ಕಲಬುರ್ಗಿ: ಇಲ್ಲಿನ ಕಲಬುರ್ಗಿ ಮಹಾನಗರ ಪಾಲಿಕೆಯ 55 ವಾರ್ಡ್‌ಗಳಿಗೆ ಇದೇ 3ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ 533 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸೂಕ್ತ ಸಿದ್ಧತೆ ಮಾಡಿಕೊಂಡಿದೆ.
ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು, ಸಹಾಯಕ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಗುರುವಾರ ಸಂಜೆಯೇ ಮತಗಟ್ಟೆಗಳನ್ನು ತಲುಪಿದರು. ನಗರದ ಎನ್.ವಿ. ಶಾಲೆಯ ಮೈದಾನದಲ್ಲಿ ಮಸ್ಟರಿಂಗ್ ಕಾರ್ಯ ನೆರವೇರಿತು. ಚುನಾವಣಾ ಆಯೋಗ ಸಿಬ್ಬಂದಿಯನ್ನು ಕರೆದೊಯ್ಯಲು ವಾಹನ, ವ್ಯವಸ್ಥೆ, ಊಟ, ಉಪಾಹಾರ, ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿತ್ತು.
ಚುನಾವಣಾ ಆಯೋಗವು ಪಾಲಿಕೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಲಾಗುತ್ತಿದ್ದು, ಇದಕ್ಕಾಗಿ 1066 ಇವಿಎಂ, ಜೊತೆಗೆ ಹೆಚ್ಚುವರಿಯಾಗಿ 213 ಇವಿಎಂಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಚುನಾವಾಣಾ ಕಾರ್ಯಕ್ಕಾಗಿ ಶೇ 20ರಷ್ಟು ಹೆಚ್ಚುವರಿ ಸೇರಿದಂತೆ 645 ಮತಗಟ್ಟೆ ಅಧಿಕಾರಿಗಳು, ಅಷ್ಟೇ ಸಂಖ್ಯೆಯ ಸಹಾಯಕ ಮತಗಟ್ಟೆ ಅಧಿಕಾರಿಗಳು, 1280 ಇತರೆ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 2570 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರತಿ ವಾರ್ಡ್‌ಗಳಲ್ಲಿ ಸರಾಸರಿ 10 ಸಾವಿರ ಮತದಾರರಿದ್ದು, ಗೆದ್ದೇ ಗೆಲ್ಲುವ ಹಂಬಲದಿಂದ ಅಭ್ಯರ್ಥಿಗಳು 15 ದಿನಗಳಿಂದ ಕಸರತ್ತು ಆರಂಭಿಸಿದ್ದು, ಗುರುವಾರ ಬೆಳಿಗ್ಗೆಯಿಂದ ತಡರಾತ್ರಿಯವರೆಗೂ ಪ್ರಮುಖರ ಮನೆಗಳಿಗೆ ಭೇಟಿ ನೀಡಿದರು.
ವಿವಿಧ ಅಭ್ಯರ್ಥಿಗಳು ಮತದಾರರಿಗೆ ಆಮಿಷ ಒಡ್ಡುವ ಸಾಧ್ಯತೆ ಇರುವುದರಿಂದ ಪೊಲೀಸರು ವಿವಿಧ ಬಡಾವಣೆಗಳಲ್ಲಿ ಗಸ್ತನ್ನು ಹೆಚ್ಚಿಸಿದ್ದಾರೆ.
ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ನೇತೃತ್ವದಲ್ಲಿ ಬುಧವಾರ ಹಾಗೂ ಗುರುವಾರ ರಾತ್ರಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಗಸ್ತು ನಡೆಸಿ ರಾತ್ರಿ ವೇಳೆ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ವಿವಿಧ ಪಕ್ಷಗಳ ಮುಖಂಡರು ಮತಗಟ್ಟೆಯ ಬಳಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಕೂರಿಸಿದ್ದು, ಮತದಾರರಿಗೆ ನೆರವಾಗಲು ಸ್ಥಳದಲ್ಲೇ ಲ್ಯಾಪ್‌ಟಾಪ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮತದಾರರು ಯಾವ ಮತಗಟ್ಟೆಯಲ್ಲಿ ಮತ ಚಲಾಯಿಸಬೇಕು ಎಂಬುದರ ಕುರಿತು ನೆರವು ನೀಡಲಿದ್ದಾರೆ. ಚುನಾವಣಾ ಆಯೋಗವೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮಗೆ ಬೇಕಿರುವ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮನವಿ ಮಾಡಿದೆ.
**
150 ಸೂಕ್ಷ್ಮ, 55 ಅತಿ ಸೂಕ್ಷ್ಮ ಮತಗಟ್ಟೆಗಳು
533 ಮತಗಟ್ಟೆಗಳ ಪೈಕಿ ಭದ್ರತಾ ದೃಷ್ಟಿಯಿಂದ 150 ಸೂಕ್ಷ್ಮ ಹಾಗೂ 55 ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ವಿಂಗಡಿಸಲಾಗಿದೆ. 328 ಸಾಮಾನ್ಯ ಮತಗಟ್ಟೆಗಳಾಗಿವೆ. ಅತಿ ಸೂಕ್ಷ್ಮ ಮತಗಟ್ಟೆಗಳ ಬಳಿ ತಲಾ ಒಬ್ಬರು ಹೆಡ್ ಕಾನ್‌ಸ್ಟೆಬಲ್, ಒಬ್ಬರು ಕಾನ್‌ಸ್ಟೆಬಲ್, ಸೂಕ್ಷ್ಮ ಮತಗಟ್ಟೆಗಳ ಬಳಿ ತಲಾ ಒಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಡಾ. ವೈ.ಎಸ್. ರವಿಕುಮಾರ್ ತಿಳಿಸಿದ್ದಾರೆ.
ಒಟ್ಟಾರೆ 1,118 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿದೆ.
ಇಬ್ಬರು ಡಿಸಿಪಿಗಳು, ಆರು ಜನ ಎಸಿಪಿ, ಎಎಸ್‌ಪಿಗಳು, 17 ಜನ ಪೊಲೀಸ್ ಇನ್‌ಸ್ಪೆಕ್ಟರ್‌ಗಳು, 16 ಪಿಎಸ್‌ಐಗಳು, 74 ಜನ ಹೆಡ್ ಕಾನ್‌ಸ್ಟೆಬಲ್‌ಗಳು, ಮಹಿಳಾ ಹೆಡ್ ಕಾನ್‌ಸ್ಟೆಬಲ್‌ಗಳು, 494 ಪೊಲೀಸ್ ಕಾನ್‌ಸ್ಟೆಬಲ್‌ಗಳು, 482 ಜನ ಗೃಹ ರಕ್ಷಕ ದಳದ ಸಿಬ್ಬಂದಿ, 4 ಕೆಎಸ್‌ಆರ್‌ಪಿ ತುಕಡಿಗಳು, ಆರು ನಗರ ಸಶಸ್ತ್ರ ಪಡೆಯ ತುಕಡಿಗಳು, 30 ಸಂಚಾರಿ ದಳಗಳನ್ನು ನಿಯೋಜಿಸಲಾಗಿದೆ.
***
ಎನ್.ವಿ. ಮೈದಾನದಲ್ಲಿ ಗೊಂದಲ
ಮಸ್ಟರಿಂಗ್ ಪ್ರಕ್ರಿಯೆ ನಡೆದ ಕಲಬುರ್ಗಿಯ ಎನ್.ವಿ. ಶಾಲೆಯ ಮೈದಾನದಲ್ಲಿ ಮಧ್ಯಾಹ್ನದ ಬಳಿಕ ಗೊಂದಲವುಂಟಾಯಿತು. ಮಸ್ಟರಿಂಗ್ ಪ್ರಕ್ರಿಯೆಯನ್ನು ವೀಕ್ಷಿಸಲು ತೆರಳಿದ್ದ ಜಿಲ್ಲಾ ಚುನಾವಣಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಕೆಲ ಹೊತ್ತಿನಲ್ಲೇ ಅಲ್ಲಿಂದ ವಾಪಸಾದರು.
ಸಂಜೆಯವರೆಗೂ ಮತಗಟ್ಟೆ ಅಧಿಕಾರಿಗಳಿಗೆ ಅವರು ಹಾಜರಾಗಬೇಕಾದ ಮತಗಟ್ಟೆಯ ಬಗ್ಗೆ ಮಾಹಿತಿ ನೀಡಿರಲಿಲ್ಲ. ತಾಜಸುಲ್ತಾನಪುರ ಮತಗಟ್ಟೆಯೊಂದರ ಮತಗಟ್ಟೆ ಅಧಿಕಾರಿಯನ್ನು ಹೊರತುಪಡಿಸಿ ಉಳಿದ ಮೂವರು ಸಿಬ್ಬಂದಿ ಅಲ್ಲಿಗೆ ಬಂದಿರಲೇ ಇಲ್ಲ!
‘ಚುನಾವಣೆ ಕೆಲಸಕ್ಕೆ ನೇಮಿಸಲಾದ ಒಬ್ಬರಿಗೆ ಬೇರೆ ಕಡೆ ವರ್ಗಾವಣೆಯಾಗಿದೆ. ಉಳಿದ ಇಬ್ಬರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಬೇರೆಯವರನ್ನು ಕೊಡುತ್ತೀರಾ ಎಂದು ಕೇಳಿದರೂ ಸ್ಪಂದನೆ ಸಿಕ್ಕಿಲ್ಲ’ ಎಂದರು.
ಕೌಂಟರ್ ಬಳಿ ನೂರಾರು ಜನ ಸೇರಿದ್ದರಿಂದ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ಸ್ಟೇಶನ್ ಬಜಾರ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ದರಾಮೇಶ ಗಡೇದ ಚುನಾವಣಾ ಸಿಬ್ಬಂದಿಯನ್ನು ಬೇರೆ ಕಡೆ ಕಳಿಸುವಲ್ಲಿ ನಿರತರಾಗಿದ್ದರು.
ಚಿತ್ತಾಪುರ ತಾಲ್ಲೂಕು ಶೆಳ್ಳಗಿ ಗ್ರಾಮದಲ್ಲಿ ಶಿಕ್ಷಕರಾಗಿರುವ ಸುಧಾಕರ ಅವರು ಕೈಗೆ ಬ್ಯಾಂಡೇಜ್ ಹಾಕಿಕೊಂಡೇ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿದ್ದರು. ‘ಹುಷಾರಾಗಿಲ್ಲದೇ ಇರುವುದರಿಂದ ವಿನಾಯಿತಿ ಕೊಡಿ ಎಂದು ಕೇಳಿದರೂ ಕೊಟ್ಟಿಲ್ಲ. ಅನಿವಾರ್ಯವಾಗಿ ಬಂದಿದ್ದೇನೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಪ್ರತಿನಿಧಿಗೆ ತಿಳಿಸಿದರು.
ಇನ್ಫೊ ಗ್ರಾಫಿಕ್ಸ್‌ಗೆ
2570
ಚುನಾವಣಾ ಸಿಬ್ಬಂದಿ ನೇಮಕ
1118
ಭದ್ರತೆಗೆ ನಿಯೋಜನೆಗೊಂಡ ಪೊಲೀಸ್ ಸಿಬ್ಬಂದಿ
55
ಚುನಾವಣೆ ನಡೆಯಲಿರುವ ವಾರ್ಡ್‌ಗಳು
530
ಒಟ್ಟು ಮತಗಟ್ಟೆಗಳು
1066
ಬಳಕೆಯಾಗುವ ಒಟ್ಟು ಇವಿಎಂ
5,19,464
ಒಟ್ಟು ಮತದಾರರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.