ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ರೈಲು ನಿಲ್ದಾಣಗಳಿಗೆ ವಿಮಾನ ನಿಲ್ದಾಣದ ಸ್ಪರ್ಶ: ಸಂಸದ ಉಮೇಶ ಜಾಧವ

ಕಲಬುರಗಿ, ವಾಡಿ, ಶಹಾಬಾದ್, ಗಾಣಗಾಪುರ ರೋಡ್ ನಿಲ್ದಾಣಗಳ ಮೇಲ್ದರ್ಜೆ ಕಾಮಗಾರಿಗೆ ಪ್ರಧಾನಿ ಚಾಲನೆ
Published 6 ಆಗಸ್ಟ್ 2023, 14:24 IST
Last Updated 6 ಆಗಸ್ಟ್ 2023, 14:24 IST
ಅಕ್ಷರ ಗಾತ್ರ

ಕಲಬುರಗಿ: ಮಹತ್ವಾಕಾಂಕ್ಷೆಯ ಅಮೃತ ಭಾರತ ನಿಲ್ದಾಣ ಯೋಜನೆಯಡಿ ಆಯ್ಕೆಯಾದ 508 ನಿಲ್ದಾಣಗಳ ಪೈಕಿ ಜಿಲ್ಲೆಯ ಕಲಬುರಗಿ, ವಾಡಿ, ಶಹಾಬಾದ್ ಮತ್ತು ಗಾಣಗಾಪುರ ರೋಡ್ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಭಾನುವಾರ ಚಾಲನೆ ನೀಡಿದರು.

ಪ್ರಧಾನಿ ಅವರು ಏಕಕಾಲಕ್ಕೆ ದೇಶದ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಚಾಲನೆ ಕೊಟ್ಟು, ವರ್ಚುವಲ್ ಭಾಷಣ ಮಾಡಿದರು. ಆ ನಂತರ ಸಂಸದ ಡಾ.ಉಮೇಶ ಜಾಧವ ಅವರು ಕಲಬುರಗಿ ನಿಲ್ದಾಣದಲ್ಲಿ ಅಡಿಗಲ್ಲು ನೆರವೇರಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಸಂಸದರು, ‘ಅಮೃತ ಭಾರತ ನಿಲ್ದಾಣ ಯೋಜನೆಯಡಿ ಆಯ್ಕೆಯಾದ ನಿಲ್ದಾಣಗಳು ಅತ್ಯಾಧುನಿಕ ಸೌಕರ್ಯಗಳನ್ನು ಪಡೆಯಲಿವೆ. ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣದ ಮಾದರಿಯ ರೈಲು ನಿಲ್ದಾಣಗಳನ್ನು ನೋಡಬಹುದಾಗಿದೆ’ ಎಂದರು.

‘ಜಿಲ್ಲೆಗೆ ರೈಲ್ವೆ, ಕೈಗಾರಿಕೆ ಸೇರಿ ಇತರೆ ಸೌಕರ್ಯ ಒದಗಿಸಲು ಕೈಗಾರಿಕಾ ಮತ್ತು ವಾಣಿಜ್ಯ ಉದ್ಯಮಿಗಳ ನಿಯೋಗವನ್ನು ದೆಹಲಿಗೆ ಕರೆದೊಯ್ದು, ಹಲವು ಸಚಿವರನ್ನು ಭೇಟಿ ಮಾಡಲಾಗಿತ್ತು. ಬಹುಬೇಡಿಕೆಯಾದ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆಯನ್ನು ಪರಿಶೀಲಿಸುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಭರವಸೆ ನೀಡಿದ್ದಾರೆ. ಕಲಬುರಗಿ–ಬೆಂಗಳೂರು ಮತ್ತು ಬೀದರ್ ವಾಯಾ ಕಲಬುರಗಿ– ಬೆಂಗಳೂರು ನಡುವೆ ನೇರ ರೈಲು ಓಡಿಸುವ ಬಗ್ಗೆಯೂ ಸಕರಾತ್ಮವಾಗಿ ಸ್ಪಂದಿಸಿದ್ದಾರೆ. ಮುಂಬೈಗೂ ಕಲಬುರಗಿಯಿಂದ ರೈಲು ಸೇವೆ ಲಭಿಸಲಿದೆ’ ಎಂದು ಹೇಳಿದರು.

‘ಮಹಾಗಾಂವ್, ಕಮಲಾಪುರ, ತಾಜ್‌ಸುಲ್ತಾನಪುರ, ನಾಲವಾರ ಸೇರಿ ಕೆಲವು ನಿಲ್ದಾಣಗಳಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಸಾಕಷ್ಟು ಮನವಿ ಬರುತ್ತಿವೆ. ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಚರ್ಚಿಸಿದ್ದು, ರೈಲ್ವೆ ಸಚಿವರ ಗಮನಕ್ಕೆ ತಂದಿದ್ದೇನೆ. ಕ್ರಮ ತೆಗೆದುಕೊಳ್ಳುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ’ ಎಂದರು.

ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ‘ಬ್ರಿಟಿಷ್ ಕಾಲದ ಕಟ್ಟಡಗಳನ್ನು ಮೇಲ್ದರ್ಜೆಗೇರಿಸುತ್ತಿರುವುದು ಒಳ್ಳೆಯ ಕಾರ್ಯ. ನಿಲ್ದಾಣಗಳು ಕೇವಲ ಪ್ರಯಾಣಿಕರಿಗೆ ಮಾತ್ರವಲ್ಲ ಎಲ್ಲ ಸಾರ್ವಜನಿಕರಿಗೂ ಅನುಕೂಲ ಆಗುವಂತೆ ನಿರ್ಮಾಣ ಮಾಡಬೇಕು. ಪ್ರಯಾಣಿಕರ ದಟ್ಟಣೆ ಇರುವುದರಿಂದ ಕಲಬುರಗಿ– ಬೆಂಗಳೂರು, ಬೀದರ್ ವಾಯಾ ಕಲಬುರಗಿ– ಬೆಂಗಳೂರು ನಡುವೆ ರೈಲು ಸೇವೆ ಕಲ್ಪಿಸಲು ಸಂಸದರು ಮುಂದಾಗಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ಪ್ರಯಾಣಿಕರ ಅನುಕೂಲಕ್ಕಾಗಿ ಈಗಿರುವ ಎಸ್ಕಲೇಟರ್‌ ಜತೆಗೆ ಮತ್ತೆರಡು ಎಸ್ಕಲೇಟರ್‌ ನಿರ್ಮಾಣ ಮಾಡಬೇಕು. ಜನರು ನೆನಪಿಟ್ಟುಕೊಳ್ಳುವಂತಹ ಕೆಲಸವಾಗಬೇಕಿದೆ’ ಎಂದರು.

ತಾರಫೈಲ್‌ನ ಸರ್ಕಾರಿ ಪ್ರೌಢಶಾಲೆ, ಶುಕ್ಲ ಶಾಲೆ, ಮಿಲೇನಿಯಂ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಅತ್ಯುತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಬಹುಮಾನ ನೀಡಲಾಯಿತು.

ಶಾಸಕ ಡಾ. ಅವಿನಾಶ ಜಾಧವ, ಮೇಯರ್ ವಿಶಾಲ ದರ್ಗಿ, ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ, ಬಿ.ಜಿ.ಪಾಟೀಲ, ಸ್ಟೇಷನ್‌ ಮಾಸ್ಟರ್‌ ಪಿ.ಎ.ನರಗುಂದಕರ್ ಇದ್ದರು.

