮವು ಸಂಪರ್ಕ ಕಡಿದುಕೊಂಡಿದೆ. ಕಾಗಿಣಾ ನದಿಯಲ್ಲಿ ಬೆಳಗ್ಗೆಯಿಂದ ಸಾಯಂಕಾಲದವರೆಗೆ ಕ್ಷಣಕ್ಷಣಕ್ಕೂ ಪ್ರವಾಹ ತೀವ್ರಗತಿಯಿಂದ ಏರುತ್ತಿರುವುದು ಕಂಡು ಬಂತು.

ಪ್ರವಾಹದಿಂದ ತುಂಬಿರುವ ಕಾಗಿಣಾ ನದಿಯು ತನ್ನ ಎಲ್ಲೆಯನ್ನು ಮೀರಿ ಹೊಲಗದ್ದೆಗಳಿಗೆ ನುಗ್ಗಿ ಭೋರ್ಗರೆಯುತ್ತಾ ಹರಿಯುತ್ತಿದೆ. ನದಿ ದಂಡೆಯಲ್ಲಿರುವ ಸಾವಿರಾರು ಎಕರೆ ಪ್ರದೇಶದಲ್ಲಿನ ತೊಗರಿ ಬೆಳೆ ಆಪೋಶನ ಪಡೆದುಕೊಂಡಿದೆ. ರೈತರ ವಾಣಿಜ್ಯ ಬೆಳೆಯಾದ ತೊಗರಿ ಹಾನಿಯಿಂದ ತಾಲ್ಲೂಕಿನ ರೈತರು ಆರ್ಥಿಕ ಹಾನಿ ಅನುಭವಿಸುವಂತ್ತಾಗಿದೆ.
ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ಹತ್ತಿರದ ದೊಡ್ಡ ಹಳ್ಳದಲ್ಲಿ ಭಾರಿ ಪ್ರವಾಹ ಬಂದು ನೀರು ಗ್ರಾಮದ ವಿವಿಧ ಬಡಾವಣೆಗಳ 40 ಮನೆಗಳಿಗೆ ನುಗ್ಗಿ ಜನರು ತೀವ್ರ ಸಮಸ್ಯೆಗೆ ಗುರಿಯಾಗಿದ್ದಾರೆ. ಸಂಜೆ ಹಳ್ಳದ ಪ್ರವಾಹ ಇಳಿಮುಖ ಕಂಡು ಬಂತು.

***

ಕಾಗಿಣಾ ನದಿಯ ಪ್ರವಾಹ ಮತ್ತು ವಿವಿಧ ಹಳ್ಳಗಳ ಮತ್ತು ನಾಲೆಗಳ ಪ್ರವಾಹದ ಸ್ಥಿತಿಗತಿಯ ಮೇಲೆ ತಾಲ್ಲೂಕು ಆಡಳಿತವು ಗಮನ ಹರಿಸುತ್ತಿದೆ. ಯಾವುದೇ ಹಾನಿ ವರದಿಯಾಗಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.

–ಉಮಾಕಾಂತ ಹಳ್ಳೆ, ತಹಶೀಲ್ದಾರ್, ಚಿತ್ತಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT