ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಡ್ರಾಮಿ | ಸರ್ಕಾರಿ ಶಾಲೆಗಿಲ್ಲ ಮೂಲಸೌಲಭ್ಯ

Published 3 ಜುಲೈ 2024, 6:00 IST
Last Updated 3 ಜುಲೈ 2024, 6:00 IST
ಅಕ್ಷರ ಗಾತ್ರ

ಯಡ್ರಾಮಿ: ತಾಲ್ಲೂಕಿನ ಮಾಣಶಿವಣಗಿ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಗೊಂಡಿವೆ. ಕೊಳವೆಬಾವಿ ದುರಸ್ತಿಗೆ ಬಂದಿದೆ. ಕುಡಿಯಲು ನೀರಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಲಕ್ಷ್ಯ ವಹಿಸುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುವಂತಾಗಿದೆ.

ಸದ್ಯ ಶಾಲೆಯಲ್ಲಿ 6 ಕಾಯಂ ಹಾಗೂ ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಜತೆಗೆ 200 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಕರು ನೀರು ಸೇರಿದಂತೆ ಇತರೆ ಸೌಲಭ್ಯಗಳಿಲ್ಲದೇ ತೊಂದರೆ ಅನುಭವಿಸುವಂತಾಗಿದೆ.

ತಾಲ್ಲೂಕು ಕ್ರೀಡಾಕೂಟ ಇದ್ದಾಗ ಮುಖ್ಯ ಶಿಕ್ಷಕರು, ಸ್ವಂತ ಹಣ ಹಾಕಿ, ಕೊಳವೆ ಬಾವಿ ದುರಸ್ತಿಗೊಳಿಸಿದ್ದರು. ಅದು ಈವರೆಗೆ ಸಾಗಿತು. ಈಗ ಅದು ಮತ್ತೆ ದುರಸ್ತಿಗೆ ಬಂದಿದ್ದು, ಈಗ ಕೊಳವೆ ಬಾವಿಯಲ್ಲಿ ನೀರು ಕೂಡ ಸಿಗುತ್ತಿಲ್ಲ. ದುರಸ್ತಿ ಮಾಡಿಸಿದಾಗ ಅಲ್ಪ-ಸ್ವಲ್ಪ ನೀರು ಬಿದ್ದರೂ ಅದು ಕೊಳವೆ ಬಾವಿಯ ಒಳಗಿನ ಕಬ್ಬಿಣದ ತುಕ್ಕು ಬರುತ್ತಿದೆ. ಕೊಳವೆ ಬಾವಿಗೆ ಹಾಕಿದ ಪೈಪ್‍ಗಳು ಸಂಪೂರ್ಣ ತುಕ್ಕು ಹಿಡಿದಿವೆ ಎಂಬುದು ಗ್ರಾಮಸ್ಥ ಆರೋಪವಾಗಿದೆ.

ಈಚೆಗಷ್ಟೇ ದುರಸ್ತಿ ಮಾಡಿದ್ದ ಕೊಳವೆ ಬಾವಿ ಮತ್ತೆ ದುರಸ್ತಿಗೆ ಬಂದಿದೆ. ಈ ಬಾರಿ ಎರಡ್ಮೂರು ತಿಂಗಳು ಕಳೆದರೂ ಕೊಳವೆಬಾವಿ ದುರಸ್ತಿ ಗೊಳಿಸುವ ಗೋಜಿಗೆ ಗ್ರಾ.ಪಂನವ ರಾಗಲಿ ಅಥವಾ ಅಧಿಕಾರಗಿಳಾಗಲಿ ಹೋಗಿಲ್ಲ. ಹೀಗಾಗಿ ವಿದ್ಯಾರ್ಥಿಗಳೇ ಶಾಲೆಗೆ ಬರುವಾಗ ಮನೆಯಿಂದ ನೀರು ತೆಗೆದುಕೊಂಡು ಬರುವಂತಾಗಿದೆ.

‘ಶಾಲಾ ಮಕ್ಕಳಿಗೆ ನೀರಿನ ಮೂಲವೇ ಈ ಕೊಳವೆ ಬಾವಿಯಾಗಿತ್ತು. ಈಗ ಅದೇ ಕೆಟ್ಟು ನಿಂತಿದ್ದರಿಂದ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆ ದಿಕ್ಕು ತೋಚದಂತಾಗಿದೆ. ಶಾಲಾ ಪಕ್ಕದಲ್ಲೇ ಜೆಜೆಎಂ ಕೆಲಸ ನಡೆದಿದ್ದರಿಂದ ಮಕ್ಕಳೆಲ್ಲ ಅಲ್ಲಿಯೇ ಹೋಗಿ ನೀರು ಕುಡಿದು ಬರುತ್ತಿದ್ದಾರೆ. ಅವರು ಕೆಲಸ ಮುಗಿಸಿ ಹೋದರೆ ಮಕ್ಕಳಿಗೆ ಕುಡಿಯುವ ನೀರು ಇಲ್ಲದಂತಾಗುತ್ತದೆ. ಗ್ರಾ.ಪಂ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಬಾಯಾರಿಕೆಯಾದಾಗ ಮಕ್ಕಳು ಕೆಟ್ಟು ನಿಂತ ಕೊಳವೆ ಬಾವಿ ಸುತ್ತ ನಿಂತು ಮತ್ತೆ ನೀರು ಹುಡುಕುವ ಪ್ರಯತ್ನ ಮಾಡುತ್ತಾರೆ. ಆದರೆ ನೀರು ಬರದೇ ನಿರಾಶರಾಗಿ ತರಗತಿಗಳಿಗೆ ವಾಪಾಸಾಗುತ್ತಾರೆ.

ಶಾಲಾ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಆದರೆ ದುರಸ್ತಿ ನೆಪದಲ್ಲಿ ಬಿರುಕು ಬಿಟ್ಟಿರುವ ಗೋಡೆಗಳಿಗೆ ತೇಪೆ ಹಾಕಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು, ಶಿಕ್ಷಕರು ಭಯದಲ್ಲೇ ಶಾಲೆಗೆ ಬರುವಂತಾಗಿದೆ.

ಕೊಳವೆಬಾವಿ ದುರಸ್ತಿಗೆ ತಿಳಿಸಿದರೂ ಪಂಚಾಯಿತಿ ಅವರು ಗಮನ ಹರಿಸುತ್ತಿಲ್ಲ. ಶಾಲೆಗೆ ಹೊಸ ಕೊಳವೆ ಬಾವಿ ಬೇಕಾಗಿದೆ. ನಮಗೂ ಮಕ್ಕಳಿಗೂ ನೀರಿಲ್ಲದಂತಾಗಿದೆ. ಇದರಿಂದ ಪಾಠ ಮಾಡಲು ಸಮಸ್ಯೆಯಾಗುತ್ತಿದೆ

-ಮಲ್ಲಿಕಾರ್ಜುನ ಕೋಣಸಿರಸಿಗಿ, ಮುಖ್ಯಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT