ಶುಕ್ರವಾರ, ಆಗಸ್ಟ್ 7, 2020
22 °C

ವಿಶೇಷ ಚೇತನ ಮಕ್ಕಳ ಪಾಲಕರಿಗೆ ಆಹಾರ್ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಅಜೀಂ ಪ್ರೇಮಜೀ ಫೌಂಡೇಶನ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ದಕ್ಷಿಣ ವಲಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿಶೇಷ ಚೇತನ ಮಕ್ಕಳ ಪಾಲಕರಿಗೆ ಶುಕ್ರವಾರ ಆಹಾರದ ಕಿಟ್‌ ವಿತರಿಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ನಲಿನ್‌ ಅತುಲ್ ಹಾಗೂ ಅಜೀಂ ಪ್ರೇಮಜೀ ಪೌಂಡೇಶನ್ ಸಂಯೋಜಕ ರುದ್ರೇಶ್ ಅವರು 42 ವಿಶೇಷ ಚೇತನ ಮಕ್ಕಳಿಗಾಗಿ ಕಿಟ್‍ಗಳನ್ನು ವಿತರಿಸಿದರು.

ಈ ಕಿಟ್‍ನಲ್ಲಿ 25 ಕೆ.ಜಿ. ಅಕ್ಕಿ, 5 ಕೆಜಿ ಗೋಧಿ ಹಿಟ್ಟು, 1 ಕೆಜಿ ಸಕ್ಕರೆ, 2 ಕೆಜಿ ತೊಗರಿಬೇಳೆ, 1 ಕೆಜಿ ಉಪ್ಪು, 2 ಸಾಬೂನ್, 1 ಕೊಬ್ಬರಿ ಎಣ್ಣೆ ಪ್ಯಾಕೇಟ್, 2 ಬಟ್ಟೆ ಸಾಬೂನು, 2 ಎಂ.ಟಿ.ಆರ್. ಮಸಾಲಾ ಪ್ಯಾಕೇಟ್, 100 ಗ್ರಾಂ. ಚಹಾಪುಡಿ, 2 ಅಡುಗೆ ಎಣ್ಣೆ ಪ್ಯಾಕೇಟ್, ಮಾಸ್ಕ್, ಸ್ಯಾನಿಟೈಜರ್‍ ಇವೆ.

ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಳ್ಳಿ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ರಾಠೋಡ, ಸಂಪನ್ಮೂಲ ಕೇಂದ್ರದ ಬಿ.ಆರ್.ಪಿ, ಸಿ.ಆರ್.ಪಿ.ಗಳು ಇದ್ದರು.

ಅರ್ಜಿ ಆಹ್ವಾನ

ಕಲಬುರ್ಗಿ: ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ‘ಆತ್ಮ ನಿರ್ಭರ್ ನಿಧಿ’ಯ ವಿಶೇಷ ಕಿರುಸಾಲ ಸೌಲಭ್ಯ ಯೋಜನೆಯಡಿ ಸಾಲ ಪಡೆಯಲು ಬೀದಿ ವ್ಯಾಪಾರಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಯಡಿ ಬೀದಿ ವ್ಯಾಪಾರಸ್ಥರಿಗೆ ಬ್ಯಾಂಕ್ ಮೂಲಕ ₹ 10 ಸಾವಿರ ಸಾಲ ನೀಡಲಾಗುತ್ತದೆ. ಪಡೆದ ಸಾಲವನ್ನು ಒಂದು ವರ್ಷದಲ್ಲಿ ಮರುಪಾವತಿ ಮಾಡಬೇಕು. ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಸ್ಥರು ದಕ್ಷಿಣದ ವಾರ್ಡ್ ನಂ.32 ಮತ್ತು 33 ರಿಂದ 55ರ ವರೆಗಿನ ಫಲಾನುಭವಿಗಳಾಗಿರಬೇಕು.

ಅರ್ಜಿ ನಮೂನೆಯನ್ನು ಮಹಾನಗರ ಪಾಲಿಕೆಯಲ್ಲಿ ಪಡೆದು ಭರ್ತಿ ಮಾಡಿ ಅರ್ಜಿಯೊಂದಿಗೆ ಬಿ.ಪಿ.ಎಲ್. ಪಡಿತರ ಚೀಟಿ, ಆಧಾರ ಕಾರ್ಡ್, ಚುನಾವಣೆ ಗುರುತಿನ ಚೀಟಿ, ಬೀದಿ ವ್ಯಾಪಾರದ ಗುರುತಿನ ಚೀಟಿ, ಬ್ಯಾಂಕ್ ಪಾಸ್ ಬುಕ್ ಪುಸ್ತಕ, ಜಾತಿ ಆದಾಯ ಪ್ರಮಾಣ ಪತ್ರ ನೀಡಬೇಕು. ಜುಲೈ 15 ಕೊನೆಯ ದಿನ.

ಹೆಣ್ಣು ಮಗುವಿನ ಪೋಷಕರ ಪತ್ತೆಗೆ ಮನವಿ

ಕಲಬುರ್ಗಿ: ಆಳಂದ ತಾಲ್ಲೂಕಿನ ಗೋಳಾ(ಬಿ) ಗ್ರಾಮದ ಲಕ್ಕಮ್ಮ ದೇವಸ್ಥಾನದ ಹತ್ತಿರದಲ್ಲಿ ಮೇ 30ರಂದು ಪತ್ತೆಯಾದ ಸುಮಾರು ಒಂದು ದಿವಸದ ಹೆಣ್ಣು ಮಗುವಿನ ಪಾಲಕರ ಪತ್ತೆಗೆ ಮನವಿ ಮಾಡಲಾಗಿದೆ.

ಕಲಬುರ್ಗಿಯ ಡಾನ್‍ಬಾಸ್ಕೋ  ಚೈಲ್ಡ್ ಲೈನ್ ಸಂಸ್ಥೆಯ ಸಿಬ್ಬಂದಿಯು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಿದ್ದಾರೆ. ಬಿಳಿ ಬಣ್ಣ ಹೊಂದಿರುವ ಈ ಹೆಣ್ಣು ಮಗುವಿನ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ. ಮಗುವಿನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ 30 ದಿನದೊಳಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳೊಂದಿಗೆ ‘ಅಧೀಕ್ಷಕರು, ಅಮೂಲ್ಯ ಶಿಶುಗೃಹ, ಆಳಂದ ರಸ್ತೆ, ಕಲಬುರ್ಗಿ’ ಈ ಕಚೇರಿಗೆ ಭೇಟಿ ನೀಡಬೇಕು.

ತಪ್ಪಿದಲ್ಲಿ ಕಾನೂನು ಪ್ರಕಾರ ಈ ಹೆಣ್ಣು ಮಗುವಿನ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಮೂಲ್ಯ ಶಿಶುಗೃಹದ ಅಧೀಕ್ಷಕರನ್ನು 08472-265588, 8139950601ಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು