ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಸೂಚಿಸಿದ್ದೇವೆ, ಪಟ್ಟಾಭಿಷೇಕ ಮಾಡಿಲ್ಲ: ಚಂದ್ರಗುಂಡ ಶಿವಾಚಾರ್ಯಯರ ಸ್ಪಷ್ಟನೆ

Last Updated 17 ಜುಲೈ 2021, 4:55 IST
ಅಕ್ಷರ ಗಾತ್ರ

ಕಲಬುರ್ಗಿ: ಕಾಳಗಿಯ ಸಂಸ್ಥಾನ ಹಿರೇಮಠದ ಉತ್ತರಾಧಿಕಾರಿಯನ್ನಾಗಿ ಮಾಡಲು 5 ವರ್ಷದ ಬಾಲಕ ನೀಲಕಂಠನ ಹೆಸರು ಸೂಚಿಸಿದ್ದೇವೆಯೇ ಹೊರತು ಪಟ್ಟಾಭಿಷೇಕ ಮಾಡಿಲ್ಲ ಎಂದು ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯಯರು ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದ ಪೀಠಾಧಿಪತಿ ಶಿವಬಸವ ಶಿವಾಚಾರ್ಯರು ಲಿಂಗೈಕ್ಯರಾಗಿದ್ದರಿಂದ ಅವರ ಸ್ಥಾನವನ್ನು ಖಾಲಿ ಬಿಡಬಾರದು ಎಂಬ ಉದ್ದೇಶದಿಂದ ಉತ್ತರಾಧಿಕಾರಿ ಹೆಸರು ಸೂಚಿಸಿದ್ದೇವೆ. ಪೀಠಾಧಿಪತಿಗಳ ವಂಶದವರನ್ನೇ ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಪರಂಪರೆಯಿದ್ದು, ಹೀಗಾಗಿ ಲಿಂಗೈಕ್ಯ ಶ್ರೀಗಳ ಪೂರ್ವಾಶ್ರಮದ ಸಹೋದರ ಗುರುನಂಜಯ್ಯ ಹಿರೇಮಠ ಅವರ ಮಗನ ಹೆಸರನ್ನು ಸೂಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಎಳೆತನದಲ್ಲಿ ಸಂಸ್ಕಾರ ನೀಡುವುದು ಸೂಕ್ತ ಹಾಗೂ ಸುಲಭ ಎಂಬ ಕಾರಣಕ್ಕಾಗಿ ಪಂಚಶಿವಾಚಾರ್ಯರ ಸಮ್ಮತಿ ಮೇರೆಗೆ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ. ನೇಮಕಗೊಂಡ ಉತ್ತರಾಧಿಕಾರಿಗಳಿಗೆಲ್ಲ ‍ಪಟ್ಟಾಭಿಷೇಕ ಮಾಡಲಾಗುತ್ತದೆ ಎಂದರ್ಥವಲ್ಲ. ಅವರಿಗೆ ವೈದಿಕ ಸಂಸ್ಕೃತಿ ಹಾಗೂ ಸಂಸ್ಕಾರ ನೀಡಿ ಯೋಗ್ಯ ಸನ್ಯಾಸಿಯಾಗಿ ತಯಾರು ಮಾಡಿದ ನಂತರ ಶಿವಾಚಾರ್ಯರಿಗೆ ಇರುವ ಎಲ್ಲ ಅರ್ಹತೆಗಳು ಇರುವುದನ್ನು ಖಚಿತಪಡಿಸಿಕೊಂಡ ಮೇಲೆ ಪಟ್ಟಾಭಿಷೇಕ ಮಾಡಲಾಗುತ್ತದೆ ಎಂದು ತಿಳಿಸಿದರು.

‘5 ವರ್ಷದ ಬಾಲಕನಿಗೆ ಪಟ್ಟಾಭಿಷೇಕ’ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿವೆ. ಅಲ್ಲದೆ ಉತ್ತರಾಧಿಕಾರಿಗೆ ನೀಲಕಂಠ ಶಿವಾಚಾರ್ಯರು ಎಂಬ ಪದಪ್ರಯೋಗ ಮಾಡಲಾಗುತ್ತಿದೆ. ಇದು ಸರಿಯಲ್ಲ. ಭಕ್ತರು ಇಂಥ ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಕೋರಿದರು.

ಶಾಂತಸೋಮನಾಥ ಶಿವಾಚಾರ್ಯರು, ಪ್ರಶಾಂತ ದೇವರು, ಮುಖಂಡರಾದ ಶಿವಶರಣಪ್ಪ ಕಮಲಾಪುರ ಹಾಗೂ ಶರಣಗೌಡ ಪೊಲೀಸ್ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT