ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಲೋಹದ ಹಕ್ಕಿ ಹಾರುತಿದೆ ನೋಡಿದಿರಾ

ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ
Last Updated 29 ನವೆಂಬರ್ 2021, 3:52 IST
ಅಕ್ಷರ ಗಾತ್ರ

ಕಲಬುರಗಿ: ಛಂಗನೆ ನೆಗೆದು ನೆಲದಿಂದ ನಭಕ್ಕೆ ಹಾರಿದ ವಿಮಾನ ಕಂಡ ವಿದ್ಯಾರ್ಥಿಗಳೆಲ್ಲ ಹೋಯ್‌... ಎಂದು ಕೂಗಿದರು. ಇಷ್ಟು ದಿನ ಮೋಡದ ಮರೆಯಲ್ಲಿ ಹಾರುತ್ತಿದ್ದ ವಿಮಾನವನ್ನು ಕಣ್ಣೆದುರಲ್ಲೇ ಕಂಡು ಪುಳಕಗೊಂಡರು. ಲೋಹದ ಹಕ್ಕಿಯ ಲ್ಯಾಂಡಿಂಗ್‌– ಟೇಕಾಫ್‌ನ ವಯ್ಯಾರಗಳನ್ನು ನೋಡಿ ಇನ್ನಿಲ್ಲದಂತೆ ಖುಷಿಪಟ್ಟರು.‌

ಕಲಬುರಗಿ ವಿಮಾನ ನಿಲ್ದಾಣಕ್ಕೆ ಈಚೆಗಷ್ಟೇ ಭೇಟಿ ಕೊಟ್ಟ ತಾಲ್ಲೂಕಿನ ಕಲ್ಲಹಂಗರಗಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಖುಷಿಗೆ ಪಾರವೇ ಇಲ್ಲ. ಒಂದು ದಿನದ ಶೈಕ್ಷಣಿಕ ಪ್ರವಾಸ ಕೈಗೊಂಡು, ವಿಮಾನ ನಿಲ್ದಾಣದ ಸಮಗ್ರ ಮಾಹಿತಿ ಪಡೆದ ಮಕ್ಕಳು ಹೊಸ ಹುಮ್ಮಸ್ಸಿನಿಂದ ಮರಳಿದರು. ಈ ಏರ್‌ಪೋರ್ಟಿಗೆ ಭೇಟಿ ಕೊಟ್ಟ ಮೊಟ್ಟಮೊದಲ ಶಾಲೆಯವರು ಎಂಬ ಹೆಗ್ಗಳಿಕೆಗೂ ಪಾತ್ರವಾದರು.

ಗಣಿತ ಶಿಕ್ಷಕ ಶ್ರೀನಿವಾಸ ನಾಲವಾರ, ವಿಜ್ಞಾನ ಶಿಕ್ಷಕ ರಾಘವೇಂದ್ರ ಖೋದಂಪೂರ ಸೇರಿದಂತೆ ಎಲ್ಲ ಶಿಕ್ಷಕರೂ ಮಕ್ಕಳ ಮನೋವಿಕಾಸಕ್ಕಾಗಿ ಈ ಪ್ರಯತ್ನ ಮಾಡಿ ಯಶಸ್ವಿಯಾದರು. ವಿಮಾನ ನಿಲ್ದಾಣದ ಅಧಿಕಾರಿಗಳೂ ಮಕ್ಕಳಲ್ಲಿನ ಕೌತುಕಮಯ ಪ್ರಶ್ನೆಗಳಿಗೆ ಉತ್ತರ ನೀಡಿ ಅವರ ಮೆಚ್ಚುಗೆ ಪಡೆದರು.

ವಿಮಾಣ ನಿಲ್ದಾಣದ ಸ್ವರೂ‍ಪ ಹೇಗಿದೆ, ಭದ್ರತಾ ವ್ಯವಸ್ಥೆಯ ಹಂತಗಳು ಯಾವವು, ಒಳಪ್ರವೇಶ ಮಾಡಬೇಕಾದರೆ ಮೊದಲು ಏನು ಮಾಡಬೇಕು, ಬೋರ್ಡಿಂಗ್‌ ಪಾಸ್‌ ಎಂದರೇನು, ಏರ್‌ಟ್ರಾಫಿಕ್‌ ಕಂಟ್ರೋಲ್‌ ಹೇಗೆ ಮಾಡುತ್ತಾರೆ, ನಿಲ್ದಾಣದೊಳಗೆ ಟಿಕೆಟ್‌ ವ್ಯವಸ್ಥೆ ಹಾಗೂ ಸಹಾಯ ಕೌಂಟರ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಬಗ್ಗೆ ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದರು.

ನಿಲ್ದಾಣದ ಒಳಗಿನ ಸ್ವಚ್ಛತೆ, ಸಿಬ್ಬಂದಿಯ ಸಮವಸ್ತ್ರ, ಕೆಲಸದ ಶಿಸ್ತು, ಅನೌನ್ಸ್‌ಮೆಂಟ್‌ನ ಧ್ವನಿ, ಭದ್ರತಾ ಸಿಬ್ಬಂದಿ, ತಪಾಸಣೆ ಯಂತ್ರಗಳು, ವಿಮಾನ ಹಾರುವ ಅಥವಾ ಇಳಿಯುವ ಸಂದರ್ಭದಲ್ಲಿ ಪೈಲೆಟ್‌ಗಳು ಮತ್ತು ನಿಯಂತ್ರಣ ಕೊಠಡಿ ಮಧ್ಯೆ ಏರ್ಪಡುವ ಸಂವಹನ... ಹೀಗೆ ಒಂದೊಂದು ವಿಷಯಗಳೂ ಮಕ್ಕಳಲ್ಲಿ ಉಲ್ಲಾಸ ಮೂಡಿಸಿದವು.‌

ಮಕ್ಕಳೊಂದಿಗೆ ಬಂದಿದ್ದ ಶಿಕ್ಷಣ ಇಲಾಖೆಯ ಉತ್ತರ ವಲಯದ ಅಧಿಕಾರಿಗಳು, ಶಿಕ್ಷಕರು ಕೂಡ ಈ ಅನುಭವ ಪಡೆದರು. ವಿಮಾನ ಹಾರುವ ಸಂದರ್ಭದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಶೈಕ್ಷಣಿಕ ಪ್ರವಾಸಿ ತಾಣ: ಕಲಬುರಗಿ ವಿಮಾನ ನಿಲ್ದಾಣವನ್ನು ಶೈಕ್ಷಣಿಕ ‍ಪ್ರವಾಸಿ ತಾಣವಾಗಿ ಮಾಡುವ ಉದ್ದೇಶದಿಂದ ನಿಲ್ದಾಣದ ಅಧಿಕಾರಿಗಳು ವಿಶೇಷ ಯೋಜನೆ ಹಾಕಿಕೊಂಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಶಾಲೆ, ಕಾಲೇಜು ವಿದ್ಯಾರ್ಥಿಗಳು ಒಂದು ದಿನ ಏರ್‌ಪೋರ್ಟ್‌ ಪ್ರವಾಸ ಮಾಡಲು ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಇಲ್ಲಿ ಕಲ್ಪಿಸಲಾಗಿದೆ.

ತರಬೇತಿ ಸಂಸ್ಥೆಗಳೂ ಪೂರಕ: ಈ ನಿಲ್ದಾಣದಲ್ಲಿ ವಿಮಾನ ತರಬೇತಿಯನ್ನೂ ನಡೆಸುವುದನ್ನು ಗಮನದಲ್ಲಿಟ್ಟುಕೊಂಡು ರನ್‌ವೇ ಸಿದ್ಧಪಡಿಸಲಾಗಿದೆ. ರೆಡ್‌ ಬರ್ಡ್‌ ಹಾಗೂ ಎಪಿಎಫ್‌ಟಿಎ ಸಂಸ್ಥೆಗಳು ವಿಮಾನಯಾನ ತರಬೇತಿ ನೀಡಲೂ ಸಿದ್ಧತೆ ನಡೆಸಿವೆ. ಈ ಸ್ಥಳವನ್ನು ಶೈಕ್ಷಣಿಕವಾಗಿ ಇನ್ನಷ್ಟು ಸೆಳೆಯಲು ತರಬೇತಿ ಸಂಸ್ಥೆಗಳು ಪೂರಕವಾಗಲಿವೆ.

ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಗಳ ನಂತರ ವಿವಿಧ ಕ್ಷೇತ್ರ ಆಯ್ದುಕೊಳ್ಳಲು, ವಿಮಾನದ ಪೈಲೆಟ್‌ ಆಗಲು ಏನು ಓದಬೇಕು, ಗಗನಸಖಿಯಾಲು ಯಾವ ಮಾರ್ಗ ಇದೆ, ಅದಕ್ಕೆ ಬೇಕಾದ ಪೂರ್ವಸಿದ್ಧತೆಗಳನ್ನು ಹೇಗೆ ಮಾಡಿಕೊಳ್ಳಬೇಕು, ಏರ್‌ಕ್ರ್ಯಾಶ್‌ ಅಥವಾ ತುರ್ತು ನಿರ್ಗಮನ ಅನಿವಾರ್ಯವಾದಾಗ ಏನೆಲ್ಲ ಉಪಾಯ ಮಾಡಬೇಕು ಎಂಬ ಬಗ್ಗೆಯೂ ಇಲ್ಲಿ ಮಾಹಿತಿ ಪಡೆಯಬಹುದು.

ಪೂರ್ವ ಸಿದ್ಧತೆ ಹೇಗಿರಬೇಕು?

* ಒಂದು ವಾರ ಮುಂಚಿತವಾಗಿಯೇ ವಿಮಾನ ನಿಲ್ದಾಣ ಸಂಪರ್ಕಿಸಿ ಪ‍್ರವಾಸ ಖಚಿತಪಡಿಸಬೇಕು.

* ದಿನಾಂಕ ಹಾಗೂ ಸಮಯ ಗುರುತು ಮಾಡಿಕೊಂಡು ಮುಂಚಿತವಾಗಿಯೇ ಬರಬೇಕು.

* ಪ್ರತಿಯೊಬ್ಬ ವಿದ್ಯಾರ್ಥಿಗೆ ಪಾಲಕರ ಅನುಮತಿ ಪತ್ರ, ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಕಡ್ಡಾಯ.

* ಸಂಸ್ಥೆಯ ಮುಖ್ಯಸ್ಥರು ಅಥವಾ ಸರ್ಕಾರಿ ಅಧಿಕಾರಿಗಳ ಒಪ್ಪಿಗೆ ಪತ್ರವನ್ನೂ ಪಡೆಯಬೇಕು.

* ಪ್ರವಾಸಕ್ಕೆ ಬರುವ ಎಲ್ಲ ವಿದ್ಯಾರ್ಥಿಗಳ ಮಾಹಿತಿ ಮುಂಚಿತವಾಗಿಯೇ ನಿಲ್ದಾಣಕ್ಕೆ ಸಲ್ಲಿಸಬೇಕು.

ಏರ್‌ಪೊರ್ಟ್‌ ವಿಶೇಷತೆ ಏನು?

ಏರ್‌ ಇಂಡಿಯಾದ ಅಂಗ ಸಂಸ್ಥೆಯಾದ ಅಲಯನ್ಸ್‌ ಏರ್‌ ಹಾಗೂ ಸ್ಟಾರ್‌ ಏರ್‌ನ ವಿಮಾನಗಳು ಬೆಂಗಳೂರು, ತಿರುಪತಿ ಹಾಗೂ ದೆಹಲಿ ಸೇರಿ ನಿತ್ಯ ಮೂರು ವಿಮಾನಗಳು ಹಾರಾಡುತ್ತಿವೆ. ಎರಡು ವರ್ಷಗಳಲ್ಲಿ 3179 ಬಾರಿ ಈ ವಿಮಾನಗಳು ಟೇಕಾಫ್‌ ಆಗಿವೆ. ಇಲ್ಲಿಯವರೆಗೆ 1,26,989ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿದ್ದಾರೆ. ಬೆಂಗಳೂರು, ಮಂಗಳೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಹೊರತುಪಡಿಸಿ ಅತಿ ಹೆಚ್ಚು ಪ್ರಯಾಣಿಕರು ಹಾರಿದ ನಿಲ್ದಾಣ ಎಂಬುದು ಕಲಬುರಗಿ ಏರ್‌ಪೋರ್ಟ್‌ನ ಹೆಗ್ಗಳಿಕೆ.

ತಾಲ್ಲೂಕಿನ ಶ್ರೀನಿವಾಸ ಸರಡಗಿ ಗ್ರಾಮದ ಬಳಿ 742 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣ, ರನ್‌ ವೇ, ನಿಯಂತ್ರಣ ಕೊಠಡಿಯನ್ನು ನಿರ್ಮಿಸಲಾಗಿದೆ. ರಾಜ್ಯ ಸರ್ಕಾರ ₹ 181 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಿದೆ. ರಾಜ್ಯದ ಎರಡನೇ ಅತಿದೊಡ್ಡ ರನ್‌ವೇ ಎಂಬುದೂ ಇದರ ವಿಶೇಷ.

ರಾತ್ರಿ ಲ್ಯಾಂಡಿಂಗ್‌ ಮಾಡುವ ವ್ಯವಸ್ಥೆ ಮಾತ್ರ ಬಾಕಿ ಇದ್ದು, ಮುಂದಿನ ಕೆಲವೇ ದಿನಗಳಲ್ಲಿ ಇದೂ ಸಿದ್ಧಗೊಳ್ಳಲಿದೆ.\

ವಿಮಾನದೊಳಗೆ ಹತ್ತಿ ನೋಡಬಹುದೇ?

ವಿಮಾನ ನಿಲ್ದಾಣದ ಎಲ್ಲ ಮಗ್ಗುಲಗಳನ್ನೂ ನೋಡಬಹುದು. ಅದರೆ, ವಿಮಾನದ ಒಳಗೆ ಹತ್ತಲು ಅಥವಾ ರನ್‌ವೇಗೆ ಹೋಗಲು ಸದ್ಯಕ್ಕೆ ಅವಕಾಶವಿಲ್ಲ. ಭದ್ರತೆಯ ದೃಷ್ಟಿಯಿಂದ ಇದನ್ನು ನಿರ್ಬಂಧಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಅವಕಾಶಗಳೂ ಸಿಗಬಹುದು ಎನ್ನುವುದು ಅಧಿಕಾರಿಗಳ ಮಾಹಿತಿ.

ವಿಮಾನವನ್ನು ತೀರ ಹತ್ತಿರದಿಂದ ನೋಡಲು ವೀಕ್ಷಣಾ ಸ್ಥಳ (ವೀವ್‌ ಪಾಯಿಂಟ್‌) ಮಾಡಲಾಗಿದೆ. ಅಲ್ಲಿ ನಿಂತು ಫೋಟೊ, ಸೆಲ್ಫಿ ಕೂಡ ತೆಗೆದುಕೊಳ್ಳಬಹುದು. ಲ್ಯಾಂಡಿಂಗ್‌ ಹಾಗೂ ಟೇಕಾಫ್‌ಗಳು ಈ ಸ್ಥಳದಿಂದ ತುಂಬ ಸ್ಪ‍ಷ್ಟವಾಗಿ ಕಾಣುತ್ತವೆ.

ಇಲ್ಲಿದೆ ಯುದ್ಧ ತರಬೇತಿ ವಿಮಾನ

ಕಲಬುರಗಿ ವಿಜ್ಞಾನ ಕೇಂದ್ರದ ಆವರಣದಲ್ಲಿಯೂ ‘ಕಿರಣ್‌–ಯು 809 ಫೈಟರ್’ ಹೆಸರಿನ ವಿಮಾನ ತಂದು ನಿಲ್ಲಿಸಲಾಗಿದೆ. ಇದು ಯುದ್ಧ ತರಬೇತಿ ನೀಡುವ ವಿಮಾನ. ರೋಲ್ಸ್ ರಾಯ್ಸ್ ವೈಪರ್ ಕಂಪನಿಯ ಎಂಕೆ 22–8 ಟರ್ಬೊ ಜೆಟ್ ಎಂಜಿನ್‌ ಹೊಂದಿದ್ದು, 1964ರಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಮೊದಲ ಬಾರಿ ತಯಾರಿಸಿತ್ತು.

1968ರಲ್ಲಿ ವಾಯುಪಡೆಗೆ ತರಬೇತಿಗಾಗಿ ಹಸ್ತಾಂತರಿಸಲಾಯಿತು. ಇಬ್ಬರು ಪೈಲಟ್‌ಗಳ ಆಸನವಿದೆ. ಒಟ್ಟು ತೂಕ 3,600 ಕೆ.ಜಿ. ಇಂಧನ ಸಾಮರ್ಥ್ಯ 250 ಇಂಪೀರಿಯಲ್‌ ಗ್ಯಾಲನ್ ಇದೆ. ಎಲ್ಲ ತರಬೇತಿ ವಿಮಾನಗಳಲ್ಲಿ ಇರುವಂತೆ ಹಾರಾಟ ನಿಯಂತ್ರಣ, ಇಗ್ನೀಷನ್ ನಿಯಂತ್ರಣ, ಇಂಧನ ಪೂರೈಕೆ, ಬೆಂಕಿ ನಂದಿಸುವ ಕಾರ್ಯಾಚರಣೆಗೂ ಇದನ್ನು ಬಳಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT