ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಫೆ.26ರಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

Published 23 ಫೆಬ್ರುವರಿ 2024, 14:14 IST
Last Updated 23 ಫೆಬ್ರುವರಿ 2024, 14:14 IST
ಅಕ್ಷರ ಗಾತ್ರ

ಕಲಬುರಗಿ: ‘‌ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಫೆ.26 ಹಾಗೂ 27ರಂದು 20ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದರು.

‘ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಟಿ.ಎಂ. ಭಾಸ್ಕರ್ ಅಧ್ಯಕ್ಷತೆಯಲ್ಲಿ ಎರಡು ದಿನಗಳ ಕಾಲ ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

26ರಂದು ಬೆ.8.15ಕ್ಕೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಧ್ವಜಾರೋಹಣ ನೆರವೇರಿಸಲಿದ್ದಾರೆ. 9.15ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕಲಾ ತಂಡಗಳೊಂದಿಗೆ ನಡೆಯುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮೇಯರ್ ವಿಶಾಲ ದರ್ಗಿ ಚಾಲನೆ ನೀಡಲಿದ್ದಾರೆ.

ಬಂಡಾಯ ಸಾಹಿತಿ ಚೆನ್ನಣ್ಣ ವಾಲೀಕಾರ ವೇದಿಕೆಯಡಿ ಹಿರಿಯ ಸಾಹಿತಿ ರಾಜಪ್ಪ ದಳವಾಯಿ ಅವರು ಬೆ.11.15ಕ್ಕೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಣಿ ಎಸ್.ಅಪ್ಪಾ ನೇತೃತ್ವ ವಸಿಕೊಳ್ಳಲಿದ್ದಾರೆ. ಸಾಹಿತಿ ಧರ್ಮಣ್ಣ ಎಚ್. ಧನ್ನಿ ಸಂಪಾದಕತ್ವದ `ಸಂಕಥನ’ ಕೃತಿಯನ್ನು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ ಸಿಂಗ್ ಬಿಡುಗಡೆ ಮಾಡಲಿದ್ದಾರೆ. ಟಿ.ಎಂ. ಭಾಸ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ, ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 1.05ರಿಂದ ಕನ್ನಡ ಸಾಹಿತ್ಯ, ಸಂಸ್ಕೃತಿ, ವಿವಿಧ ಸಾಹಿತ್ಯ ಪ್ರಕಾರ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಗೋಷ್ಠಿಗಳು ನಡೆಯಲಿವೆ. ಸಂಜೆ 4.05ಕ್ಕೆ ಹಿರಿಯ ಸಾಹಿತಿ ಶಿವರಾಜಶಾಸ್ತ್ರೀ ಹೇರೂರ ಅಧ್ಯಕ್ಷತೆಯಲ್ಲಿ ನಡೆಯುವ ಹಿರಿಯರ ಕವಿಗೋಷ್ಠಿಯಲ್ಲಿ 35ಕ್ಕೂ ಹೆಚ್ಚು ಹಿರಿಯ ಕವಿಗಳು ಕವನ ವಾಚಿಸಲಿದ್ದಾರೆ.

27‌ರಂದು ಬೆಳಿಗ್ಗೆ 10.30ಕ್ಕೆ ಸಮ್ಮೇಳನಾಧ್ಯಕ್ಷರ ಬದುಕು–ಬರಹ ಹಾಗೂ ಮಾತು–ಮಂಥನ ಗೋಷ್ಠಿಯಲ್ಲಿ ಧಾರವಾಡದ ವಿ.ಜಿ. ಪೂಜಾರ ಮಾತನಾಡಲಿದ್ದಾರೆ. ಬೆ.11.30ರಿಂದ ಕೃಷಿ, ಆರೋಗ್ಯ, ಪರಿಸರ, ಪ್ರಾದೇಶಿಕತೆ ಅಸ್ಮಿತೆ, ಸ್ವಾವಲಂಬಿ ಜೀವನ, ಮಾಧ್ಯಮ ಮತ್ತು ಪ್ರಜಾಪ್ರಭುತ್ವ ಕುರಿತ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿಚಾರ ಮಂಡಿಸಲಿದ್ದಾರೆ. ಮಧ್ಯಾಹ್ನ 1.45ಕ್ಕೆ ಹಿರಿಯ ಸಾಹಿತಿ ವಾಸುದೇವ ಸೇಡಂ ಅಧ್ಯಕ್ಷತೆಯಲ್ಲಿ ಯುವ ಕವಿಗೋಷ್ಠಿ ನಡೆಯಲಿದ್ದು, ಅನೇಕ ಕವಿಗಳು ಕವನ ವಾಚಿಸಲಿದ್ದಾರೆ.

ಸಂಜೆ 4.45ಕ್ಕೆ ಸಮಾರೋಪ ಹಾಗೂ ಸತ್ಕಾರ ಸಮಾರಂಭ ನಡೆಯಲಿದ್ದು, ಉಸ್ಮಾನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಲಿಂಗಣ್ಣ ಗೋನಾಲ ಮಾತನಾಡುತ್ತಾರೆ. ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಿ.ಎಂ.ಪಾಟೀಲ ಕಲ್ಲೂರ ಸೇರಿದಂತೆ ಜಿಲ್ಲೆಯ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಗುವುದು ಎಂದು ವಿಜಯಕುಮಾರ ಮಾಹಿತಿ ನೀಡಿದರು. 

ಶಿವರಾಜ ಎಸ್. ಅಂಡಗಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ವಿನೋದಕುಮಾರ ಜೇನವೇರಿ, ಸೋಮಶೇಖರಯ್ಯ ಹೊಸಮಠ, ಬಸಯ್ಯ ಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಆಡಂಬರ ಇಲ್ಲದೆ ಅರ್ಥಪೂರ್ಣವಾಗಿ ಸಮ್ಮೇಳನ ನಡೆಯಲಿದೆ. ಕೇಂದ್ರ ಸಮಿತಿಯ ಹಣವನ್ನೇ ಖರ್ಚು ಮಾಡುತ್ತಿದ್ದೇವೆ. ಸರ್ಕಾರದಿಂದ ಹಣ ಬಂದಿಲ್ಲ. ಕೆಲ ಕಾರ್ಯಕ್ರಮಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ಇದೆ‌.
ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷ ಕಸಾಪ ಜಿಲ್ಲಾ ಘಟಕ
ಛಾಯಾಚಿತ್ರ ಪ್ರದರ್ಶನ ಹಾಸ್ಯ ಕಾರ್ಯಕ್ರಮ
ನವ ಕಲ್ಯಾಣ ಕರ್ನಾಟಕ ವಿಡಿಯೊ ಮತ್ತು ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಐತಿಹಾಸಿಕ ಸ್ಥಳಗಳ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಹಿರಿಯ ಕಲಾವಿದರ ಜತೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವಿವಿಧ ಮಹಾದ್ವಾರಗಳಿಗೆ ಹಿರಿಯ ಸಾಹಿತಿಗಳಾದ ಶಿವಶರಣ ಪಾಟೀಲ ಜಾವಳಿ ಪ್ರೊ.ವಸಂತ ಕುಷ್ಠಗಿ ಎಲ್.ಬಿ.ಕೆ. ಆಲ್ದಾಳ ಅವರ ಹೆಸರಿಡಲಾಗುತ್ತಿದೆ. ಲೇಖಕರಾದ ಸಿ.ಎಸ್. ಆನಂದ ಬಸವರಾಜ ಸಿ. ಬಸವರಾಜ ಎಸ್. ಕಲೇಗಾರ ಡಿ.ಗಿರೇಗೌಡ ಅರಳಿಹಳ್ಳಿ ಅವರು ಬರೆದ ಪುಸ್ತಕಗಳನ್ನು ಗಣ್ಯರು ಬಿಡುಗಡೆ ಮಾಡಲಿದ್ದಾರೆ. ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ ಶಂಭುಲಿಂಗ ಬುಳ್ಳಾ ಶರಣು ದೇಸಾಯಿ ಹೇಮಂತ್ ಮಾಲಗತ್ತಿ ರಾಜು ಹೆಬ್ಬಾಳ ಅವರಿಂದ ಹಾಸ್ಯ ಕಾರ್ಯಕ್ರಮಗಳು ಜರುಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT