ಮಂಗಳವಾರ, ಅಕ್ಟೋಬರ್ 19, 2021
24 °C
ರೈತ ಸಂಘಟನೆಗಳ ಒಕ್ಕೂಟ ‘ಸಂಯುಕ್ತ ಹೋರಾಟ–ಕರ್ನಾಟಕ ’ಸಂಘಟನೆ ಮುಖಂಡರಿಂದ ಪತ್ರಿಕಾಗೋಷ್ಠಿ

ಸೆಪ್ಟೆಂಬರ್ 27 ರಂದು ಕಲಬುರ್ಗಿ ಬಂದ್‌ಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಸತತ 10 ತಿಂಗಳಲ್ಲಿ ದೆಹಲಿಯ ಗಡಿಗಳಲ್ಲಿ ರೈತರು ಹೋರಾಟ ನಡೆಸುತ್ತಿದ್ದರೂ ಆ ಬಗ್ಗೆ ಉದಾಸೀನ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಇದೇ 27ರಂದು ‘ಕಲಬುರ್ಗಿ ಬಂದ್‌’ಗೆ ಕರೆ ನೀಡಲಾಗಿದೆ ಎಂದು ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಚ್‌.ವಿ. ದಿವಾಕರ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿ ಕಾಯ್ದೆಗಳ ರದ್ದತಿಯ ಬೇಡಿಕೆಯ ಜತೆಗೆ ಕನಿಷ್ಠ ಬೆಂಬಲ ಬೆಲೆ ಜಾರಿಗಾಗಿ, ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ವಿವಿಧ ರೈತ ಸಂಘಟನೆಗಳ ಒಕ್ಕೂಟವಾದ ‘ಸಂಯುಕ್ತ ಹೋರಾಟ–ಕರ್ನಾಟಕ’ ಸಂಘಟನೆಯ ನೇತೃತ್ವದಲ್ಲಿ ಬಂದ್ ನಡೆಯಲಿದ್ದು, ಜಿಲ್ಲೆಯಾದ್ಯಂತ ಈಗಾಗಲೇ ಪ್ರಚಾರ ಕಾರ್ಯ ನಡೆಸಲಾಗಿದೆ. ಎರಡು ಸಾವಿರಕ್ಕೂ ಅಧಿಕ ರೈತರು, ಮಹಿಳೆಯರು, ಯುವಜನರು ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

ವಿದ್ಯುತ್ ಮಸೂದೆಯನ್ನು ರದ್ದು ಮಾಡಬೇಕು ಹಾಗೂ ಕೃಷಿ ಉತ್ಪನ್ನಗಳ ಉತ್ಪಾದನೆಯ ವೆಚ್ಚದ ಮೇಲೆ ಶೇ 50ರಷ್ಟು ಲಾಭವನ್ನು ಖಾತರಿ ಮಾಡುವ ‘ಕನಿಷ್ಠ ಬೆಂಬಲ ಬೆಲೆ’ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಲಾಗುತ್ತದೆ ಎಂದು ಹೇಳಿದರು.

ಕೃಷಿ ಉತ್ಪಾದನೆಯ ಜೊತೆಗೆ ಕೃಷಿ ಮಾರುಕಟ್ಟೆಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಧಾರೆ ಎರೆಯಲು ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ, ಹೈನುಗಾರಿಕೆಯಲ್ಲಿ ತೊಡಗಿರುವ ಅಸಂಖ್ಯಾತ ರೈತರು, ಕೃಷಿ ಕೂಲಿಕಾರರು, ದಲಿತರು ಹಾಗೂ ಅಲ್ಪಸಂಖ್ಯಾತರ ಬದುಕು, ಆಹಾರ ಹಕ್ಕಿನ ಮೇಲಿನ ದಾಳಿ ನಡೆಸುತ್ತಿರುವ ಗೋಹತ್ಯೆ ನಿಷೇಧ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಲಾಗುತ್ತದೆ ಎಂದರು.

ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಸಂಚಾಲಕ ಎಸ್‌.ಆರ್. ಕೊಲ್ಲೂರ ಮಾತನಾಡಿ, ‘₹ 6 ಲಕ್ಷ ಕೋಟಿ ಮೊತ್ತದ ಆಸ್ತಿಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಖಾಸಗಿಯವರಿಗೆ ಪರಭಾರೆ ಮಾಡುತ್ತಿದೆ. ಇಷ್ಟೆಲ್ಲ ಮಾಡಿಯೂ ನಿರಂತರ ಬೆಲೆ ಏರಿಕೆ ಮಾಡುವ ಮೂಲಕ ನಿರಂತರ ಜನವಿರೋಧಿ ನೀತಿಗಳನ್ನು ಅನುಷ್ಠಾನಕ್ಕೆ ತರುತ್ತಿದೆ’ ಎಂದು ಹರಿಹಾಯ್ದರು

ಕರ್ನಾಟಕ ರಾಜ್ಯ ರೈತ ಸಂಘದ ಸಂಚಾಲಕ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಂದ್ರಪ್ಪ ತಂಬೆ, ಡಿಎಸ್‌ಎಸ್‌ (ಮಾವಳ್ಳಿ ಶಂಕರ್ ಬಣ) ಜಿಲ್ಲಾ ಸಂಚಾಲಕ ಅರ್ಜುನ ಗೊಬ್ಬೂರ, ಆರ್‌ಕೆಎಸ್‌ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್‌.ಬಿ. ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು