ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ನರೇಗಾ ಅನುಷ್ಠಾನದಲ್ಲಿ ಅವ್ಯವಹಾರ: ₹ 2.68 ಕೋಟಿ ವಸೂಲಿಗೆ ಶಿಫಾರಸು

Published 11 ಜುಲೈ 2024, 3:21 IST
Last Updated 11 ಜುಲೈ 2024, 3:21 IST
ಅಕ್ಷರ ಗಾತ್ರ

ಕಲಬುರಗಿ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ನರೇಗಾ) ಅನುಷ್ಠಾನದಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ನಡೆದ ಅವ್ಯವಹಾರ ಸಂಬಂಧ ಭಾಗಿಯಾದ ಪಂಚಾಯಿತಿಗಳ ಪಿಡಿಒಗಳು ಮತ್ತು ಅಧ್ಯಕ್ಷರಿಂದ ಅಷ್ಟೂ ನಷ್ಟವನ್ನು ವಸೂಲಿ ಮಾಡುವಂತೆ ಒಂಬುಡ್ಸ್‌ಮನ್ ಆದೇಶ ನೀಡಿ ದಶಕ ಕಳೆದರೂ ಆ ಹಣ ವಸೂಲಾಗಿಲ್ಲ.

ಪದದತ್ತವಾದ ಅಧಿಕಾರ ಚಲಾಯಿಸುವ ನರೇಗಾದ ಜಿಲ್ಲಾ ಒಂಬುಡ್ಸ್‌ಮನ್, ನರೇಗಾ ಸಂಬಂಧಿತ ದೂರು ಸ್ವೀಕರಿಸಿ, ಅವುಗಳ ಪರಾಮರ್ಶೆ ಮಾಡಿ ತನಿಖೆ ನಡೆಸುತ್ತಾರೆ. ಅವ್ಯವಹಾರ ಸಾಬೀತಾದಲ್ಲಿ ನಷ್ಟದ ಹಣವನ್ನು ಸಂಬಂಧಿಸಿದವರಿಂದಲೇ ವಸೂಲಾತಿ ಮಾಡುವಂತೆ ಜಿಲ್ಲಾ ಪಂಚಾಯಿತಿಗೆ ಆದೇಶ/ ಶಿಫಾರಸು ಮಾಡುತ್ತಾರೆ.

2010ರಿಂದ 2023ರ ಸೆಪ್ಟೆಂಬರ್‌ವರೆಗೆ ಜಿಲ್ಲೆಯ 11 ತಾಲ್ಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳ ನರೇಗಾ ಅವ್ಯವಹಾರಕ್ಕೆ ಸಂಬಂಧಿಸಿದ 110ಕ್ಕೂ ಹೆಚ್ಚು ದೂರುಗಳು ಸ್ವೀಕೃತವಾಗಿವೆ. ಅವುಗಳ ಪೈಕಿ 91 ಪ್ರಕರಣಗಳಲ್ಲಿ ₹ 2.68 ಕೋಟಿ ಮೊತ್ತವನ್ನು ಭಾಗಿದಾರರಾದ ಪಿಡಿಒಗಳು, ಅಧ್ಯಕ್ಷರು, ಇತರರಿಂದ ವಸೂಲಿ ಮಾಡುವಂತೆ ಒಂಬುಡ್ಸ್‌ಮನ್ ಶಿಫಾರಸು ಮಾಡಿದ್ದಾರೆ. ಈ ಮೊತ್ತದ ಪೈಕಿ ₹93.82 ಲಕ್ಷ ಖಜಾನೆ ಸೇರಿದ್ದು, ₹1.74 ಕೋಟಿಯಷ್ಟು ವಸೂಲಾಗದೆ ಉಳಿದಿದೆ.

ಜಿಲ್ಲಾ ಒಂಬುಡ್ಸ್‌ಮನ್ ಹೊರಡಿಸಿದ್ದ ಆದೇಶವನ್ನು ಪಾಲಿಸುವ ಸಂದರ್ಭದಲ್ಲಿ ಆರೋಪಿಗಳು ಹಾಗೂ ದೂರುದಾರರು ಕರ್ನಾಟಕ ಒಂಬುಡ್ಸ್‌ಮನ್ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಕೆಲವು ಪ್ರಕರಣಗಳಲ್ಲಿ ತಡೆಯಾಜ್ಞೆ ದೊರೆತಿದೆ. ಇನ್ನು ಕೆಲವು ಪ್ರಕರಣಗಳನ್ನು ಸಮಾಪ್ತಿಗೊಳಿಸಲಾಗಿದೆ. ಮೇಲ್ಮನವಿ ಮತ್ತು ಖುಲಾಸೆ ಅರ್ಜಿಗಳ ಮಾಹಿತಿ ಲಭ್ಯವಿಲ್ಲ ಎಂದು ನರೇಗಾ ಕೇಸ್‌ ವರ್ಕರ್ ತಿಳಿಸಿದ್ದಾರೆ.

‘ನನ್ನ ಅವಧಿಯ (2022ರ ಡಿಸೆಂಬರ್‌ನಿಂದ) ಇಲ್ಲಿಯವರೆಗೆ 58 ದೂರುಗಳು ಬಂದಿವೆ. ಲಿಖಿತ ದೂರುಗಳನ್ನು ಆಧರಿಸಿ ಪಿಡಿಒ, ಲೆಕ್ಕಾಧಿಕಾರಿಗಳಿಂದ ಅಗತ್ಯ ದಾಖಲಾತಿಗಳನ್ನು ತರಿಸಿಕೊಂಡು ಪರಿಶೀಲನೆ ಮಾಡಲಾಗುತ್ತದೆ. ಅಗತ್ಯಬಿದ್ದಲ್ಲಿ ಸ್ಥಳಕ್ಕೂ ತೆರಳುತ್ತೇವೆ. ಆರೋಪ ಸಾಬೀತು ಆದಲ್ಲಿ ಜಿಲ್ಲಾ ಪಂಚಾಯಿತಿಗೆ ಅವ್ಯವಹಾರದ ಹಣದ ವಸೂಲಾತಿಗೆ ಶಿಫಾರಸು ಮಾಡುತ್ತೇವೆ. ಆರೋಪಿಗಳು ಮತ್ತು ದೂರುದಾರರು 30 ದಿನಗಳ ಒಳಗಾಗಿ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು’ ಎಂದು ಜಿಲ್ಲಾ ಒಂಬುಡ್ಸ್‌ಮನ್ ರವೀಂದ್ರ ಚಂದ್ರಶೇಖರ್‌ ಗುಂಡಪ್ಪಗೋಳ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ದೂರು ಕೊಟ್ಟ ಕೆಲವರು ಏಕಾಏಕಿ ತಪ್ಪು ಮಾಹಿತಿಯಿಂದಾಗಿ ದೂರು ಕೊಟ್ಟಿದ್ದಾಗಿ ತಪ್ಪೊಪ್ಪಿಕೊಂಡು ಅರ್ಜಿಗಳನ್ನು ಹಿಂಪಡೆದ ನಿದರ್ಶನಗಳಿವೆ. ಆದರೂ ನಾವು ಪಟ್ಟು ಹಿಡಿದು ಪರಿಶೀಲನೆ ನಡೆಸಿ ಅವ್ಯವಹಾರ ಬಹಿರಂಗಪಡಿಸಿದ್ದೇವೆ.
ರವೀಂದ್ರ ಚಂದ್ರಶೇಖರ್‌ ಗುಂಡಪ್ಪಗೋಳ್‌ ನರೇಗಾ ಜಿಲ್ಲಾ ಒಂಬುಡ್ಸ್‌ಮನ್

ಒಂದೇ ಪಂಚಾಯಿತಿಯಲ್ಲಿ ₹ 49.21 ಲಕ್ಷ ಅವ್ಯವಹಾರ!

ಅಫಜಲಪುರ ತಾಲ್ಲೂಕಿನ ಕರಜಗಿ ಗ್ರಾಮ ಪಂಚಾಯಿತಿ ಒಂದರಲ್ಲೇ ₹ 49.21 ಲಕ್ಷ ಅವ್ಯವಹಾರ ನಡೆದಿತ್ತು. ದೂರು ಆಧಾರಿಸಿ ತನಿಖೆ ನಡೆಸಿದ ಒಂಬುಡ್ಸ್‌ಮನ್ ಅಷ್ಟೂ ಹಣವನ್ನು ಸರ್ಕಾರದ ಖಜಾನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. 2019–20 ಮತ್ತು 2021–22ನೇ ಸಾಲಿನ ವರ್ಷಗಳಲ್ಲಿ ತಲಾ ₹2460875 (ಒಟ್ಟು ₹ 49.21 ಲಕ್ಷ) ಅವ್ಯವಹಾರ ನಡೆದಿತ್ತು. ಅಂದಿನ (2019–20) ಎಜೆಇ ಪಿಆರ್‌ಎಇ ಆಗಿದ್ದ ಅನಂತ ಮಧುಸೂದನ ₹20.91 ಲಕ್ಷ ಹಾಗೂ ಪಿಡಿಒ ಆಗಿದ್ದ ಪ್ರಮೋದ್ ಗುಂಡಾಚಾರ್ಯ ಮೊಗರೆ ಅವರಿಂದ ₹24.60 ಲಕ್ಷ (ಅಧ್ಯಕ್ಷೆಯಾಗಿದ್ದ ಪಾರ್ವತಿ ಸಿದ್ದಣ್ಣ ಸೇರಿ) ವಸೂಲಿಗೆ ಸೂಚಿಸಲಾಗಿತ್ತು. ಅಷ್ಟೂ ಹಣವನ್ನು ಹಿಂಪಡೆಯಲಾಗಿದೆ. 2021–22ನೇ ಸಾಲಿನಲ್ಲಿಯೂ ಪ್ರಮೋದ್ ಅನಂತ ಹಾಗೂ ಪಾರ್ವತಿ ಅವರಿಂದ ತಲಾ ₹8.20 ಲಕ್ಷದಂತೆ ಒಟ್ಟು ₹20.40 ಲಕ್ಷ ವಸೂಲಿ ಮಾಡಲಾಗಿತ್ತು ಎಂಬುದು ನರೇಗಾ ಕೇಸ್‌ ವರ್ಕರ್ ನೀಡಿದ ದಾಖಲೆಗಳಿಂದ ತಿಳಿದುಬಂದಿದೆ. ಕರಜಗಿ ಪಂಚಾಯಿತಿಯಂತೆ ಹತ್ತಾರು ಪಂಚಾಯಿತಿಗಳಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದದ್ದು ಬಹಿರಂಗವಾಗಿದೆ.

ಯಡ್ರಾಮಿ ಜೇವರ್ಗಿಯದ್ದೇ ಸಿಂಹಪಾಲು

ಅಕ್ರಮ ನಡೆಸಿರುವುದರಲ್ಲಿ ಜಿಲ್ಲೆಯ 11 ತಾಲ್ಲೂಕುಗಳ ಪೈಕಿ ಯಡ್ರಾಮಿ ಮತ್ತು ಜೇವರ್ಗಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳದ್ದೇ ಸಿಂಹಪಾಲಿದೆ. ಯಡ್ರಾಮಿ ತಾಲ್ಲೂಕಿನ ಸುಂಬಡ ಗ್ರಾ.ಪಂ.ನ ಒಂದು ಪ್ರಕರಣದಲ್ಲಿ ₹29.31 ಲಕ್ಷ ಮತ್ತೊಂದರಲ್ಲಿ ₹ 12.88 ಲಕ್ಷ ಅಕ್ರಮ ನಡೆದಿತ್ತು. ₹ 11.51 ಲಕ್ಷ ಕಾಚಪುರ ₹4.61 ಲಕ್ಷ ಯಲಗೋಡ್ ಗ್ರಾ.‍ಪಂ ಸೇರಿ ಒಟ್ಟು 9 ಪ್ರಕರಣಗಳಿಂದ ₹61.74  ಲಕ್ಷ ವಸೂಲಿಗೆ ಒಂಬುಡ್ಸ್‌ಮನ್ ಶಿಫಾರಸು ಮಾಡಿದ್ದಾರೆ. ಅದರಲ್ಲಿ ಕೇವಲ ₹2.32 ಲಕ್ಷ ವಸೂಲಿಯಾಗಿದ್ದು ₹ 59.41 ಲಕ್ಷ ಬಾಕಿ ಉಳಿದಿದೆ. ಜೇವರ್ಗಿಯ ಯಾಳವಾರ ಗ್ರಾಂ.ಪಂ.ನಲ್ಲಿ ₹26.93 ಲಕ್ಷ ಕೆಲ್ಲೂರ್‌ನಲ್ಲಿ ₹10.69 ಲಕ್ಷ ನೇದಲಗಿಯಲ್ಲಿ ₹ 4.12 ಲಕ್ಷ ಅವ್ಯವಹಾರ ನಡೆದಿತ್ತು. ತಾಲ್ಲೂಕಿನ ಒಟ್ಟು 15 ಪ್ರಕರಣಗಳಲ್ಲಿ ₹ 67.84  ಲಕ್ಷ ಮೊತ್ತ ವಸೂಲಿಗೆ ಶಿಫಾರಸು ಆಗಿದ್ದು ₹12.53 ಲಕ್ಷ ವಸೂಲಾಗಿದೆ. ₹ 55.31 ಲಕ್ಷ ಬಾಕಿ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT