ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ಮುಗಿಯಿತೇ? ಮೊದಲೆಲ್ಲ ಗುಡುಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈಗ ಸುಮ್ಮನಾಗಿದ್ದು ಏಕೆ ಎಂದು ಲೇಖಕ, ಆಮ್ ಆದ್ಮಿ ಪಕ್ಷದ ಮುಖಂಡ ಶಿವರಾಜ ಪಾಟೀಲ ಕುಲಾಲಿ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಪ್ರಿಯಾಂಕ್ ಖರ್ಗೆ ಅವರು ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ತಿಳಿಸಿದ್ದರು. ತನಿಖಾ ಸಮಿತಿಯನ್ನೂ ರಚಿಸಲಾಗಿತ್ತು. ಇದುವರೆಗೆ ಅದರ ಬಗ್ಗೆ ಏನಾಯಿತೆಂಬುದು ನಮಗೆ ಅರ್ಥವಾಗುತ್ತಿಲ್ಲ. ಇದು ರಾಜಕೀಯ ಹೊಂದಾಣಿಕೆಯೋ ಅಥವಾ ಮೇಲುನೋಟದ ಆರೋಪವೋ ಗೊತ್ತಾಗುತ್ತಿಲ್ಲ. ಸಚಿವರು ಈ ವಿಷಯವಾಗಿ ಮತ್ತೊಮ್ಮೆ ದನಿಯೆತ್ತಿ ಮಂಡಳಿಯಲ್ಲಿ ನಡೆದ ಅವ್ಯವಹಾರ ಕುರಿತು ಮತ್ತೊಮ್ಮೆ ಪ್ರಸ್ತಾಪಿಸಬೇಕು. ಸಂಘದ ಮೇಲೆ ಮಾಡಿದ ಆರೋಪಗಳು ಸತ್ಯವೇ ಆಗಿದ್ದಲ್ಲಿ ಮತ್ತೊಮ್ಮೆ ಧ್ವನಿ ಎತ್ತಲಿ. ಇಲ್ಲದಿದ್ದರೆ ಪ್ರಿಯಾಂಕ್ ಅವರು ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ ಮತ್ತು ಹುಸಿ ಬಾಂಬ್ ಹಾಕುತ್ತಾರೆ ಎಂಬ ಆರೋಪಕ್ಕೆ ಒಳಗಾಗಬೇಕಾಗುತ್ತದೆ. ಆರೋಪ ಸಾಬೀತುಪಡಿಸುವ ದಿಸೆಯಲ್ಲಿ ಅವರು ಸಂಪೂರ್ಣ ಪ್ರಯತ್ನಿಸಲಿ’ ಎಂದು ಆಗ್ರಹಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.