ಕಲಬುರಗಿಯ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಅಮೃತ ಭಾರತ ನಿಲ್ದಾಣ ಯೋಜನೆಯ ಅಡಿಗಲ್ಲು ಕಾರ್ಯಕ್ರಮವನ್ನು ಸಂಸದ ಡಾ.ಉಮೇಶ ಜಾಧವ ಉದ್ಘಾಟಿಸಿದರು. ವಿಧಾನ ಪರಿಷತ್ತು ಸದಸ್ಯ ಬಿ.ಜಿ.ಪಾಟೀಲ ಮೇಯರ್ ವಿಶಾಲ ದರ್ಗಿ ವಿಧಾನ ಪರಿಷತ್ತು ಸದಸ್ಯ ಶಶೀಲ್ ನಮೋಶಿ ಇದ್ದರು –ಪ್ರಜಾವಾಣಿ ಚಿತ್ರ
ಕಲಬುರಗಿಯ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಅಮೃತ ಭಾರತ ನಿಲ್ದಾಣ ಯೋಜನೆಯ ಅಡಿಗಲ್ಲು ಕಾರ್ಯಕ್ರಮವನ್ನು ಸಂಸದ ಡಾ.ಉಮೇಶ ಜಾಧವ ಉದ್ಘಾಟಿಸಿದರು. ವಿಧಾನ ಪರಿಷತ್ತು ಸದಸ್ಯ ಬಿ.ಜಿ.ಪಾಟೀಲ ಮೇಯರ್ ವಿಶಾಲ ದರ್ಗಿ ವಿಧಾನ ಪರಿಷತ್ತು ಸದಸ್ಯ ಶಶೀಲ್ ನಮೋಶಿ ಇದ್ದರು –ಪ್ರಜಾವಾಣಿ ಚಿತ್ರ
‘ಪಶ್ಚಿಮ ಬಂಗಾಳದಂತೆ ಗೂಂಡಾಗಿರಿ ರಾಜಕೀಯ’
‘ಗ್ರಾಮ ಪಂಚಾಯಿತಿಯ ಅಮಾಯಕ ಸದಸ್ಯರಿಗೆ ಚಾಕು ಚೂರಿ ತೋರಿಸಿ ಅಧ್ಯಕ್ಷ– ಉಪಾಧ್ಯಕ್ಷ ಚುನಾವಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಪಶ್ಚಿಮ ಬಂಗಾಳದಂತೆ ಗೂಂಡಾಗಿರಿ ರಾಜಕೀಯ ನಡೆಯುತ್ತಿದೆ’ ಎಂದು ಸಂಸದ ಡಾ. ಉಮೇಶ ಜಾಧವ ಆರೋಪಿಸಿದರು. ಮಾಧ್ಯಮಗಳ ಜತೆ ಮಾತನಾಡಿದ ಅವರು ‘ಕಲಬರಗಿ ದಕ್ಷಿಣ ಚಿಂಚೋಳಿ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಅಪಹರಣ ಮಾಡಿ ಹೆದರಿಸಿ ಬೆದರಿಸಿ ಚುನಾವಣೆ ನಡೆಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇಂತಹ ಚುನಾವಣೆ ನಡೆದಿರಲಿಲ್ಲ. ಇದು ನಾಚಿಕೆಗೇಡಿನ ಕೆಲಸ. ಇದಕ್ಕೆ ಕಡಿವಾಣ ಹಾಕು ಕ್ರಮಕ್ಕೆ ಮುಂದಾಗಬೇಕು’ ಎಂದರು. ‘ಜವಳಿ ಪಾರ್ಕ್‌ಗಾಗಿ ಹೂಡಿಕೆದಾರರನ್ನು ಸೆಳೆಯಲು ಎಸ್‌ಪಿವಿ(ವಿಶೇಷ ಉದ್ದೇಶದ ವ್ಯವಸ್ಥೆ) ರಚಿಸಲಾಗುತ್ತಿದೆ. ಬಹಳಷ್ಟು ಕಾರ್ಯವಿಧಾನಗಳು ಇರುವುದರಿಂದ ಹಂತ–ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು. ರಾಜ್ಯದ ಸಹಕಾರದ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಭರವಸೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT