ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ನ.6ರಂದು 62 ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆ

Last Updated 2 ನವೆಂಬರ್ 2022, 16:00 IST
ಅಕ್ಷರ ಗಾತ್ರ

ಕಲಬುರಗಿ: ‘ನಗರದ 62 ಕೇಂದ್ರಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯು(ಟಿಇಟಿ) ನವೆಂಬರ್‌ 6ರಂದು ನಡೆಯಲಿದೆ. ಪರೀಕ್ಷೆಯಲ್ಲಿ ನಕಲು ಮಾಡುವುದು ಕಂಡು ಬಂದಲ್ಲಿ ಸ್ಥಳದಲ್ಲೇ ಅಂತಹ ಅಭ್ಯರ್ಥಿಗಳನ್ನು ಡಿಬಾರ್ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಟಿಇಟಿ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಈಚೆಗೆ ಜಿಲ್ಲಾಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿದ್ದು, ‘ನಕಲು ಮಾಡುವಲ್ಲಿ ಶಿಕ್ಷಕರು, ಇತರೆ ಸಿಬ್ಬಂದಿ ಸಹಕಾರ ನೀಡಿದ್ದಲ್ಲಿ ಮುಲಾಜಿಲ್ಲದೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

6ರಂದು ನಗರದ 46 ಕೇಂದ್ರಗಳಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12ರ ವರೆಗೆ ಮೊದಲ ಹಂತದ ಪ್ರಶ್ನೆಪತ್ರಿಕೆಯ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ಎರಡನೇ ಹಂತದ ಪ್ರಶ್ನೆಪತ್ರಿಕೆಯ ಪರೀಕ್ಷೆಯು62 ಕೇಂದ್ರಗಳಲ್ಲಿ ಜರುಗಲಿದ್ದು, ಒಟ್ಟಾರೆ 16,984 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಪಾರದರ್ಶಕ ಮತ್ತು ಸುಸೂತ್ರವಾಗಿ ಪರೀಕ್ಷೆ ನಡೆಸಲು 62 ಕೇಂದ್ರಗಳಿಗೆ ತಲಾ ಒಬ್ಬರು ಅಧೀಕ್ಷಕರು, ಸ್ಥಾನಿಕ ಜಾಗೃತದಳ ನೇಮಿಸಲಾಗಿದೆ. ಪ್ರಶ್ನೆಪತ್ರಿಕೆ ಸಾಗಿಸಲು 18 ಮಂದಿ ರೂಟ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಮೂಲಸೌಕರ್ಯಗಳಿರುವ ಕುರಿತು ಕೇಂದ್ರದ ಮುಖ್ಯಸ್ಥರು ಖಚಿತಪಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸಿಸಿ ಟಿವಿ ಕಣ್ಗಾವಲು, ಮೊಬೈಲ್ ನಿಷೇಧ

ಸಿಸಿ ಟಿವಿ ಕಣ್ಗಾವಲಿನಲ್ಲಿಟಿಇಟಿ ಪರೀಕ್ಷೆ ನಡೆಯಲಿದ್ದು, ಪ್ರಶ್ನೆಪತ್ರಿಕೆಗಳ ಬಂಡಲ್‌ ತೆರೆಯುವುದರಿಂದ ಹಿಡಿದು ಮುಕ್ತಾಯದ ನಂತರದ ಪ್ಯಾಕ್ ಮಾಡುವವರೆಗೆ ಸಂಪೂರ್ಣ ವಿಡಿಯೊ ಮಾಡಲಾಗುತ್ತದೆ ಎಂದು ಯಶವಂತ ವಿ. ಗುರುಕರ್ ಹೇಳಿದ್ದಾರೆ.

ಪರೀಕ್ಷಾ ಕೊಠಡಿಗೆ ಮೊಬೈಲ್, ಪುಸ್ತಕ ಹಾಳೆ, ಲಾಗ್ ಟೇಬಲ್, ಕ್ಯಾಲ್ಕುಲೇಟರ್, ಎಲೆಕ್ಟ್ರಾನಿಕ್ ಉಪಕರಣದಂತಹ ಸಾಧನಗಳನ್ನು ನಿಷೇಧಿಸಲಾಗಿದೆ. ಆದರೆ, ಜಾಮಿಟ್ರಿ ಪರಿಕರಗಳಿಗೆ ಮಾತ್ರ ಅವಕಾಶ ನೀಡಲಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ಶಿಕ್ಷಣ ಇಲಾಖೆಯ ಇತರೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT