ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ಸಸ್ಯಕಾಶಿ ಒಡಲು ತುಂಬಿದ ಹಸಿರು

ಚಿಂಚೋಳಿ: ವನ್ಯಜೀವಿ ಧಾಮಕ್ಕೆ ಹೊಸ ಕಳೆ
Published 16 ಜೂನ್ 2024, 7:17 IST
Last Updated 16 ಜೂನ್ 2024, 7:17 IST
ಅಕ್ಷರ ಗಾತ್ರ

ಚಿಂಚೋಳಿ: ಬೆಟ್ಟ ಗುಡ್ಡ ಹಾಗೂ ಹಸಿರು ಕಾನನದಿಂದ ಬಯಲು ಸೀಮೆಯ ಮಿನಿ ಮಲೆನಾಡು ಎಂಬ ಖ್ಯಾತಿಯ ಚಿಂಚೋಳಿಯ ವನ್ಯಜೀವಿ ಧಾಮ ಮುಂಗಾರು ಮಳೆಗೆ ಮೈದುಂಬಿಕೊಂಡಿದೆ.

ಎಲೆ ಉದುರುವ ಕಾಡುಗಳಲ್ಲಿ ಗುರುತಿಸಲ್ಪಡುವ ಚಿಂಚೋಳಿಯ ವನ್ಯಜೀವಿ ಧಾಮದ ಕಾಡು ಹಸಿರ ಸಿರಿಯಿಂದ ಮಿನುಗುತ್ತಿದೆ.

ವರ್ಷದಲ್ಲಿ ಎರಡ್ಮೂರು ತಿಂಗಳು ಮಾತ್ರ ಬರಡಾಗಿ ಗೋಚರಿಸುವ ಈ ಕಾಡು, ಚೈತ್ರ ಮಾಸದಿಂದ ಋತುಮಾನಕ್ಕೆ ಅನುಗುಣವಾಗಿ ಚಿಗುರೊಡೆದು ನಳನಳಿಸುತ್ತದೆ.

ತೆಲಂಗಾಣ ಗಡಿಗೆ ಹೊಂದಿಕೊಂಡ ವನ್ಯಜೀವಿ ಧಾಮದಲ್ಲಿ ಹಲವು ವಿಶಿಷ್ಟ ಜೀವಿಗಳು ಆಸರೆ ಪಡೆದಿದ್ದಲ್ಲದೇ, ಅವಸಾನದ ಅಂಚಿನಲ್ಲಿರುವ ವಿವಿಧ ಅಪರೂಪದ ಸಸ್ಯಗಳಿಂದ ಜೀವ ವೈವಿಧ್ಯತೆಯ ತಾಣವಾಗಿ ಗಮನ ಸೆಳೆದಿದೆ.

ದಕ್ಷಿಣ ಭಾರತದ ಏಕೈಕ ಶುಷ್ಕ ವಲಯದ ವನ್ಯಜೀವಿ ಧಾಮವಾಗಿರುವ ಈ ಸಸ್ಯಕಾಶಿ ಪರಿಸರ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. 13,488 ಹೆಕ್ಟೇರ್ ವಿಶಾಲವಾದ ವನ್ಯಜೀವಿ ಧಾಮದಲ್ಲಿ ಚಿರತೆ, ನೀಲಗಾಯ, ಹೈನಾ, ಕಾಡುಕೋಣ, ತೋಳ, ಚೌಸಿಂಗಾ, ಚುಕ್ಕೆ ಜಿಂಕೆ, ಕಾಡು ಕುರಿ, ನರಿ, ಕಾಡು ಹಂದಿ, ಮುಳ್ಳು ಹಂದಿ, ಚಿಪ್ಪು ಹಂದಿ, ಮೊಲ ಮೊದಲಾದ ಪ್ರಾಣಿಗಳಿವೆ.

ದಿಂಡಿಲು, ತೇಗ, ರಕ್ತಚಂದನ, ಹಿಪ್ಪೆ, ಠಾಣೆ, ನೆಲ್ಲಿ, ಸ್ವಾಮಿ, ಬಸವನಪಾದ, ಹೊಂಗೆ, ಬೇವು, ಶಮಿ, ಕರಿ ಮತ್ತಿ, ಆಲ, ಅರಳೆ ಮೊದಲಾದ ಗಿಡಮರಗಳು ಕಾಡನ್ನು ಸಮೃದ್ಧಗೊಳಿಸಿವೆ.

ತೆಲಂಗಾಣದ ಹೈದರಾಬಾದ್‌ ಸೇರಿದಂತೆ ವಿವಿಧ ಜಿಲ್ಲೆ ಮತ್ತು ನಗರ ಹಾಗೂ ರಾಜ್ಯದ ಕಲಬುರಗಿ, ಬೀದರ್ ಜಿಲ್ಲೆಯ ಹಸಿರು ಪ್ರಿಯರು, ವಿದ್ಯಾರ್ಥಿಗಳು ಬಂದು ಕಾಡಿನ ಸೊಬಗು ಕಣ್ತುಂಬಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನಲ್ಲಿ ಮೃಗಶಿರಾ ಮಳೆ ನಿರೀಕ್ಷೆಯಂತೆ ಉತ್ತಮವಾಗಿ ಸುರಿದಿದೆ. ಇನ್ನಷ್ಟು ಮಳೆ ಸುರಿದರೆ ಜುಲೈ ತಿಂಗಳಿನಿಂದ ಜಲಪಾತಗಳು ಪುನರ್ ಜನ್ಮ ಪಡೆದು ಪ್ರವಾಸಿಗರಿಗೆ ಮುದ ನೀಡಲಿವೆ.

ಮಾಣಿಕಪುರ ಮತ್ತು ಎತ್ತಿಪೋತೆ ಜಲಪಾತಗಳು, ಚಂದ್ರಂಪಳ್ಳಿ ಜಲಾಶಯ, ಗೊಟ್ಟಮಗೊಟ್ಟ, ಲಾಲಾ ತಾಲಾಬ್, ನವಿಲು ಗುಡ್ಡ, ಮಹಿಶಮ್ಮನ ಬೆಟ್ಟ, ಪ್ರಕೃತಿಧಾಮ, ಚಿಕ್ಕಲಿಂಗದಳ್ಳಿ ಕೆರೆ, ಬೈರಂಪಳ್ಳಿ ಬೃಹತ್ ಆಲದ ಮರ, ಸಾಲೇಬೀರನಹಳ್ಳಿ ಕೆರೆ ಪ್ರಮುಖ ಹಸಿರು ತಾಣಗಳಾಗಿವೆ. 

ಚಿಂಚೋಳಿಯ ವನ್ಯಜೀವಿ ಧಾಮದ ಚಂದ್ರಂಪಳ್ಳಿ ಕಾಡಿನಲ್ಲಿ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ನೀಲಗಾಯ
ಚಿಂಚೋಳಿಯ ವನ್ಯಜೀವಿ ಧಾಮದ ಚಂದ್ರಂಪಳ್ಳಿ ಕಾಡಿನಲ್ಲಿ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಕ್ಯಾಮೆರಾದಲ್ಲಿ ಸೆರೆ ಹಿಡಿದ ನೀಲಗಾಯ
ಭಾಗಪ್ಪಗೌಡ ವಲಯ ಅರಣ್ಯಾಧಿಕಾರಿ ವನ್ಯಜೀವಿ ಧಾಮ ಚಿಂಚೋಳಿ
ಭಾಗಪ್ಪಗೌಡ ವಲಯ ಅರಣ್ಯಾಧಿಕಾರಿ ವನ್ಯಜೀವಿ ಧಾಮ ಚಿಂಚೋಳಿ
ದೀಪಕನಾಗ್ ಪುಣ್ಯಶೆಟ್ಟಿ ಮಾಜಿ ಅಧ್ಯಕ್ಷರು ಜಿ.ಪಂ.ಕಲಬುರಗಿ
ದೀಪಕನಾಗ್ ಪುಣ್ಯಶೆಟ್ಟಿ ಮಾಜಿ ಅಧ್ಯಕ್ಷರು ಜಿ.ಪಂ.ಕಲಬುರಗಿ

ಅಪರೂಪದ ಜೀವ ವೈವಿಧ್ಯ ತಾಣ ಪರಿಸರ ಪ್ರವಾಸ ಅಭಿವೃದ್ಧಿಗೆ ವಿಪುಲ ಅವಕಾಶ ಕಾಡು ಸುತ್ತುವರಿಗೆ ಚಾರಣದ ಹಿತಾನುಭವ

ಪ್ರಸಕ್ತ ವರ್ಷ ಸುರಿದ ಮಳೆಯಿಂದ ವನ್ಯಜೀವಿ ಧಾಮದ ಕಾಡು ಹಚ್ಚ ಹಸಿರ ಸಿರಿಯಿಂದ ಕಂಗೊಳಿಸುತ್ತಿದೆ. ಇನ್ನಷ್ಟು ಮಳೆಯಾದರೆ ಹುಲ್ಲು ಬೆಳೆದರೆ ನೆಲವೂ ಹಸಿರಾಗಿ ಪ್ರವಾಸಿಗರನ್ನು ಸೆಳೆಯಲಿದೆ

-ಭಾಗಪ್ಪಗೌಡ ವಲಯ ಅರಣ್ಯಾಧಿಕಾರಿ

ಚಿಂಚೋಳಿ ವನ್ಯಜೀವಿ ಧಾಮವು ಅಪರೂಪದ ಸಸ್ಯ ಹಾಗೂ ಜೀವಿಗಳನ್ನು ಪೋಷಿಸಿಕೊಂಡು ಬರುತ್ತಿದ್ದು ಅರಣ್ಯ ಇಲಾಖೆ ಪ್ರಯತ್ನದಿಂದ ಕಾಡು ಮತ್ತಷ್ಟು ಸಮೃದ್ಧವಾಗಿದೆ

-ದೀಪಕನಾಗ್ ಪುಣ್ಯಶೆಟ್ಟಿ ಜಿ.ಪಂ. ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT