ಗುರುವಾರ , ಮೇ 26, 2022
22 °C

‘ಅನಿಷ್ಟ ನಿವಾರಣೆಗೆ ಕರುಣೆಯೇ ಮದ್ದು’: ಬ್ರಹ್ಮಕುಮಾರಿ ಅಭಿಯಾನಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಆಧ್ಯಾತ್ಮಿಕ ಸಶಕ್ತೀಕರಣಕ್ಕಾಗಿ ದಯೆ ಮತ್ತು ಕರುಣೆ ಎಂಬ ವಿಷಯದೊಂದಿಗೆ ಚಾಲನೆಗೊಳ್ಳುತ್ತಿರುವ ಅಭಿಯಾನ ತುಂಬ ಉಪಯುಕ್ತ. ಸಮಾಜದಲ್ಲಿ ಬೇರೂರಿರುವ ಅಂಧಶ್ರದ್ಧೆ,  ಮತೀಯ ಭಾವನೆಗಳು, ಯುದ್ಧದ ಭೀತಿಯ ಮಧ್ಯೆ ಶಾಂತಿ, ಪ್ರೀತಿ, ದಯೆ, ಕರುಣೆಯನ್ನು ಸಮಾಜದಲ್ಲಿ ಪರಸರಿಸಲು ಸಹಾಯಕಾರಿಯಾಗಲಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಹೇಳಿದರು.

ಇಲ್ಲಿಯ ಸೇಡಂ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಸಂಸ್ಥೆಯ ಅಮೃತ ಸರೋವರ ರಿಟ್ರೀಟ್ ಸೆಂಟರ್‌ನಲ್ಲಿ ಭಾನುವಾರ ನಡೆದ ದಯೆ ಮತ್ತು ಕರುಣೆಗಾಗಿ ಆಧ್ಯಾತ್ಮಿಕ ಸಶಕ್ತೀಕರಣ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೂಟೂಬ್‌ನಲ್ಲಿ ಯೋಗ ಎಂದು ಹುಡುಕಿದರೆ ಅನೇಕ ವಿದೇಶಿಯರು ಯೋಗ ಕಲಿಸುತ್ತಿರುವುದನ್ನು ಕಾಣುತ್ತೇವೆ. ಭಾರತ ಮೂಲದ ಯೋಗ ವಿದೇಶಿಯರು ಕಲಿತು ಕಲಿಸುತ್ತಿರುವುದು ಸೋಜಿಗ ಅಲ್ಲವೆ ಎಂದು ಪ್ರಶ್ನಿಸಿದರು.

‘ನಾನು ಜಬಲ್‌ಪುರದಲ್ಲಿದ್ದಾಗ ಬಹಳಷ್ಟು ಬಾರಿ, ಕಲಬುರಗಿಯಲ್ಲಿರುವಾಗ ಕಾರ್ಯದೊತ್ತಡದಿಂದ ಮನಸ್ಸನ್ನು ಸ್ವಲ್ಪ ಹಗುರಗೊಳಿಸಲು ಬ್ರಹ್ಮಕುಮಾರಿ ಸಂಸ್ಥೆಗೆ ಬಂದು ಕೆಲ ನಿಮಿಷ ಧ್ಯಾನ ಮಾಡಿದ್ದೀನಿ. ಯಾವುದೇ ಅಪೇಕ್ಷೆ ಇಲ್ಲದೇ ಈ ಸಹೋದರಿಯರು ಸೇವೆ ಮಾಡುವುದು ಕರ್ಮಯೋಗಿಯ ಒಂದು ಉದಾಹರಣೆ‘ ಎಂದು ಅವರು ಬಣ್ಣಿಸಿದರು.

ಅಭಿಯಾನಕ್ಕೆ ಸಿದ್ಧಪಡಿಸಿರುವ ಎಲ್‌ಇಡಿ ಸ್ಕ್ರೀನ್‌, ಸೌಂಡ್‌ ಸಿಸ್ಟಂ ಹಾಗೂ ಜನರೇಟರ್‌ ಸೌಲಭ್ಯ ಹೊಂದಿರುವ ವಾಹನಕ್ಕೆ ಅವರು ಚಾಲನೆ ನೀಡಿದರು.

ಬ್ರಹ್ಮಕುಮಾರಿ ಸಂಸ್ಥೆಯ ಮೈಸೂರು ಉಪವಲಯದ ಮುಖ್ಯಸ್ಥರಾದ ರಾಜಯೋಗಿನಿ ಲಕ್ಷ್ಮಿ ಅಕ್ಕ ಮಾತನಾಡಿ, ಕರ್ನಾಟಕ ಸೇರಿ ಇಡೀ ಭಾರತ ಹಾಗೂ ವಿಶ್ವದಲ್ಲಿ ನಡೆಯುತ್ತಿರುವ ಹಿಂಸಾಚಾರ, ಭ್ರಷ್ಟಾಚಾರ, ಕೊಲೆ ಇತ್ಯಾದಿಗಳನ್ನು ಕಂಡರೆ ದಯೆ, ಕರುಣೆ, ಬಂಧುತ್ವ ಕಾಣೆಯಾಗಿದೆ ಅನಿಸುತ್ತಿದೆ. ಅದನ್ನು ಮತ್ತೆ ಪ್ರತಿಷ್ಠಾಪಿಸಲು ಆಧ್ಯಾತ್ಮಿಕ ಸಶಕ್ತೀಕರಣದ ಆವಶ್ಯಕತೆ ಇದೆ. ಅದಕ್ಕೆ ತಾವೆಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು.

ಶಾಸಕ ಬಸವರಾಜ ಮತ್ತಿಮೂಡ, ರೋಟರಿ ಸಂಸ್ಥೆಯ ಮೋಹಿನಿ ಜಿಡಗೇಕರ, ಪ್ರೊ. ಶಿವರಾಜ ಪಾಟೀಲ ವೆದಿಕೆಯಲ್ಲಿದ್ದರು. ಸಂಸ್ಥೆಯ ಕಲಬುರಗಿ ಉಪ ವಲಯದ ಮುಖ್ಯಸ್ಥರಾದ ರಾಜಯೋಗಿನಿ ವಿಜಯಾದೀದಿ ಪ್ರಸ್ತಾವಿಕವಾಗಿ ಮಾತನಾಡಿದರು. ರಾಜಯೋಗಿ ಪ್ರೇಮಣ್ಣ ಅಧ್ಯಕ್ಷತೆ ವಹಿಸಿದ್ದರು. ಬಿಕೆ  ಶಿವಲೀಲಾ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು