ಸೋಮವಾರ, ಮೇ 16, 2022
29 °C
ವಿಧಾನಸಭೆ ವಿರೋಧಪಕ್ಷದ ಮುಖ್ಯಸಚೇತಕ ಅಜಯ್‌ಸಿಂಗ್ ಆಗ್ರಹ

ಕಚೇರಿ ವೇಳೆ ಬದಲಾವಣೆ ಮಾಡಿ: ಮುಖ್ಯಸಚೇತಕ ಅಜಯ್‌ಸಿಂಗ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಬಿಸಿಲು ಹೆಚ್ಚುತ್ತಿದ್ದರೂ ಕಲ್ಯಾಣ ಕರ್ನಾಟಕ ಮತ್ತು ಬೆಳಗಾವಿ ಕಂದಾಯ ವಿಭಾಗದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ  ಕಚೇರಿ ವೇಳೆಯನ್ನು ಬದಲಾವಣೆ ಮಾಡದೆ ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ವಿಧಾನಸಭೆ ವಿರೋಧಪಕ್ಷದ ಮುಖ್ಯಸಚೇತಕ, ಶಾಸಕ ಡಾ.ಅಜಯ್‌ಸಿಂಗ್ ದೂರಿದ್ದಾರೆ.

40 ವರ್ಷಗಳಿಂದ ಪ್ರತಿ ಬೇಸಿಗೆಯಲ್ಲೂ ಕಚೇರಿ ವೇಳೆ ಬದಲಾವಣೆ ಮಾಡಲಾಗುತ್ತಿತ್ತು. ಈ ಬಾರಿಯೂ ನೌಕರರ ಸಂಘವು ಕಚೇರಿ ವೇಳೆ ಬದಲಾವಣೆ ಮಾಡುವಂತೆ ಕೋರಿತ್ತು. ಆದರೆ, ದೆಹಲಿಯಲ್ಲಿ ಇಲ್ಲಿಗಿಂತ ಹೆಚ್ಚು ಬಿಸಿಲು ಇರುತ್ತದೆ. ಆದರೂ ಅಲ್ಲಿ ಕಚೇರಿ ವೇಳೆ ಬದಲಾವಣೆ ಮಾಡುವುದಿಲ್ಲ. ಇಲ್ಲಿಯೂ ಬದಲಾವಣೆ ಮಾಡಲು ಆಗದು ಎಂದು ಹೇಳಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ‌‌ಅದನ್ನು ತಿರಸ್ಕರಿಸಿದೆ ಎಂದು ಹೇಳಿದ್ದಾರೆ.

ದಿ.ದೇವರಾಜ ಅರಸು ನೇತೃತ್ವದ ಸರ್ಕಾರದ ಕಾಲದಿಂದಲೂ ಬಿಸಿಲ ಬೇಗೆಯಿಂದ ನೌಕರರು ಹಾಗೂ ಜನರಿಗೆ ರಕ್ಷಣೆ ನೀಡಲು, ಬಿಸಿಲಿಂದ ಆಗಬಹುದಾದ ತೊಂದರೆಗಳಿಂದ ರಕ್ಷಿಸಲು ಕಚೇರಿ ವೇಳೆಯಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗುತ್ತಿದೆ. ಆದರೆ ಈಗ ಏನೂ ಯೋಚಿಸದೆ ಅವೈಜ್ಞಾನಿಕ ನಿರ್ಣಯ ಕೈಗೊಂಡಿರುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ.

ಮೇಲ್ನೋಟಕ್ಕೆ ಇದು ಕಲಬುರಗಿ ವಿಭಾಗವನ್ನು ಕೇಂದ್ರೀಕರಿಸಿ ಕೈಗೊಂಡ ನಿರ್ಣಯವಾಗಿದೆ. ಇದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡ ಇದೆ. ಮುಖ್ಯಮಂತ್ರಿ ಅವರು ಮಧ್ಯಪ್ರವೇಶಿಸಿ ತಕ್ಷಣ ಬಿಸಿಲಿನಿಂದ ನೌಕರರಿಗೆ, ಜನರಿಗೆ ರಕ್ಷಣೆ ಒದಗಿಸಲು ಕಚೇರಿ ವೇಳೆಯನ್ನು ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 1.30ರ ವರೆಗೆ ಬದಲಾವಣೆ ಮಾಡಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈಗಾಗಲೇ ರಣ ಬಿಸಿಲಿಂದ ಜನರು ಬಸವಳಿದಿದ್ದಾರೆ. ಬಿಸಿಲ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಬೆಳಿಗ್ಗೆ 7 ಗಂಟೆಗೆ ಶುರುವಾಗುವ ಬಿಸಿಲ ಪ್ರಖರತೆ ಸಂಜೆ 6 ಗಂಟೆಯವರೆಗೂ ಇರುತ್ತದೆ. ಕಚೇರಿ ವೇಳೆ ಬದಲಾವಣೆ ಮಾಡುವುದರಿಂದ ನೌಕರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು